ಕೆಆರ್‍ಎಸ್ ಡಿಸ್ನಿಲ್ಯಾಂಡ್ ಯೋಜನೆ ರದ್ದು?
ಮೈಸೂರು

ಕೆಆರ್‍ಎಸ್ ಡಿಸ್ನಿಲ್ಯಾಂಡ್ ಯೋಜನೆ ರದ್ದು?

August 5, 2019

ಮಂಡ್ಯ,ಆ.4(ನಾಗಯ್ಯ)- ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ಮಹತ್ವದ ಯೋಜನೆ, ಅದ ರಲ್ಲೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರ ಕನಸಿನ ಕೆಆರ್‍ಎಸ್‍ನ ಡಿಸ್ನಿಲ್ಯಾಂಡ್ ಯೋಜನೆ ರದ್ದಾಗುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ.

ಹಿಂದಿನ ಸಮ್ಮಿಶ್ರ ಸರ್ಕಾರವು ಪ್ರಾರಂಭಿಸಲು ನಿರ್ಧರಿಸಿದ್ದ ವಿವಾದಾತ್ಮಕ ಡಿಸ್ನಿಲ್ಯಾಂಡ್ ಯೋಜನೆ ಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಕೈಬಿಡುವ ಸಾಧ್ಯತೆ ಯಿದೆ. ಈಗಾಗಲೇ ಟಿಪ್ಪು ಜಯಂತಿಯನ್ನು ರದ್ದು ಪಡಿಸಿರುವಂತೆಯೇ ಡಿಸ್ನಿಲ್ಯಾಂಡ್ ಯೋಜನೆಗೂ ಸಹ ಎಳ್ಳು ನೀರು ಬಿಡುವ ಸಾಧ್ಯತೆ ಇದೆ.

ಈ ಯೋಜನೆಯ ಭವಿಷ್ಯವನ್ನು ನಿರ್ಧರಿಸಲು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇ ಶಕ ಹೆಚ್.ಎಲ್.ಪ್ರಸನ್ನಕುಮಾರ್ ಅವರ ಅಧ್ಯಕ್ಷತೆ ಯಲ್ಲಿ ನಾಳೆ(ಆ.5) ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಪಕ್ಷದ ನಾಯಕರಾಗಿದ್ದಾಗ ಈ ಯೋಜನೆಯನ್ನು ವಿರೋಧಿಸಿದ್ದರು ಜೊತೆಗೆ ಇದನ್ನು ಹಣ ವ್ಯರ್ಥದ ಯೋಜನೆ ಹಾಗೂ ಸಾವಿರಾರು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೋರಾಟವನ್ನೂ ಮಾಡಿ ದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಡಿಸ್ನಿಲ್ಯಾಂಡ್ ಯೋಜನೆ ಅನುಷ್ಠಾನಗೊಳಿಸುವ ಹೊಣೆಯನ್ನು ಸಿಎಎಲ್ ಸಂಸ್ಥೆಗೆ ವಹಿಸಲಾಗಿತ್ತು. 2,000 ಕೋಟಿ ರೂ. ಅಂದಾಜು ವೆಚ್ಚದಡಿ ಈ ಯೋಜನೆಯ ಬಗ್ಗೆ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪ್ರವಾಸೋದ್ಯಮ ಸಚಿವರಾಗಿದ್ದ ಸಾರಾ.ಮಹೇಶ್ ಮತ್ತು ಜಲಸಂಪನ್ಮೂಲ ಸಚಿವ ರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಹೆಚ್ಚಿನ ಆಸಕ್ತಿ ತೋರಿದ್ದರು. ಈ ಯೋಜನೆಯು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕನಿಷ್ಠ 40 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸುತ್ತದೆ ಎಂದು ಪ್ರತಿಪಾದಿಸಿದ್ದರು.
ಡಿಸ್ನಿಲ್ಯಾಂಡ್ ಯೋಜನೆಯನ್ನು ಕಳೆದ ಬಜೆಟ್ ನಲ್ಲಿಯೇ ಸೇರಿಸಲಾಗಿತ್ತು. ಕೆಆರ್‍ಎಸ್ ಅಣೆಕಟ್ಟೆ ಕೃಷ್ಣರಾಜ ಒಡೆಯರ್ ರೋಟರಿ, ಟೋಲ್ ಪ್ಲಾಜಾ, ಎಂಟ್ರಿ ಪ್ಲಾಜಾ, ಗ್ರ್ಯಾಂಡ್ ಸ್ಟ್ರೀಟ್, ಗಂಡಭೇರುಂಡಾ ಪ್ರತಿಮೆ ಮತ್ತು ಟವರ್ ಪಾಯಿಂಟ್‍ಗಿಂತ ಎತ್ತರದ 120 ಮೀಟರ್‍ಗಳ ಕಾವೇರಿ ಪ್ರತಿಮೆಯನ್ನು ನಿರ್ಮಿ ಸಲು ಈ ಯೋಜನೆಯೊಳಗೆ ಪ್ರಸ್ತಾಪಿಸಲಾಗಿತ್ತು.

ಕೆಆರ್‍ಎಸ್ ಅಣೆಕಟ್ಟೆ ಸುತ್ತಮುತ್ತಲಿನ 400 ಎಕರೆ ಸರ್ಕಾರಿ ಭೂಮಿಯಲ್ಲಿ 86 ಎಕರೆ ಪ್ರದೇಶದಲ್ಲಿ ಈ ಯೋಜನೆ ಕಾರ್ಯ ರೂಪಿಸಲು ಯೋಜಿಸಲಾಗಿತ್ತು. ಈ ಯೋಜನೆಯಿಂದ ಜಿಲ್ಲೆಯ ಸುಮಾರು 40 ಸಾವಿರ ನಿರುದ್ಯೋಗಿ ರೈತ ಮಕ್ಕಳಿಗೆ ಉದ್ಯೋಗ ಕಲ್ಪಿಸುವುದು, ಸೇರಿದಂತೆ ವಿವಿಧ ಯೋಜನೆಗಳನ್ನು ಇದರಲ್ಲಿ ಹಾಕಿಕೊಳ್ಳಲಾಗಿತ್ತು. ಆದರೆ, ಈ ಯೋಜನೆ ಯನ್ನು ರೈತರು ಮತ್ತು ಪರಿಸರ ರಕ್ಷಣೆಯ ಕಾರ್ಯ ಕರ್ತರು ವಿರೋಧಿಸಿದ್ದರು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
ಸಚಿವಾಲಯದ ಅಡೆತಡೆಗಳನ್ನು ಯೋಜನೆ ಎದುರಿಸಬೇಕಾಯಿತು. ಈಗಾಗಲೇ ಶ್ರೀರಂಗ ಪಟ್ಟಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ರಂಗನತಿಟ್ಟು ಪಕ್ಷಿಧಾಮ ಮತ್ತು ಪರಿಸರ ಪ್ರದೇಶಗಳನ್ನು ಪರಿಸರ-ಸೂಕ್ಷ್ಮ ವಲಯ ಎಂದು ಘೋಷಿಸಿರುವುದು ಗಮನಾರ್ಹ ಅಂಶ. ಕೆಆರ್‍ಎಸ್ ಅಣೆಕಟ್ಟೆ ಭದ್ರತಾ ಮಾರ್ಗಸೂಚಿಗಳ ಪ್ರಕಾರ, ಪಕ್ಷಿಧಾಮದ ಗಡಿಯ 1 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಅಥವಾ ಇSZ ವ್ಯಾಪ್ತಿಯವರೆಗೆ ಯಾವುದೇ ಹೊಸ ಹೋಟೆಲ್‍ಗಳು ಮತ್ತು ರೆಸಾರ್ಟ್‍ಗಳನ್ನು ನಿರ್ಮಿಸಲು ಅನುಮತಿಸಲಾಗುವುದಿಲ್ಲ. ಕೆಆರ್‍ಎಸ್ ಜಲಾಶಯದೊಳಗಿನ ರೆಸಾರ್ಟ್‍ಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಪ್ರವಾಸಿ ಸೌಲಭ್ಯಗಳ ಯಾವುದೇ ವಿಸ್ತರಣೆ ಕೇಂದ್ರ ಮಾರ್ಗಸೂಚಿಗಳಿಗೆ ಅನುಗುಣವಾಗಿರುತ್ತದೆ. ಹೀಗಾಗಿ ಈ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಪರಿಸರವಾದಿಗಳು ವಾದಿಸಿದ್ದರು.

ಈಗಾಗಲೇ ಟಿಪ್ಪು ಜಯಂತಿ ರದ್ಧತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಸಿ.ಎಸ್.ಪುಟ್ಟರಾಜು ಅವರು ಡಿಸ್ನಿಲ್ಯಾಂಡ್ ಯೋಜನೆ ರದ್ದಾದರೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Translate »