ಪ್ರತಿಧ್ವನಿಸಿದ ಮೂಲ ಸೌಲಭ್ಯಗಳ ಕೊರತೆ ನೇರ ಫೋನ್-ಇನ್ ಕಾರ್ಯಕ್ರಮ: 32 ದೂರು ದಾಖಲು
ಚಾಮರಾಜನಗರ

ಪ್ರತಿಧ್ವನಿಸಿದ ಮೂಲ ಸೌಲಭ್ಯಗಳ ಕೊರತೆ ನೇರ ಫೋನ್-ಇನ್ ಕಾರ್ಯಕ್ರಮ: 32 ದೂರು ದಾಖಲು

May 27, 2018

ಚಾಮರಾಜನಗರ:  ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಶನಿವಾರ ನಡೆದ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ 32 ದೂರು ದಾಖಲಾದವು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದÀರ್ ಕುಮಾರ್ ಮೀನಾ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವು ಭಾಗಗಳಿಂದ ನಾಗರಿಕರು ಸಮಸ್ಯೆ, ದೂರುಗಳನ್ನು ದೂರವಾಣ ಮೂಲಕ ಗಮನಕ್ಕೆ ತಂದರು.

ಯಳಂದೂರು ಪಟ್ಟಣದಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ. ತ್ಯಾಜ್ಯ ಹಾಕಲು ಬುಟ್ಟಿಗಳನ್ನು ಇಡಬೇಕು. ಕಂದಹಳ್ಳಿಯಲ್ಲಿ ಚರಂಡಿ ತುಂಬಿಹೋಗಿದ್ದು, ಕಸ ಕಡ್ಡಿಗಳನ್ನು ತೆಗೆದುಹಾಕಿಲ್ಲ. ಕೂಡಲೇ ಇದನ್ನು ತೆರವುಗೊಳಿಸಬೇಕೆಂದು ಸ್ಥಳೀಯರೊಬ್ಬರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ನೈರ್ಮಲ್ಯ ಕಾಪಾಡಲು ಸೂಚಿಸುವುದಾಗಿ ತಿಳಿಸಿದರು.

ಕೊಳ್ಳೇಗಾಲ ತಾಲೂಕು ಗುಂಡೇಗಾಲ ಗ್ರಾಮದಿಂದ ಅಂಗವಿಕಲರೊಬ್ಬರು ತಮಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲವೆಂದು ಅಳಲು ತೋಡಿಕೊಂಡರು. ಜಿಲ್ಲಾಧಿಕಾರಿ ಕಾವೇರಿಯವರು ಸಭೆಯಲ್ಲಿ ಹಾಜರಿದ್ದ ಅಂಕವಿಕಲರ ಕಲ್ಯಾಣಾಧಿಕಾರಿ ಅವರಿಗೆ ಅಗತ್ಯ ನೆರವು ನೀಡಲು ಕೂಡಲೇ ಕ್ರಮವಹಿಸುವಂತೆ ನಿರ್ದೇಶನ ನೀಡಿದರು.

ಅಟ್ಟುಗೂಳೀಪುರದಿಂದ ಕರೆ ಮಾಡಿದ ಸ್ಥಳೀಯರೊಬ್ಬರು ತಮ್ಮ ಭಾಗದಲ್ಲಿ ಬಾವಲಿಗಳ ಸಂಖ್ಯೆ ಹೆಚ್ಚಿದೆ. ನಿಫಾ ಸೋಂಕು ಹಿನ್ನಲೆಯಲ್ಲಿ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ಕೋರಿಕೆಗೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಎಲ್ಲಾ ಬಾವಲಿಗಳಿಂದ ಸೋಂಕು ಹರಡುತ್ತದೆ ಎಂಬ ಅತಂಕ ಬೇಡ. ರೋಗ ಸಂಬಂಧ ಆರೋಗ್ಯ ಇಲಾಖೆಯಿಂದ ನಿಮ್ಮ ಗ್ರಾಮದಲ್ಲಿ ಜಾಗೃತಿ ಹಾಗೂ ತಿಳಿವಳಿಕೆ ಮೂಡಿಸಲು ಸೂಚನೆ ನೀಡಲಾಗುವುದು ಎಂದರು.

ಮಕ್ಕಳ ಅಪಹರಣ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಮಕ್ಕಳ ಅಪಹರಣ ಕುರಿತು ಯಾವುದೇ ವರದಿಯಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ವಿಚಾರದಲ್ಲಿ ಸತ್ಯಾಂಶವಿಲ್ಲ. ಸುಳ್ಳು ವದಂತಿಗಳನ್ನು ನಂಬಬಾರದು. ಈಗಾಗಲೇ ಮಾಧ್ಯಮಗಳಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳ ದೂರವಾಣ ಸಂಖ್ಯೆ ನೀಡಲಾಗಿದ್ದು, ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಮಾಹಿತಿ ನೀಡಬಹುದಾಗಿದೆ ಎಂದರು.

ನಗರದಲ್ಲಿ ಪರವಾನಗಿ ಪಡೆಯದೆ ಟ್ಯುಟೋರಿಯಲ್‍ಗಳನ್ನು ನಡೆಸಲಾಗುತ್ತಿದೆ. ಸಂಬಂಧಪಟ್ಟ ಶಿಕ್ಷಣ ಇಲಾಖೆಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲವೆಂದು ಸ್ಥಳೀಯರೊಬ್ಬರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಈ ಕುರಿತು ಸಂಬಂಧಪಟ್ಟವರಿಂದ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.

ಚಾಮರಾಜನಗರ ತಾಲೂಕು ಸಿದ್ದಯ್ಯನಪುರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯಬೇಕು ಎಂದು ಗ್ರಾಮಸ್ಥರೊಬ್ಬರು ಕೋರಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಉತ್ತರಿಸಿ ಅಕ್ರಮ ಮದ್ಯ ಮಾರಾಟದ ವಿವರವನ್ನು ಎಲ್ಲಿಯೆ ಆಗಲಿ ತಮಗೆ ವಿವರವಾಗಿ ಸಂದೇಶ ಕಳುಹಿಸಿದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಬೆಳೆ ವಿಮೆ ಪರಿಹಾರ, ಕುಡಿಯುವ ನೀರು, ಚರಂಡಿ ಶುಚಿತ್ವ, ಖಾಸಗಿ ಆಟೋಗಳಿಂದ ಬಸ್ ಮಾಲೀಕರಿಗೆ ಆಗುತ್ತಿರುವ ನಷ್ಟ, ಕೆರೆ ನೈರ್ಮಲ್ಯ, ಪಡಿತರ ಅಂಗಡಿ ಇನ್ನಿತರ ಹಲವು ಸಮಸ್ಯೆಗಳು ಫೋನ್-ಇನ್ ಕಾರ್ಯಕ್ರಮದಲ್ಲಿ ಕೇಳಿಬಂದವು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Translate »