ಮೈಸೂರು: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಭಾನುವಾರ ನಂಜನಗೂಡಿನ ದತ್ತಾತ್ರೇಯ ದೇವಾಲಯದಲ್ಲಿ ವಿಶೇಷ ಹೋಮ ನಡೆಸಿ, ಶ್ರೀಕಂಠೇಶ್ವರ ದೇವಾಲಯದಲ್ಲಿ ಪೂಜೆ ನೆರವೇರಿಸಿ 70ನೇ ಜನ್ಮ ದಿನವನ್ನು ಸಾರ್ವಜನಿಕರು ಹಾಗೂ ಬೆಂಬಲಿಗರೊಂದಿಗೆ ಆಚರಿಸಿಕೊಂಡರು.
ಜನ್ಮ ದಿನದ ಹಿನ್ನೆಲೆಯಲ್ಲಿ ಶನಿವಾರವೇ ಕುಟುಂಬದ ಸದಸ್ಯರೊಂದಿಗೆ ಮೈಸೂರಿಗೆ ಆಗಮಿಸಿ ನಂಜನಗೂಡು ರಸ್ತೆಯಲ್ಲಿರುವ ವಸತಿ ಸಮುಚ್ಛಯವೊಂದರಲ್ಲಿ ವಾಸ್ತವ್ಯ ಹೂಡಿದ್ದ ಕೆ.ಎಸ್.ಈಶ್ವರಪ್ಪ ಅವರು, ಇಂದು ಬೆಳಿಗ್ಗೆ ನಂಜನಗೂಡಿನಲ್ಲಿರುವ ದತ್ತಾತ್ರೇಯ ದೇವಾಲಯದಲ್ಲಿ ಆಧ್ಯಾತ್ಮಿಕ ಚಿಂತಕ ದ್ವಾರಕಾನಾಥ್ ಅವರ ನೇತೃತ್ವದಲ್ಲಿ ಚಂಡಿಕಾ ಯಾಗ ಸೇರಿದಂತೆ ವಿವಿಧ ಹೋಮ-ಹವನ ನೆರವೇರಿಸಿದರು. ಬಳಿಕ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡ ದೇವಿಯ ದರ್ಶನ ಪಡೆದು ಪ್ರಾರ್ಥಿಸಿದರು.
70 ಬಸ್‍ಗಳಲ್ಲಿ ಬಂದ ಬೆಂಬಲಿಗರು: ಮೈಸೂರಿನಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಸ್ತವ್ಯ ಹೂಡಿದ್ದ ಹಿನ್ನೆಲೆಯಲ್ಲಿ ಜನ್ಮ ದಿನದ ಶುಭ ಕೋರಲು ಶಿವಮೊಗ್ಗದಿಂದ 70 ಬಸ್‍ಗಳಲ್ಲಿ ಕೆ.ಎಸ್.ಈಶ್ವರಪ್ಪ ಅವರ ಅಭಿಮಾನಿಗಳು ಮೈಸೂರಿಗೆ ಕಳೆದ ರಾತ್ರಿ ಆಗಮಿಸಿದ್ದರು. ಇಂದು ಬೆಳಿಗ್ಗೆ ನಂಜನಗೂಡು, ಚಾಮುಂಡಿಬೆಟ್ಟ ಹಾಗೂ ಮೇಲುಕೋಟೆಗೆ ತೆರಳಿ ದೇವರ ದರ್ಶನ ಪಡೆದರು. ಇದಕ್ಕೂ ಮುನ್ನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಹಾಗೂ ನಂಜನಗೂಡಿನಲ್ಲಿ ಕೆ.ಎಸ್.ಈಶ್ವರಪ್ಪ ಅವರಿಗೆ ಜನ್ಮದಿನದ ಶುಭ ಕೋರಿದರು. ಬಳಿಕ ಅವರು ಶಿವಮೊಗ್ಗಕ್ಕೆ ವಾಪಸ್ಸಾದರು.
ಸಾರ್ವಜನಿಕರೊಂದಿಗೆ ಆಚರಣೆ: ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಕೆ.ಎಸ್.ಈಶ್ವರಪ್ಪ ಅವರು ಸಾರ್ವಜನಿಕರು ಹಾಗೂ ಬೆಂಬಲಿಗರೊಂದಿಗೆ ತಮ್ಮ 70ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಅಭಿಮಾನಿಗಳು ತಂದಿದ್ದ ಕೇಕನ್ನು ಕತ್ತರಿಸಿ ಸನ್ಮಾನ ಸ್ವೀಕರಿಸಿದರು. ಇದೇ ವೇಳೆ ಕೆ.ಎಸ್.ಈಶ್ವರಪ್ಪ ಅವರ ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಹಾರ, ರೇಷ್ಮೆಗೂಡಿನ ಹಾರ ಹಾಕುವ ಮೂಲಕ ಅಭಿಮಾನ ಮೆರೆದರು. ಮತ್ತಷ್ಟು ಮಂದಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಕೈಯಲ್ಲಿರುವ ಖಡ್ಗದ ಮಾದರಿಯ ಖಡ್ಗವನ್ನು ನೀಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಡಾ. ಬಿ.ಹೆಚ್.ಮಂಜುನಾಥ್, ಮುಖಂಡರುಗಳಾದ ಕಾಂತೇಶ್ ಈಶ್ವರಪ್ಪ, ಜೋಗಿ ಮಂಜು, ಆನೆಕಲ್ ದೊಡ್ಡಯ್ಯ, ಶಿವಕುಮಾರ್, ರಘು, ಚಿತ್ರದುರ್ಗದ ಬಿ.ಎಂ. ಮಂಜು, ಕುರುಬಾರಹಳ್ಳಿ ರಮೇಶ್, ಬೆಂಗಳೂರಿನ ಸಂತೋಷ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.