ಇಸ್ಕಾನ್‍ನಿಂದ ಅದ್ಧೂರಿ ಕೃಷ್ಣ-ಬಲರಾಮ ರಥಯಾತ್ರೆ
ಮೈಸೂರು

ಇಸ್ಕಾನ್‍ನಿಂದ ಅದ್ಧೂರಿ ಕೃಷ್ಣ-ಬಲರಾಮ ರಥಯಾತ್ರೆ

January 12, 2020

ಮೈಸೂರು,ಜ.11(ಎಂಕೆ)-ಮೈಸೂರಿನ ಇಸ್ಕಾನ್ ದೇವಾ ಲಯದ ವತಿಯಿಂದ ಆಯೋಜಿಸಿದ್ದ 22ನೇ ಶ್ರೀ ಶ್ರೀ ಕೃಷ್ಣ ಬಲರಾಮ ರಥಯಾತ್ರೆ ಭಕ್ತಿ-ಭಾವದಿಂದ ನೆರವೇರಿತು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಿಂದ ಆರಂಭವಾದ ರಥಯಾತ್ರೆ ಚಾಮರಾಜ ವೃತ್ತ, ದೊಡ್ಡ ಗಡಿಯಾರ, ಗಾಂಧಿ ವೃತ್ತ ಮೂಲಕ ಹಳೇ ಬ್ಯಾಂಕ್ ರಸ್ತೆಯಲ್ಲಿ ಸಾಗಿ ಸಯ್ಯಾಜಿರಾವ್ ರಸ್ತೆ ಮೂಲಕ ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ ಮಾರ್ಗವಾಗಿ ಸಾಗಿ ನಾರಾಯಣ ಶಾಸ್ತ್ರಿ ರಸ್ತೆಯಿಂದ ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತದಲ್ಲಿ ಬಲಕ್ಕೆ ತಿರುಗಿ ಜೆಎಲ್‍ಬಿ ರಸ್ತೆ ಮಾರ್ಗವಾಗಿ ಆರ್‍ಟಿಒ ವೃತ್ತ, ಬಲ್ಲಾಳ್ ವೃತ್ತದಿಂದ ನ್ಯೂ ಕಾಂತರಾಜ ಅರಸ್ ರಸ್ತೆ ಮಾರ್ಗವಾಗಿ ಸಾಗಿ ರೈಲ್ವೆ ಮೇಲ್ಸೆತುವೆ ಹಾದು ಜಯನಗರ 2ನೇ ಮುಖ್ಯ ರಸ್ತೆ ಮೂಲಕ ಇಸ್ಕಾನ್ ದೇವಾಲಯ ತಲುಪಿತು.

ರಥಯಾತ್ರೆಯ ಮಾರ್ಗದುದ್ದಕ್ಕೂ ‘ಹರೇ ರಾಮ ಹರೇ ಕೃಷ್ಣ’ ಎಂದು ಪಠಿಸಿದ ನೂರಾರು ಶ್ರೀ ಕೃಷ್ಣನ ಭಕ್ತರು ಭಕ್ತಿ ಮೆರೆದರು. ಇದಕ್ಕೂ ಮುನ್ನ ರಥಯಾತ್ರೆಯನ್ನು ಉದ್ಘಾಟಿಸಿದ ಮಾಜಿ ಶಾಸಕ ಗೋ.ಮಧುಸೂದನ್ ಮಾತ ನಾಡಿ, ಮೈಸೂರಿನಲ್ಲಿ ಕೃಷ್ಣ ಭವ್ಯ ಮಂದಿರವನ್ನು ಕಟ್ಟುವ ಸಂಕಲ್ಪ ಸಾಕಾರಗೊಂಡಿದ್ದು, ಮುಂದಿನ ವರ್ಷದ ಈ ವೇಳೆ ದೇವಸ್ಥಾನ ಒಂದು ನಿರ್ಮಾಣವಾಗಿರಲಿದೆ ಎಂದರು.

ಇಂದು ದೇಶದಲ್ಲಿ ದ್ವೇಷದ ವಾತಾವರಣ ನಿರ್ಮಾಣ ವಾಗಿದೆ. ಜಾತಿ, ಧರ್ಮದ ಆಧಾರದಲ್ಲಿ ದೇಶವನ್ನು ವಿಂಗ ಡಣೆ ಮಾಡಲು ಒಟ್ಟಿಗೆ ಪಿತೂರಿ ಮಾಡಲಾಗುತ್ತಿದೆ. ಬೇರೆ ಯಾವ ದೇಶದಲ್ಲಿ ಕೂಡ ಈ ರೀತಿಯಿಲ್ಲ. ಅಮೆರಿಕಾದಲ್ಲಿ ಯಾರನ್ನಾದರೂ ನೀನು ಯಾರು ಎಂದು ಕೇಳಿದರೆ, ನಾನು ಅಮೆರಿಕಾ ಪ್ರಜೆ ಎಂದು ಹೇಳುತ್ತಾರೆ. ಅದರಂತೆ ಜರ್ಮನ್ ಮತ್ತಿತರ ದೇಶಗಳಲ್ಲಿಯೂ ನಾನು ಈ ದೇಶದ ಪ್ರಜೆ ಎಂಬ ಮಾತುಗಳೇ ಕೇಳುತ್ತವೆ. ಆದರೆ, ಭಾರತದಲ್ಲಿ ಮಾತ್ರ ನಾನು ಎಂದು ಹೇಳಿಕೊಳ್ಳಲು ಕೆಲವರು ಹಿಂದೇಟು ಹಾಕುತ್ತಾರೆ. ದೇಶವನ್ನು ಒಡೆಯುವ ಶಕ್ತಿಗಳು ಒಟ್ಟಾಗಿ ನಿಂತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಪೌರತ್ವ ಕಾಯಿದೆಯನ್ನು ಅರ್ಥ ಮಾಡಿಕೊಳ್ಳದವರು ಇತರೆ ಸಾಮಾನ್ಯ ಜನರನ್ನು ಕಾಯಿದೆ ವಿರುದ್ಧ ಎತ್ತಿಕಟ್ಟುತ್ತಿ ದ್ದಾರೆ. ಪರಮಾತ್ಮ ಕೃಷ್ಣನು ತಾನು ಯಾವಾಗ ಭೂಮಿಗೆ ಬರಬೇಕು ಹೇಳಿದ್ದಾನೆ. ಅದರಂತೆ ದೇಶದಲ್ಲಿ ಎದ್ದಿರುವ ದ್ವೇಷ ವಾತಾವರಣವನ್ನು ಕಷ್ಣ ಪರಮಾತ್ಮ ತಿಳಿಯಾಗಿಸುತ್ತಾರೆ ಎಂದು ನಂಬಿಕೆ ಇದೆ ಎಂದರು.

ಕೃಷ್ಣ ಮತ್ತು ಭಾರತಕ್ಕೂ ಅವಿನಾಭಾವ ಸಂಬಂಧವಿದೆ. ಕೃಷ್ಣನಿಲ್ಲದೆ ಮಹಾಭಾರತವೇ ಇಲ್ಲ. ನಮ್ಮೆಲ್ಲರ ಬದುಕು, ಭವಿಷ್ಯ, ಎಲ್ಲವೂ ಕೃಷ್ಣನೇ. ದೇಶದ ನಾಗರಿಕತೆ ಕುರಿತು ಇಂದು ಚರ್ಚೆಯಾಗುತ್ತಿದೆ. ಈ ಭೂಮಿಯಲ್ಲಿ ಕೃಷ್ಣ ಮತ್ತು ರಾಮ ಹುಟ್ಟಿದಾಗಿನಿಂದಲೂ ನಾವು ಈ ದೇಶದ ನಾಗರಿಕರೇ ಎಂದು ಹೇಳಿದರು. ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಷ ತೀರ್ಥ ಸ್ವಾಮೀಜಿ, ಇಸ್ಕಾನ್ ಬೆಂಗಳೂರು ವಿಭಾಗದ ಅಧ್ಯಕ್ಷ ಮಧು ಪಂಡಿತ್ ದಾಸ, ಮೈಸೂರು ವಿಭಾಗದ ಅಧ್ಯಕ್ಷ ಜಯಚೈತನ್ಯ ದಾಸ, ಚೆನೈನ ಸ್ತೋಕ ಕೃಷ್ಣ ಮಹಾರಾಜ್, ವಾಸುದೇವ ಕೇಶವ ದಾಸ್ ಮತ್ತಿತರರು ಉಪಸ್ಥಿತರಿದ್ದರು.

Translate »