ಮುಂದಿನ ಹಣಕಾಸು ಸಚಿವರಾಗಿ ಕೆ.ವಿ.ಕಾಮತ್ ಆಯ್ಕೆ ಸಾಧ್ಯತೆ
ಮೈಸೂರು

ಮುಂದಿನ ಹಣಕಾಸು ಸಚಿವರಾಗಿ ಕೆ.ವಿ.ಕಾಮತ್ ಆಯ್ಕೆ ಸಾಧ್ಯತೆ

January 17, 2020

ನವದೆಹಲಿ, ಜ.16- ದೇಶ ಆರ್ಥಿಕ ಬೆಳವಣಿಗೆ ಯಲ್ಲಿ ಮಂದಗತಿಯನ್ನು ಎದುರಿಸುತ್ತಿರುವ ಸನ್ನಿ ವೇಶದಲ್ಲಿ ತ್ವರಿತ, ಪರಿಣಾಮಕಾರಿ ಪರಿಹಾರವನ್ನು ಕಂಡುಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಕಾರ್ಪೊರೇಟ್ ವಲಯದ ದಿಗ್ಗಜರು, ಆರ್ಥಿಕ ತಜ್ಞರ ಜತೆಯಲ್ಲಿ ಹಲವಾರು ಸುತ್ತಿನ ಸುದೀರ್ಘ ಮಾತುಕತೆ ಗಳನ್ನು ಇತ್ತೀಚೆಗೆ ನಡೆಸಿದ್ದಾರೆ. ಇದರ ಬೆನ್ನಲ್ಲೇ, ಫೆಬ್ರವರಿ 1ರ ಕೇಂದ್ರ ಬಜೆಟ್ ನಂತರ ಹಣಕಾಸು ಸಚಿವ ಸ್ಥಾನದಿಂದ ನಿರ್ಮಲಾ ಸೀತಾರಾಮನ್ ಕೈಬಿಡಲಿದ್ದಾರೆ. ನೂತನ ಹಣಕಾಸು ಸಚಿವರಾಗಿ ಐಸಿಐಸಿಐ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಕೆ.ವಿ. ಕಾಮತ್ (ಕುಂದಾಪುರ ವಾಮನ ಕಾಮತ್) ನೇಮಕಗೊಳ್ಳ ಲಿದ್ದಾರೆ ಎಂಬ ವದಂತಿಗಳು ಹರಡಿವೆ.

ಹಣಕಾಸು ಕ್ಷೇತ್ರದಲ್ಲಿ ಅಪಾರ ಪರಿಣತಿ ಹೊಂದಿ ರುವ ಕೆ.ವಿ.ಕಾಮತ್ ಪ್ರಸ್ತುತ ಬ್ರಿಕ್ಸ್ ದೇಶಗಳ (ಬ್ರೆಜಿಲ್, ರಷ್ಯಾ, ಇಂಡಿಯಾ ಚೀನಾ, ದಕ್ಷಿಣ ಆಫ್ರಿಕಾ) ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್‍ನ ಮುಖ್ಯಸ್ಥರಾಗಿದ್ದಾರೆ. ರಾಜಕೀಯೇತರ ವ್ಯಕ್ತಿಯಾಗಿರುವ, ವಿತ್ತ ಜಗತ್ತಿನ ಆಗು-ಹೋಗುಗಳನ್ನು ಚೆನ್ನಾಗಿ ಬಲ್ಲ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ.

ಜ.31ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಸಂಸತ್ ಅಧಿವೇಶನ ಆರಂಭಗೊಳ್ಳಲಿದೆ. ಫೆ.1ರಂದು ಬಜೆಟ್ ಮಂಡನೆ ಯಾಗಲಿದೆ. ಡಾ.ಮನಮೋಹನ್ ಸಿಂಗ್ ಅವರಂ ತೆಯೇ ರಾಜಕೀಯೇತರ ವ್ಯಕ್ತಿಯಾಗಿರುವ ಕೆ.ವಿ. ಕಾಮತ್ ಅವರು ತಂತ್ರಜ್ಞಾನವನ್ನು ಬ್ಯಾಂಕಿಂಗ್ ಸೇವೆ ಗಳಲ್ಲಿ ಅಳವಡಿಸುವಲ್ಲಿ ದೊಡ್ಡ ಪಾತ್ರ ನಿರ್ವಹಿಸಿ ದರು. ಅದೇ ಕಾರಣಕ್ಕಾಗಿ ಅವರು ಆಧುನಿಕ ಭಾರ ತದ ಯಶಸ್ವಿ ಬ್ಯಾಂಕಿಂಗ್ ಉದ್ಯಮಿ ಎನಿಸಿಕೊಂಡಿದ್ದರು.

1971ರಲ್ಲಿ ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಎನಿಸಿಕೊಂಡಿರುವ ಐಸಿಐಸಿಐ ಬ್ಯಾಂಕ್ ಅನ್ನು ಸೇರಿದ ಕೆ.ವಿ.ಕಾಮತ್, 1988ರಲ್ಲಿ ಏಷ್ಯನ್ ಡೆವಲಪ್‍ಮೆಂಟ್ ಬ್ಯಾಂಕ್(ಎಡಿಬಿ)ಗೆ ಸೇರ್ಪಡೆಯಾದರು. ಬಳಿಕ 1996 ರಲ್ಲಿ ಭಾರತಕ್ಕೆ ಮರಳಿದ ಕಾಮತ್, ಮತ್ತೆ ಐಸಿಐಸಿಐ ಬ್ಯಾಂಕ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ಹುದ್ದೆ ಅಲಂಕರಿಸಿದರು. ಅದಾದ ಬಳಿಕ ಶರವೇಗ ದಲ್ಲಿ ಪ್ರಗತಿ ಕಂಡ ಐಸಿಐಸಿಐ ಬ್ಯಾಂಕ್, ದೇಶದ ಗಡಿಗಳನ್ನು ದಾಟಿ ವಿವಿಧ ದೇಶಗಳಲ್ಲಿ ಶಾಖೆಗಳನ್ನು ಸ್ಥಾಪಿಸಿ ಭಾರತದ ಮೊಟ್ಟ ಮೊದಲ `ಯೂನಿ ವರ್ಸಲ್ ಬ್ಯಾಂಕ್’ ಎನಿಸಿಕೊಂಡಿತು.

ತಮ್ಮ ಆಡಳಿತಾವಧಿಯಲ್ಲಿ ಐಸಿಐಸಿಐ ಬ್ಯಾಂಕ್ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಭೂತಪೂರ್ವ ಬೆಳವಣಿಗೆ ಕಾಣುವಂತೆ ಮಾಡಿದರು. 2009ರಲ್ಲಿ ಐಸಿಐಸಿಐ ಬ್ಯಾಂಕ್‍ನ ಎಂಡಿ ಮತ್ತು ಸಿಇಓ ಹುದ್ದೆ ತೊರೆದ ಕಾಮತ್ ಅವರು, ಬಳಿಕ 2015ರವರೆಗೂ ದೇಶದ ಪ್ರತಿಷ್ಠಿತ ಸಾಫ್ಟ್‍ವೇರ್ ಕಂಪನಿ `ಇನ್ಫೋ ಸಿಸ್’ನ ನಾನ್ ಎಕ್ಸಿಕ್ಯುಟೀವ್ ಛೇರ್ಮನ್ ಆಗಿ ಸೇವೆ ಸಲ್ಲಿಸಿದರು. ಅಲ್ಲದೇ ದಾವೋಸ್‍ನಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶ ಗಳಲ್ಲಿ ಸಹ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಅಷ್ಟೇ ಅಲ್ಲದೇ ಸ್ಕೊಲ್ಯೂಂಬರ್ಗರ್ ಲಿಮಿಟೆಡ್‍ನ ನಿರ್ದೇಶಕ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದರು.

2010ರಿಂದ ಹ್ಯೂಸ್ಟನ್ ಮೂಲದ ಪೆಟ್ರೋಲಿಯಂ ಕ್ಷೇತ್ರದ ಕಂಪನಿ ಸ್ಕೊಲ್ಯೂಂಬರ್ಗರ್‍ನ ಆಡಳಿತ ಮಂಡ ಳಿಯಲ್ಲಿಯೂ ಕೆ.ವಿ.ಕಾಮತ್ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಭಾರತದಲ್ಲಿನ ಔಷಧ ತಯಾರಿಕಾ ಕ್ಷೇತ್ರದ ಕಂಪನಿ `ಲ್ಯುಪಿನ್’ನಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆ.ವಿ.ಕಾಮತ್ ಅವರು, ಬ್ಯಾಂಕಿಂಗ್ ಹೊರತಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಪಂಡಿತ್ ದೀನ ದಯಾಳ್ ಪೆಟ್ರೋಲಿಯಂ ವಿಶ್ವ ವಿದ್ಯಾಲಯದ ಗವರ್ನರ್‍ಗಳ ಮಂಡಳಿಯ ಸದಸ್ಯ ರಾಗಿಯೂ ಸೇವೆ ಸಲ್ಲಿಸಿದ್ದಾರೆ. 1947ರ ಡಿ.2ರಂದು ಮಂಗಳೂರಿನಲ್ಲಿ ಜನಿಸಿದ ಕೆ.ವಿ.ಕಾಮತ್, ಗೌಡ ಸಾರಸ್ವತ ಬ್ರಾಹ್ಮಣ ಜನಾಂಗದವರು.

ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಪೂರೈಸಿದ ಕಾಮತ್, ಬಳಿಕ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ `ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ – ಅಹಮದಾಬಾದ್ (ಐಐಎಂ-ಡಿ) ನಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಕೆ.ವಿ.ಕಾಮತ್ ಅವರು, ಸಿಎನ್‍ಬಿಸಿ ಏಷ್ಯನ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ (2001) ಪ್ರಶಸ್ತಿ ಪಡೆದಿದ್ದಾರೆ. 2007ರಲ್ಲಿ ಫೋಬ್ರ್ಸ್ ಏಷ್ಯಾ ದಿಂದ `ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್’ ಪುರಸ್ಕಾರ ಪಡೆದಿದ್ದಾರೆ. ಇದೆಲ್ಲಕ್ಕೂ ಮಿಗಿಲಾಗಿ ಕಾಮತ್ ಅವರು 2008 ರಲ್ಲಿ ಭಾರತ ಸರ್ಕಾರ ದಿಂದ ಪದ್ಮಭೂಷಣ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

ಒಂದು ಕಡೆ ಜಿಡಿಪಿ ಕಳೆದ 6 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ (ಶೇ.4.5) ಕುಸಿದಿರುವುದು, ಐಐಪಿ ಕುಸಿತ, ಹಣದುಬ್ಬರದ ಏರುಗತಿ ಇತ್ಯಾದಿ ಸಂಕಟ ಗಳು ಏಕಕಾಲಕ್ಕೆ ಬಂದಿರುವುದರಿಂದ ತ್ವರಿತ ಹಾಗೂ ಪರಿಣಾಮಕಾರಿ ಪರಿಹಾರೋಪಾಯಗಳನ್ನು ಕಂಡು ಕೊಳ್ಳಬೇಕಿದೆ. ಮುಖ್ಯವಾಗಿ ಬ್ಯಾಂಕ್ ಮತ್ತು ಎನ್‍ಬಿ ಎಫ್‍ಸಿ ವಲಯ ತೀವ್ರ ಬಿಕ್ಕಟ್ಟಿನಲ್ಲಿರುವುದು ಸರಕಾರಕ್ಕೆ ಕಳವಳಕಾರಿಯಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ನುರಿತ ಕೆ.ವಿ. ಕಾಮತ್ ಅವರು ಕೇಂದ್ರದ ಹಣಕಾಸು ಸಚಿವರಾಗಿ ಸಂಪುಟ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Translate »