ಉಂಡುವಾಡಿಯಿಂದ ಮೈಸೂರಿಗೆ ಕುಡಿಯುವ ನೀರು ಸರಬರಾಜು ಯೋಜನೆ ಬಜೆಟ್‍ನಲ್ಲಿ ಪ್ರಸ್ತಾಪ ಸಾಧ್ಯತೆ
ಮೈಸೂರು

ಉಂಡುವಾಡಿಯಿಂದ ಮೈಸೂರಿಗೆ ಕುಡಿಯುವ ನೀರು ಸರಬರಾಜು ಯೋಜನೆ ಬಜೆಟ್‍ನಲ್ಲಿ ಪ್ರಸ್ತಾಪ ಸಾಧ್ಯತೆ

June 25, 2018

ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಅಧಿಕಾರಿಗಳ ಸಭೆ

ಮೈಸೂರು: ಮೈಸೂರು ನಗರ ಸೇರಿದಂತೆ ಸಮೀಪದ ಹಲವು ಗ್ರಾಮ ಗಳಿಗೆ ಕುಡಿಯುವ ನೀರು ಪೂರೈಸುವ ಉಂಡುವಾಡಿ ಬಳಿಯ ಉದ್ದೇ ಶಿತ ಯೋಜನೆ ಯನ್ನು ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಸೇರ್ಪಡೆಮಾಡಿ, ಅನುದಾನ ಕಾಯ್ದಿರಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಇಂದು ಸಂಬಂಧಪಟ್ಟ ಅಧಿ ಕಾರಿಗಳು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಹಾತ್ವಾಕಾಂಕ್ಷೆಯ ಯೋಜನೆ ಅನುಷ್ಠಾನಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು, ಹಿಂದಿನ ಕಾಂಗ್ರೆಸ್ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದರು. ಇದೀಗ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟದ ಸದಸ್ಯರೂ ಆಗಿರುವ ಜಿಟಿಡಿ, ಈ ಬಾರಿಯ ಬಜೆಟ್ ನಲ್ಲಿ ಅವಕಾಶ ನೀಡುವಂತೆ ಒತ್ತಾಯಿಸಿ ದ್ದಲ್ಲದೆ, ಇದಕ್ಕೆ ಪೂರಕವಾದ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೂ ತಿಳಿಸಿದ್ದರು.

ಹೀಗಾಗಿ ಮೈಸೂರಿನ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವಲಯ ಕಚೇರಿಗಳ ಸಂಕೀರ್ಣ ದಲ್ಲಿ ಮುಖ್ಯ ಇಂಜಿನಿಯರ್ ಜಯರಾಮ್, ಜೆಎನ್ ನರ್ಮ್ ಕಾರ್ಯನಿರ್ವಾಹಕ ಇಂಜಿ ನಿಯರ್ ಪ್ರಸನ್ನಮೂರ್ತಿ, ಪಿಆರ್‍ಇಡಿ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಕುಮಾರ್, ನೀರು ಸರಬರಾಜು ವಿಭಾಗದ ಕಾರ್ಯನಿರ್ವಾಹಕ ಇಂಜಿನಿ ಯರ್ ಆನಂದ್ ಇನ್ನಿತರ ಅಧಿಕಾರಿಗಳು ಸಭೆ ನಡೆಸಿ, ಉಂಡುವಾಡಿ ಬಳಿಯ ಕುಡಿ ಯುವ ನೀರಿನ ಯೋಜನೆಗೆ ಬಜೆಟ್‍ನಲ್ಲಿ ಅವಕಾಶ ನೀಡಿದರೆ, ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಉಂಡುವಾಡಿ ಬಳಿ ಸಮಗ್ರ ನೀರು ಸರಬ ರಾಜು ಯೋಜನೆ ಅನುಷ್ಠಾನಕ್ಕೆ 540 ಕೋಟಿ ರೂ. ಅಂದಾಜಿನ ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ, 2015ರ ಫೆಬ್ರವರಿ ತಿಂಗಳಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಲಾಗಿದೆ. ಸರ್ಕಾರದ ಮುಂದಿನ ಬಜೆಟ್‍ನಲ್ಲಿ ಯೋಜನೆಗೆ ಪ್ರಾವಿಷನ್ ನೀಡುವ ಸಾಧ್ಯತೆಯಿದೆ. ನಂತರ ಪರಿಷ್ಕøತ ಅಂದಾಜು ಮೊತ್ತವನ್ನು ಸಿದ್ಧಪಡಿಸಿ, ಆಡಳಿತಾತ್ಮಕ ಅನುಮೋದನೆ ಪಡೆಯಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೈಸೂರು ನಗರ ಸೇರಿದಂತೆ ಸುಮಾರು 90ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಮರುಜೀವ ಪಡೆದಂತಾಗಿದೆ. ಕೆಆರ್‍ಎಸ್ ಅಣೆಕಟ್ಟೆಯಿಂದ ಸುಮಾರು 2 ಕಿಮೀ ಮೇಲ್ಭಾಗದಲ್ಲಿರುವ ಹಳೇ ಉಂಡುವಾಡಿಯಲ್ಲಿ ಬರದಲ್ಲೂ ನೀರಿರುವ ಕಾರಣಕ್ಕೆ ಇಲ್ಲಿ ಮೂಲಸ್ಥಾವರ ನಿರ್ಮಿಸಿ, ಇಲ್ಲಿಂದ ಏರು ಕೊಳವೆ ಮೂಲಕ ಸುಮಾರು 3 ಕಿಮೀ ದೂರದಲ್ಲಿರುವ 20 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವ ಜಲ ಶುದ್ಧೀಕರಣ ಘಟಕಕ್ಕೆ ತಲುಪಿಸಿ. ನಂತರ ಜಲ ಸಂಗ್ರಹಾಗಾರ, ಯಂತ್ರಾಗಾರದ ಮೂಲಕ ಫೀಡರ್ ಕೊಳವೆಗಳ ಮೂಲಕ ಸಿಎಸ್‍ಆರ್, ಎಚ್‍ಎಲ್‍ಆರ್, ಯಾದವಗಿರಿ, ದೇವನೂರು ಹಾಗೂ ವಿಜಯನಗರ ಸಂಗ್ರಹಾಗಾರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ 150 ಎಂಎಲ್‍ಡಿ ಸೇರಿದಂತೆ ಒಟ್ಟು 300 ಎಂಎಲ್‍ಡಿ ನೀರು ಪೂರೈಕೆ ಮಾಡಬಹುದಾದ ಈ ಯೋಜನೆಯ ಪ್ರಸ್ತಾವನೆ 3 ವರ್ಷದಿಂದ ಸರ್ಕಾರದಲ್ಲಿದ್ದು, ಬಜೆಟ್‍ನಲ್ಲಿ ಪ್ರಾವಿಷನ್ ಮಾಡಿದರೆ, ಅನುಷ್ಠಾನಕ್ಕೆ ಬರಲಿದೆ. 2013ರಲ್ಲೇ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸುಮಾರು 327.50 ಕೋಟಿ ರೂ. ವೆಚ್ಚದ ಸಮಗ್ರ ಕುಡಿವ ನೀರು ಸರಬರಾಜು ಯೋಜನೆ ಸಿದ್ಧಪಡಿಸಿತ್ತು. ಕೇಂದ್ರದ ನರ್ಮ್ ಯೋಜನೆ ಅನುದಾನದಿಂದ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸಬೇಕಿತ್ತು. ಆದರೆ ಅಧಿಕಾರಿಗಳು ತರಾತುರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಈ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ಮಾಡುವಷ್ಟರಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ ಕಾರಣ ಕೇಂದ್ರದಿಂದ ಅನುದಾನ ಕೈತಪ್ಪಿತು. ನಂತರ 2015ರಲ್ಲಿ ಯೋಜನೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸದ್ಯ ಅಮೃತ್ ಯೋಜನೆಯಡಿ ಕೇಂದ್ರದಿಂದ ಗರಿಷ್ಠ 200 ಕೋಟಿ ರೂ. ಅನುದಾನ ದೊರಕುವ ಅವಕಾಶ ಬಿಟ್ಟರೆ ಬೇರ್ಯಾವ ಯೋಜನೆಯಿಲ್ಲ. ಆದ್ದರಿಂದ ರಾಜ್ಯ ಸರ್ಕಾರವೇ ಅನುದಾನ ನೀಡಬೇಕಿದೆ.

Translate »