ಕಸ್ತೂರಿನಲ್ಲಿ ವಿಜೃಂಭಣೆಯ ಬಂಡಿಜಾತ್ರೆ
ಚಾಮರಾಜನಗರ

ಕಸ್ತೂರಿನಲ್ಲಿ ವಿಜೃಂಭಣೆಯ ಬಂಡಿಜಾತ್ರೆ

January 6, 2020

ಚಾಮರಾಜನಗರ, ಜ.5- ತಾಲೂಕಿನ ಕಸ್ತೂರು ಗ್ರಾಮದಲ್ಲಿ ಭಾನುವಾರ ಪ್ರಸಿದ್ಧ 16 ಹಳ್ಳಿಗಳ ದೊಡ್ಡಮ್ಮತಾಯಿ ಬಂಡಿ ಜಾತ್ರೆ ಹಾಗೂ ಚಾಮರಾಜನಗರ, ನಂಜನ ಗೂಡು ತಾಲೂಕಿನ 23 ಗ್ರಾಮಗಳಲ್ಲಿ ಹಬ್ಬ ಸಂಭ್ರಮದಿಂದ ಜರುಗಿತು.

ಜಾತ್ರೆ ಆಚರಿಸುವ ತಾಲೂಕಿನ ಮರಿ ಯಾಲ, ಕೆಲ್ಲಂಬಳ್ಳಿ, ಭೋಗಾಪುರ, ಬಸ ವನಪುರ, ಹೊನ್ನೇಗೌಡನಹುಂಡಿ, ಆನಹಳ್ಳಿ, ಮೂಕನಹಳ್ಳಿ, ಸಪ್ಪಯ್ಯನಪುರ, ಚಿಕ್ಕಹೊಮ್ಮ, ದೊಡ್ಡ ಹೊಮ್ಮ, ತೊರವಳ್ಳಿ, ಕಲ್ಲಹಳ್ಳಿ, ಮರಿಯಾಲದ ಹುಂಡಿ, ಹೆಗ್ಗವಾಡಿ, ಕರಡಿಮೋಳೆ, ಕಿರಗಸೂರು, ಹೆಗ್ಗವಾಡಿ ಪುರ, ಐತಾಳಪುರ, ಅಂಕಶಾಯನಪುರ, ದಾಸನೂರು ಸೇರಿದಂತೆ ಇತರೆ ಗ್ರಾಮಗಳ ಜನರು ಕಸ್ತೂರಿನ ಹೊರ ವಲಯದಲ್ಲಿ ರುವ ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ದೊಡ್ಡಮ್ಮ ತಾಯಿ ಮೂರ್ತಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದರು.

ಹೊಸ ಬಟ್ಟೆ ತೊಟ್ಟ ಮಕ್ಕಳು, ಮಹಿಳೆ ಹಾಗೂ ವೃದ್ಧರು ಅಲಂಕೃತ ಎತ್ತಿನಗಾಡಿ, ದ್ವಿಚಕ್ರ ವಾಹನಗಳು, ಆಟೋ, ಕಾರು ಗಳಲ್ಲಿ ಕಸ್ತೂರಿಗೆ ಆಗಮಿಸಿ ಜಾತ್ರೋತ್ಸವ ದಲ್ಲಿ ಪಾಲ್ಗೊಂಡರು. ದೊಡ್ಡಮ್ಮತಾಯಿ ಭಕ್ತರು ಪಂಜು ಹಿಡಿದು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಪಂಜು ಹರಕೆ ತೀರಿಸಿದರು. ಎತ್ತುಗಳು ಹಾಗೂ ಹಸುಗಳ ಕೊಂಬುಗಳಿಗೂ ಪಂಜುಕಟ್ಟಿ ಪ್ರದಕ್ಷಿಣೆ ಹಾಕಿಸಿದರು.

ನಂತರ ದೇವಾಲಯದ ಎದುರು ಧೂಪ ಹಾಕಿ ಭಕ್ತಿ ಪ್ರದರ್ಶಿಸಿದರು. 16 ಗ್ರಾಮಗಳ ಜನರು ತಮ್ಮ ಗ್ರಾಮಗಳಲ್ಲಿ ಬಂಡಿಗಳನ್ನು ಅಲಂಕರಿಸಿ ಪೂಜೆ ಸಲ್ಲಿಸಿ ಕಸ್ತೂರಿನ ದೊಡ್ಡಮ್ಮತಾಯಿ ದೇವಾಲಯಕ್ಕೆ ಕಳುಹಿಸಿಕೊಟ್ಟರು. ಬಣ್ಣದ ಬಟ್ಟೆ, ಕಾಗದ, ಹೂ ಹಾರ, ಎಳನೀರು, ಬಾಳೆ ಗೊನೆ, ಹೊಂಬಾಳೆಗಳಿಂದ ಶೃಂಗರಿಸಿದ ಕಸ್ತೂರಿನ 2, ಪುಟ್ಟೇಗೌಡನಹುಂಡಿಯ 1 ಬಂಡಿ ಗಳು ಮಧ್ಯಾಹ್ನದ ವೇಳೆಗೆ ದೇವಸ್ಥಾನದ ಮಂಟಪದ ಬಳಿಗೆ ಆಗಮಿಸಿದವು.

ಸಂಪ್ರದಾಯದಂತೆ ಮೊದಲು ಆಗಮಿಸಿದ ಕಸ್ತೂರಿನ ಅಲಂಕೃತ ಬಂಡಿಗೆ ಅದೇ ಗ್ರಾಮದ ಅರ್ಚಕ ನಂಜುಂಡಸ್ವಾಮಿ ಕುಟುಂಬದ ವರು ಪೂಜೆ ನೆರವೇರಿಸಿ ಈಡುಗಾಯಿ ಒಡೆದು ಚಾಲನೆ ನೀಡಿದರು. ನಂತರ ಬಂಡಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಸ್ವಗ್ರಾಮದತ್ತ ತೆರಳಿತು. ಬಳಿಕ ಇತರೆ ಗ್ರಾಮಗಳ ಬಂಡಿಗಳು ದೇವಾ ಲಯದ ಬಳಿಗೆ ಆಗಮಿಸಿ ಪೂಜೆ ಸಲ್ಲಿಸಿ ಸ್ವಗ್ರಾಮಗಳತ್ತ ತೆರಳಿದವು. ಜಾತ್ರೆಯಲ್ಲಿ ದೇಸಿ ಖಾದ್ಯ ಕಜ್ಜಾಯ ವಿಶೇಷವಾಗಿದ್ದು, ಎಲ್ಲೆಡೆ ಅವರ ಘಮಲು ಪಸರಿಸಿತ್ತು.

ಮಕ್ಕಳ ಕಲರವ: ಜಾತ್ರೆಯಲ್ಲಿ ದೊಡ್ಡಮ್ಮ ತಾಯಿಗೆ ಪೂಜೆ, ಪಂಜಿನ ಸೇವೆ ಒಂದೆಡೆ ಯಾದರೆ ಸೌಂದರ್ಯ ವರ್ಧಕ ಗಳು, ಮಕ್ಕಳ ಆಟಿಕೆಗಳು, ಐಸ್‍ಕ್ರೀಂ, ಕಜ್ಜಾಯ, ಚಕ್ಕುಲಿ, ನಿಪ್ಪಟ್ಟು ಹಾಗೂ ಸಿಹಿ ತಿಂಡಿ ತಿನಿಸು, ಮನೆ ಬಳಕೆ ವಸ್ತುಗಳ ವ್ಯಾಪಾರ ಜೋರಾಗಿತ್ತು. ಜಾತ್ರೆಗೆ ಬಂದಿ ಭಕ್ತರು ಮಕ್ಕಳಿಗೆ ಆಟಿಕೆಗಳನ್ನು ಕೊಡಿಸಿ ಖುಷಿ ಪಡಿಸಿದರು. ಮಕ್ಕಳು ಜೋಕಾಲಿ, ಮರದ ಕುದುರೆ ಸವಾರಿ ಮಾಡಿ ಆನಂದಿಸಿದರು.

Translate »