ಮೈಸೂರು, ಜ.9(ಪಿಎಂ)- `ಫ್ರೀ ಕಾಶ್ಮೀರ’ ಎಂಬ ಫಲಕ ಮೈಸೂರು ವಿವಿ ಆವರಣ ದಲ್ಲಿ ಪ್ರತಿಭಟನೆ ವೇಳೆ ಕಾಣಿಸಿಕೊಂಡಿರುವುದು ವಿವಿಗೆ ಕಪ್ಪು ಚುಕ್ಕೆ ಎಂದು ಶಾಸಕ ಎಲ್.ನಾಗೇಂದ್ರ ಖಂಡಿಸಿದರು. ಮುಕ್ತ ವಿವಿ ಆವರಣದಲ್ಲಿ ಗುರುವಾರ ಮಾಧ್ಯಮದವ ರಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಶ್ವವಿದ್ಯಾನಿಲಯದಲ್ಲಿ ತಮಗಾಗುತ್ತಿರುವ ಸಮಸ್ಯೆಗಳಿದ್ದರೆ ಆ ಬಗ್ಗೆ ಪ್ರತಿಭಟನೆ ಮಾಡಲು ಅವರಿಗೆ ಹಕ್ಕಿದೆ. ಒಂದು ರೀತಿಯಲ್ಲಿ ಕಾಶ್ಮೀರ ಭಯೋ ತ್ಪಾದನೆ ಸ್ಥಳವಾಗಿ ಪರಿವರ್ತನೆಯಾಗಿದೆ. ಇಂತಹ ಗಂಭೀರ ವಿಚಾರದ ಬಗ್ಗೆ ಈ ರೀತಿ ಫಲಕ ಪ್ರದರ್ಶನ ಮಾಡುವುದು ಸರಿಯಲ್ಲ. ಗಂಗೋತ್ರಿಯೊಳಗೆ ಆ ಫಲಕ ಬಂದಿರು ವುದು ನೋವಿನ ಸಂಗತಿ. ಸಂಬಂಧಿಸಿದವರ ವಿರುದ್ಧ ಕ್ರಮ ವಹಿಸಬೇಕು ಎಂದರು.
ಮೇಯರ್ ಚುನಾವಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್-ಜೆಡಿಎಸ್ ನವರು ಒಂದಾಗಿ ಆಡಳಿತ ನಡೆಸುತ್ತೇವೆ ಎಂದು ಅತ್ಯಂತ ಬಲವಾದ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಅವರಿಗೆ ಒಳ್ಳೆದಾಗಲಿ. ಆ ಎರಡು ಪಕ್ಷಗಳಿಗಿಂತ ಪಾಲಿಕೆಯಲ್ಲಿ ನಮ್ಮ ಪಕ್ಷದ ಬಲವೇ ಜಾಸ್ತಿ. ಆದರೆ ಹಿಂಬಾಗಿಲಲ್ಲಿ ಅಧಿಕಾರ ಹಿಡಿಯೊಲ್ಲ ಎಂದು ತಿಳಿಸಿದರು.