ಬಂಡಿಪುರ ಅಭಯಾರಣ್ಯದಲ್ಲಿ ರಾತ್ರಿ  ವಾಹನ ಸಂಚಾರ ನಿರ್ಬಂಧ ತೆರವಿಗೆ  ಕೇಂದ್ರದ ಮೂಲಕ ಕೇರಳ ಲಾಬಿ
ಮೈಸೂರು

ಬಂಡಿಪುರ ಅಭಯಾರಣ್ಯದಲ್ಲಿ ರಾತ್ರಿ  ವಾಹನ ಸಂಚಾರ ನಿರ್ಬಂಧ ತೆರವಿಗೆ  ಕೇಂದ್ರದ ಮೂಲಕ ಕೇರಳ ಲಾಬಿ

August 3, 2018

ಮೈಸೂರು: ವನ್ಯ ಜೀವಿಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಬಂಡಿಪುರ ಅಭಯಾರಣ್ಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಬಂಧಿಸಿದ್ದ ರಾತ್ರಿ ಸಂಚಾರವನ್ನು ಪುನರಾರಂಭಿಸುವಂತೆ ಕೇರಳ ಸರ್ಕಾರ ಮತ್ತೊಮ್ಮೆ ಲಾಬಿ ಆರಂಭಿಸಿದ್ದು, ಕೇಂದ್ರ ಸರ್ಕಾರದ ಮೂಲಕ ರಾತ್ರಿ ಸಂಚಾರ ನಿರ್ಬಂಧ ಸಡಿಲಗೊಳಿಸುವುದರೊಂದಿಗೆ ರಸ್ತೆ ಅಗಲೀಕರಣಕ್ಕೆ ಶಿಫಾರಸ್ಸು ಮಾಡಿಸಿ, ವನ್ಯಜೀವಿಗಳ ಹಿತವನ್ನು ಬಲಿ ಕೊಡುವ ಯತ್ನ ಮಾಡಿದೆ.

ನವದೆಹಲಿಯಲ್ಲಿ ಜು.17ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬಂಡಿಪುರ ಅಭಯಾರಣ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧಿಸಿರುವುದು ಕೇರಳದ ವಾಣಿಜ್ಯ ವಹಿವಾಟಿನ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ದೂರಿದ್ದಾರೆ. ರಾತ್ರಿ ಸಂಚಾರ ನಿರ್ಬಂಧ ರದ್ದು ಮಾಡುವುದರೊಂದಿಗೆ ಹೆದ್ದಾರಿಯನ್ನು ಅಗಲೀಕರಣ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಯಥಾಸ್ಥಿತಿ ಕಾಪಾಡುವಂತೆ ಬಲವಾಗಿ ಪ್ರತಿಪಾದಿಸಿದ್ದಾರೆ. ಆದರೆ ಜುಲೈ 21ರಂದು ಕೇಂದ್ರ ಭೂಸಾರಿಗೆ ಕಾರ್ಯದರ್ಶಿ ವೈ.ಎಸ್. ಮಲ್ಲಿಕ್ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಬಂಡಿಪುರ ಅರಣ್ಯದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (ಕೇರಳಕ್ಕೆ) 212 ಹಾಗೂ ರಾಷ್ಟ್ರೀಯ ಹೆದ್ದಾರಿ 67 (ಊಟಿ ರಸ್ತೆ)ಯಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧ ಸಡಿಲಿಸುವುದಾಗಿ ಕರ್ನಾಟಕ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರು ಭರವಸೆ ನೀಡಿದ್ದರು. ವಾರದಲ್ಲಿ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.

Translate »