ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು ಪ್ರಕರಣ :ಉಪ ಪ್ರಾಂಶುಪಾಲೆ ಸೇರಿ ಐವರ ವಿರುದ್ಧ ಕೊಲೆ ಕೇಸ್
ಕೊಡಗು, ಮೈಸೂರು

ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು ಪ್ರಕರಣ :ಉಪ ಪ್ರಾಂಶುಪಾಲೆ ಸೇರಿ ಐವರ ವಿರುದ್ಧ ಕೊಲೆ ಕೇಸ್

June 25, 2018

ಕುಶಾಲನಗರ: ಇಲ್ಲಿಗೆ ಸಮೀ ಪದ ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಅನು ಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈನಿಕ ಶಾಲೆಯ ಉಪ ಪ್ರಾಂಶುಪಾಲೆ ಸೇರಿದಂತೆ ಐವರ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.

ಸೈನಿಕ ಶಾಲೆಯ ಉಪ ಪ್ರಾಂಶುಪಾಲೆ ಸೀಮಾ ತ್ರಿಪಾಠಿ, ಕನ್ನಡ ಶಿಕ್ಷಕ ಮಂಜಪ್ಪ, ಕಂಪ್ಯೂಟರ್ ಶಿಕ್ಷಕ ಗೋವಿಂದರಾಜು, ವಾರ್ಡನ್ ಸುನೀಲ್ ಮತ್ತು ಮ್ಯಾಥ್ಯು ಅವರು ಗಳು ಆರೋಪಕ್ಕೆ ಗುರಿಯಾದವರಾಗಿದ್ದು, ಮೃತ ವಿದ್ಯಾರ್ಥಿ ಎನ್.ಪಿ.ಚಿಂಗಪ್ಪ ತಂದೆ ಸೈನಿಕ ಶಾಲೆಯ ಹಾಕಿ ಕೋಚ್ ಎನ್.ಟಿ. ಪೂವಯ್ಯ ಪೊಲೀಸರಿಗೆ ದೂರು ನೀಡಿದವರು.

ತಮ್ಮ ಪುತ್ರ ಚಿಂಗಪ್ಪ ಸೈನಿಕ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶನಿ ವಾರ ಎಂದಿನಂತೆ ಆತ ಶಾಲೆಗೆ ಹೋಗಿದ್ದ. ನಾನೂ ಸಹ ಶಾಲೆಯಲ್ಲಿ ಹಾಕಿ ಕೋಚಿಂಗ್ ಮಾಡುತ್ತಿದ್ದೆ. ಸಂಜೆ 6 ಗಂಟೆ ಸಮಯ ದಲ್ಲಿ ದಾದಾ ಮಾಸ್ಟರ್ ನನ್ನನ್ನು ಕರೆದು, `ಮಧ್ಯಾಹ್ನ 2 ಗಂಟೆಯಿಂದ ನಿನ್ನ ಮಗ ಚಿಂಗಪ್ಪ ಕಾಣಿಸುತ್ತಿಲ್ಲ. ನೀನು ಹೊರಗಡೆ ಹೋಗಿ ಹುಡುಕಿಕೊಂಡು ಬಾ’ ಎಂದು ನನ್ನನ್ನು ಶಾಲೆಯಿಂದ ಹೊರಗೆ ಕಳುಹಿಸಿ ದರು. ರಾತ್ರಿ 7.45 ಗಂಟೆಗೆ ನನ್ನ ಮಗನ ಶವ ದೊಂದಿಗೆ ಚಾಲಕ ಜನಾರ್ಧನ್ ಮತ್ತು ಸುನೀಲ್ ಕುಮಾರ್ ಎಂಬುವರು ಸೈನಿಕ ಶಾಲೆಯ ಆಂಬ್ಯುಲೆನ್ಸ್ (ಕೆಎ-12 ಎ-7710) ಅನ್ನು ನಿಲ್ಲಿಸಿಕೊಂಡಿದ್ದರು. ಮಗ ಎಲ್ಲೂ ಸಿಗದ ಕಾರಣ ವಾಪಸ್ ಶಾಲೆಗೆ ಹೋದಾಗ ನಿನ್ನ ಮಗನ ಶವ ಶಾಲೆಯ ಬಾತ್‍ರೂಂ ನಲ್ಲಿ ಸಿಕ್ಕಿದ್ದು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.

ನಾನು ಆಸ್ಪತ್ರೆಯಲ್ಲಿ ಬಂದು ನೋಡಿ ದಾಗ ಸೈನಿಕ ಶಾಲೆಯ ಯಾವುದೇ ಸಿಬ್ಬಂದಿ ಅಲ್ಲಿ ಇರಲಿಲ್ಲ. ಶಾಲೆಯ ಕನ್ನಡ ಮಾಸ್ಟರ್ ಮಂಜಪ್ಪ, ಕಂಪ್ಯೂಟರ್ ಟೀಚರ್ ಗೋವಿಂದ ರಾಜು, ಎಓ ಮ್ಯಾಥ್ಯು, ಉಪ ಪ್ರಾಂಶು ಪಾಲೆ ಸೀಮಾ ಮತ್ತು ವಾರ್ಡನ್ ಸುನೀಲ್ ಅವರು ನನ್ನ ಮಗನನ್ನು ಕೊಲೆ ಮಾಡಿ, ನನ್ನನ್ನು ಶಾಲೆಯ ಹೊರಗೆ ಕಳುಹಿಸಿ, ಮಗ ಸತ್ತಿರುವ ವಿಚಾರವನ್ನು ನನಗಾಗಲೀ, ಪೊಲೀ ಸರಿಗಾಗಲೀ ತಿಳಿಸದೇ ಶವವನ್ನು ಆಸ್ಪತ್ರೆ ಬಳಿ ಬಿಟ್ಟು ಹೋಗಿದ್ದಾರೆ. ಇವರುಗಳು ನನ್ನ ಮಗನಿಗೆ ಬಹಳ ದಿನಗಳಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂಬುದನ್ನು ಮಗ ನನಗೆ ಹೇಳಿದ್ದ ಎಂದು ಹಾಕಿ ಕೋಚ್ ಎನ್.ಟಿ.ಪೂವಯ್ಯ ಹೇಳಿದ ದೂರನ್ನು ಕುಶಾಲನಗರ ಪೊಲೀಸರು ದಾಖ ಲಿಸಿಕೊಂಡಿದ್ದಾರೆ. ಸೈನಿಕ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದವಾಗಿ

ಸಾವನ್ನಪ್ಪಿರುವ ವಿಷಯ ತಿಳಿಯುತ್ತಿದ್ದಂತೆಯೇ ಶನಿವಾರ ರಾತ್ರಿ ನೂರಾರು ಸಂಖ್ಯೆಯ ಗ್ರಾಮಸ್ಥರು ಕೂಡಿಗೆ ಆಸ್ಪತ್ರೆ ಬಳಿ ಜಮಾಯಿಸಿ, ಸೈನಿಕ ಶಾಲೆಯ ಪ್ರಾಂಶುಪಾಲ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಶಾಲೆಯ ಪ್ರಾಂಶುಪಾಲರು ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕೆಂದು ಆಗ್ರಹಿಸಿದ್ದರು. ಆ ವೇಳೆ ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ಮುರಳೀಧರ್, ಸಬ್ ಇನ್ಸ್‍ಪೆಕ್ಟರ್‍ಗಳಾದ ನವೀನ್‍ಗೌಡ ಮತ್ತು ಜಗದೀಶ್ ಅವರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಮೃತ ದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು.

ಮಡಿಕೇರಿಯಲ್ಲಿ ಪ್ರತಿಭಟನೆ: ವಿದ್ಯಾರ್ಥಿ ಚಿಂಗಪ್ಪನನ್ನು ಕೊಲೆ ಮಾಡಲಾಗಿದ್ದು, ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿ ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ವಿದ್ಯಾರ್ಥಿಯ ಸಂಬಂಧಿಕರು ಇಂದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರಾದರೂ, ಅದು ಸಫಲವಾಗಲಿಲ್ಲ. ನಂತರ ಜಿಲ್ಲಾ ಎಸ್ಪಿ ಪಿ.ರಾಜೇಂದ್ರ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣ , ವೀಣಾ ಅಚ್ಚಯ್ಯ ಆಗಮಿಸಿ ಪೋಷಕರಿಗೆ ಸಾಂತ್ವನ ಹೇಳಿ ಸಂಬಂಧಿಕರನ್ನು ಸಮಾಧಾನಪಡಿಸಿದರು.

ಈ ವೇಳೆ ಸುನೀಲ್ ಸುಬ್ರಮಣಿ ಮಾತನಾಡಿ, ಈ ಘಟನೆ ಕುರಿತು ಸಂಸದ ಪ್ರತಾಪ್ ಸಿಂಹ ಅವರಿಗೆ ಮಾಹಿತಿ ನೀಡಿದ್ದೇನೆ. ಅವರು ಕೇಂದ್ರ ಸಚಿವರನ್ನು ಸಂಪರ್ಕಿಸಿ ಪ್ರಕರಣದ ಸಮರ್ಪಕ ತನಿಖೆ ನಡೆಸಲು ಸೂಚಿಸುವಂತೆ ಕೋರಿದ್ದಾರೆ ಎಂದರು. ಅದೇ ವೇಳೆ ಪಾರದರ್ಶಕ ತನಿಖೆ ನಡೆಸುವ ಭರವಸೆಯನ್ನು ಎಸ್.ಪಿ.ರಾಜೇಂದ್ರ ಪ್ರಸಾದ್ ನೀಡಿದರು. ನಂತರ ಪೋಷಕರು ಮೃತ ದೇಹವನ್ನು ತಮ್ಮ ಸ್ವಗ್ರಾಮ ಮಾದಾಪುರಕ್ಕೆ ಕೊಂಡೊಯ್ದರು.

ಶಾಲೆ ನೀಡಿರುವ ಪತ್ರಿಕಾ ಹೇಳಿಕೆ ಹೀಗಿದೆ…

ದಿನಾಂಕ:23:06:2018ರಂದು ಸಂಜೆ 08:00ಗಂಟೆ ಸಮಯದಲ್ಲಿ ಸೈನಿಕ ಶಾಲೆ ಕೊಡಗಿನ 9ನೇ ತರಗತಿ ವಿದ್ಯಾರ್ಥಿಯಾದ ಕೆಡೆಟ್ ಚಿಂಗಪ್ಪ ಎನ್.ಪಿ, ಕ್ರಮ ಸಂಖ್ಯೆ 739 ಇವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಸಾವನಪ್ಪಿದ್ದಾನೆಂದು ದೃಢಪಟ್ಟಿತು. ಇದಕ್ಕೂ ಮೊದಲು ಪ್ರಸ್ತುತ ವಿದ್ಯಾರ್ಥಿ ಮಾಡಿದ ತಪ್ಪನ್ನು ಕುರಿತು ಸಂಬಂಧಿಸಿದ ಶಿಕ್ಷಕರಿಂದ ಕೌನ್ಸಿಲಿಂಗ್ ಮಾಡಲಾಗಿತ್ತು. ತದ ನಂತರ ಸಂಜೆ ಸದರಿ ವಿದ್ಯಾರ್ಥಿಯು ಮೂರ್ಛಾವಸ್ಥೆಯಲ್ಲಿ ಶಾಲೆಯ ವಿದ್ಯಾರ್ಥಿಗಳ ಶೌಚಾಲಯದಲ್ಲಿ ಕಂಡು ಬಂದಿದ್ದು ತಕ್ಷಣವೇ ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಪೊಲೀಸ್ ತನಿಖೆಯು ಪ್ರಗತಿಯಲ್ಲಿದ್ದು, ಶಾಲೆಯು ತನಿಖೆಗೆ ಎಲ್ಲಾ ರೀತಿಯಲ್ಲಿ ಸಹಕರಿಸುತ್ತಿದೆ.

Translate »