ಇಂದು ಚಾಮುಂಡೇಶ್ವರಿ  ದೇವಸ್ಥಾನದ ಕುಂಭಾಭಿಷೇಕ
ಮೈಸೂರು

ಇಂದು ಚಾಮುಂಡೇಶ್ವರಿ  ದೇವಸ್ಥಾನದ ಕುಂಭಾಭಿಷೇಕ

June 25, 2018

ಮೈಸೂರು: ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವೂ ಆಗಿರುವ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾ ಲಯದಲ್ಲಿ ಭಾನುವಾರ ಕುಂಭಾಭಿಷೇಕ ಹಾಗೂ ಜೀರ್ಣೋದ್ಧಾರ ಗೊಂಡ ಗೋಪುರದ ಕಳಸಾರೋಹಣದ ವಿವಿಧ ಧಾರ್ಮಿಕ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿದ್ದು, ನಾಳೆ (ಜೂ.25) ಬೆಳಿಗ್ಗೆ 9.55ಕ್ಕೆ ರಾಜಗೋಪುರ ಹಾಗೂ ವಿಮಾನ ಗೋಪುರದ ಜೀರ್ಣೋದ್ಧಾರ ಕುಂಭಾಭಿಷೇಕ ಜರುಗಲಿದೆ. ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಯ ದೇವಾ ಲಯದ ಗೋಪುರದಲ್ಲಿರುವ ವಿಗ್ರಹಗಳು ಭಿನ್ನವಾಗಿದ್ದವು. ಈ ಹಿನ್ನೆಲೆ ಯಲ್ಲಿ ಕಳೆದ ಒಂದು ವರ್ಷದಿಂದ ಗೋಪುರದಲ್ಲಿದ್ದ ವಿಗ್ರಹಗಳ ದುರಸ್ತಿ ಕಾಮಗಾರಿ ಹಾಗೂ ವಿವಿಧೆಡೆ ಬಿರುಕು ಬಿಟ್ಟಿದ್ದ ಗೋಪುರದ ಗೋಡೆಗಳನ್ನು ದುರಸ್ತಿ ಮಾಡುವ ಕಾರ್ಯ ನಡೆಯುತ್ತಿತ್ತು. ತಮಿಳು ನಾಡು ಮೂಲದ ಸುಮಾರು 70 ಮಂದಿ ಕಾರ್ಮಿಕರು ಗೋಪುರ ಹಾಗೂ ವಿಗ್ರಹದ ದುರಸ್ತಿ ಮಾಡುವ ಕಾರ್ಯವನ್ನು ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಕಳೆದ ತಿಂಗಳು ಪೂರ್ಣಗೊಂಡಿದ್ದ ರಿಂದ ಜೀರ್ಣೋದ್ಧಾರವಾದ ಗೋಪುರದ ಕಳಸಾರೋಹಣ ಕಾರ್ಯ ಕ್ರಮ ಜೂ.23ರಿಂದ ಆರಂಭವಾಗಿದ್ದು, ಜೂ.25ಕ್ಕೆ ಸಮಾಪ್ತಿಯಾಗ ಲಿದೆ.

ಕಳಸಾರೋಹಣದ ಹಿನ್ನೆಲೆಯಲ್ಲಿಶನಿವಾರ ಸಂಜೆ 6 ಗಂಟೆಯಿಂದ ಮಂಗಳವಾದ್ಯದೊಡನೆ ಆಲಯದ ಪ್ರವೇಶ, ಅನುಜ್ಞೆ, ಗಣಪತಿ ಪೂಜೆ, ಋತ್ವಿಕ್ ವರುಣ, ಪ್ರವೇಶ ಬಲಿ, ರಕ್ಷೋಘ್ನ ಪೂಜೆ, ರಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಹೋಮ, ಪರ್ಯಗ್ನಿಕರಣ ಮತ್ತು ಅಂಕುರಾರ್ಪಣ ನೆರವೇರಿಸಲಾಗಿತ್ತು. ಭಾನುವಾರವಾದ ಇಂದು ಬೆಳಿಗ್ಗೆ 8 ಗಂಟೆಗೆ ಚಾಮುಂಡೇಶ್ವರಿ ದೇವಾಲಯದ ಆವರಣದ ಯಾಗಶಾಲಾ ಪ್ರವೇಶ ನಡೆಯಿತು. ನಂತರ ಗಣಪತಿ ಪೂಜೆ, ಪುಣ್ಯಾಹ, ಬಿಂಬ ಶುದ್ಧಿ, ನೇತ್ರೋನ್ಮಿಲನ ರಕ್ಷಾ ಬಂಧನ, ಜಲಾಧಿವಾಸ ನೆರವೇರಿಸಿ ಕಳಸ ಸ್ಥಾಪನೆ ಮಾಡಲಾಯಿತು. ನಂತರ ಅಗ್ನಿ ಪ್ರತಿಷ್ಠೆ, ಜಪ, ಪಾರಾಯಣ, ಹೋಮಗಳನ್ನು ನೆರವೇರಿಸಿದ ಬಳಿಕ ಮಹಾಮಂಗಳಾರತಿ ಮಾಡಲಾಯಿತು. ಸಂಜೆ ಕಳಸ ಪೂಜೆ, ಹೋಮ, ಶಯ್ಯಾದಿವಾಸ, ಅಷ್ಟಾವಧಾನ ಸೇವೆ, ಸ್ಪರ್ಶ ಹೋಮ, ರತ್ನಾನ್ಯಾಸ ನಡೆಯಿತು. ನಾಳೆ ಮುಂಜಾನೆಯಿಂದಲೇ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಪ್ರಾತಃಕಾಲದಲ್ಲಿ ಜೀವನ್ಯಾಸ, ತತ್ವನ್ಯಾಸ, ಪ್ರಾಣ ಪ್ರತಿಷ್ಠೆ, ಮೂಲ ಹೋಮ ಮಾಡಿ ಕಳಸಾರ್ಚನೆ, ನಾಡಿ ಸಂಧಾನ, ಕಲಾತತ್ವ ಹೋಮ, ಪೂರ್ಣಾಹುತಿ, ದಶ ದಾನ ಕುಂಭೋದ್ವಾಸನೆ, ಕುಂಭಾಭಿಷೇಕ ನೆರವೇರಿಸಿ ಮಹಾಮಂಗಳಾರತಿ ಮಾಡಲಾಗುತ್ತದೆ. ನಂತರ ಆಚಾರ್ಯಾದಿ ಋತ್ವಿಕ್ ಪೂಜೆ, ಯಾಗ ಫಲ ಸ್ವೀಕಾರ ಮಾಡಿ ಪ್ರಸಾದ ವಿನಿಯೋಗಿಸಲಾಗುತ್ತದೆ.

ಬೆಳಿಗ್ಗೆ 9.55ರಿಂದ 10.10ರವರೆಗೆ ಸಲ್ಲುವ ಸಿಂಹ ಲಗ್ನದಲ್ಲಿ ರಾಜಗೋಪುರ, ವಿಮಾನ ಗೋಪುರ ಹಾಗೂ ಧ್ವಜ ಸ್ತಂಭಗಳ ಜೀರ್ಣೋದ್ಧಾರ, ಕುಂಭಾಭಿಷೇಕ ನೆರವೇರಲಿದೆ. ಈ ಕಾರ್ಯಕ್ರಮ ದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆಯಲಿದ್ದಾರೆ.

Translate »