ನಿಫಾ ಮಹಾ ಮಾರಿ ಭೀತಿ ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರ
ಮೈಸೂರು

ನಿಫಾ ಮಹಾ ಮಾರಿ ಭೀತಿ ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರ

May 27, 2018

* ಪ್ರವೇಶ ದ್ವಾರ, ಮರಗಳಿಗೆ ಔಷಧಿ ಸಿಂಪಡಣೆ
* ಮರಗಳಲ್ಲಿದ್ದ ಹಣ್ಣುಗಳ ತೆರವು
ಮೈಸೂರು:  ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಣಾಂತಿಕ ರೋಗ ನಿಫಾ ವೈರಾಣು ಬರದಂತೆ ಮೈಸೂರು ಮೃಗಾಲಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಮೃಗಾಲಯದ ಪ್ರವೇಶ ದ್ವಾರದಲ್ಲಿ ವೈರಾಣು ನಾಶ ಮಾಡುವ ಔಷಧಿ ಸಿಂಪಡಿಸಿರುವ ನೆಲಹಾಸು ಹಾಸಿರುವುದಲ್ಲದೆ, ಬಾವಲಿಗಳಿರುವ ಮರದ ಸುತ್ತಲೂ ಮುನ್ನೆಚ್ಚರಿಕಾ ಕ್ರಮವಾಗಿ ಔಷಧಿ ಸಿಂಪಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಮಲೇಷಿಯಾ ಹಾಗೂ ಕೇರಳದಲ್ಲಿ ಕಾಡುತ್ತಿರುವ ನಿಫಾ ಅಥವಾ ಬಾವಲಿ ಜ್ವರ ಹಲವಾರು ಅಮಾಯಕರನ್ನು ಬಲಿ ಪಡೆದಿದ್ದು, ಜನರಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಮಲೇಷಿಯಾದಲ್ಲಿ 250ಕ್ಕೂ ಹೆಚ್ಚು ಮಂದಿ ಹಾಗೂ ನೆರೆ ರಾಜ್ಯ ಕೇರಳದಲ್ಲಿ ಸುಮಾರು 20 ಮಂದಿ ನಿಫಾ ಸೋಂಕಿಗೆ ಬಲಿಯಾಗಿದ್ದಾರೆ. ಬಾವಲಿ ಹಾಗೂ ಹಂದಿಗಳಿಂದ ನಿಫಾ ಮಾರಣಾಂತಿಕ ವೈರಾಣು ಹರಡುತ್ತಿದ್ದು, ಎಲ್ಲರಲ್ಲಿಯೂ ಪ್ರಾಣ ಭಯ ಕಾಡುವಂತೆ ಮಾಡಿದೆ. ಬಾವಲಿಗಳು ತಿಂದಿರುವ ಹಣ್ಣುಗಳ ಸೇವನೆಯಿಂದ, ಸೋಂಕಿತರೊಂದಿಗೆ ಮಾತನಾಡುವುದರಿಂದ ಹಾಗೂ ಪ್ರಾಣ ಗಳಿಂದಲೂ ಹರಡುವುದರಿಂದ ಮೈಸೂರು ಮೃಗಾಲಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಪ್ರಮುಖವಾಗಿ ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲದೆ ವಿದೇಶಗಳಿಂದಲೂ ಪ್ರವಾಸಿಗರು ಮೃಗಾಲಯಕ್ಕೆ ಬರುವವರಿಗೆ ನಿಫಾ ವೈರಾಣುವಿನ ಸೋಂಕು ಇದ್ದರೆ ಅದು ಹರಡದಂತೆ ಜಾಗ್ರತೆ ವಹಿಸಲಾಗಿದೆ. ಮೃಗಾಲಯದ ಪ್ರವೇಶ ದ್ವಾರದಲ್ಲಿ ವೈರಾಣು ನಾಶ ಮಾಡುವ ಔಷಧಿ ಸಿಂಪಡಿಸಿರುವ ಮ್ಯಾಟ್ ಹಾಕಲಾಗಿದೆ. ಪ್ರವಾಸಿಗರು ಕಡ್ಡಾಯವಾಗಿ ಔಷಧಿ ಸಿಂಪಡಿಸಿರುವ ಮ್ಯಾಟ್ ಮೇಲೆ ನಡೆದುಕೊಂಡು ಬರುವಂತೆ ಸೂಚಿಸಲಾಗಿದೆ. ಟಿಕೆಟ್ ಪಡೆದು ಮೃಗಾಲಯದ ಒಳಗೆ ಬರುವವರಿಗೆ ಮ್ಯಾಟ್ ಹಾಸಿದ ಹಾದಿ ಹೊರತುಪಡಿಸಿ ಬೇರ್ಯಾವುದೇ ದಾರಿಯಿಲ್ಲದ ಹಿನ್ನೆಲೆಯಲ್ಲಿ ಪ್ರವಾಸಿಗರ ಶೂ ಮತ್ತು ಚಪ್ಪಲಿಯಲ್ಲಿ ವೈರಾಣುಗಳು ಅಂಟಿಕೊಂಡು ಬರುವ ಸಾಧ್ಯತೆ ಇರುವುದರಿಂದ ಪ್ರವೇಶ ದ್ವಾರದಲ್ಲಿ ವೈರಾಣು ನಾಶ ಮಾಡುವ ಸಾಮಥ್ರ್ಯವಿರುವ ಔಷಧಿಯನ್ನು ಸಿಂಪಡಿಸಿರುವ ಮ್ಯಾಟ್ ಹಾಸಲಾಗಿದೆ.

ಮರಗಳ ಕೆಳಗೆ ಸಿಂಪಡಣೆ: ಮೃಗಾಲಯದ ಆವರಣದಲ್ಲಿರುವ ಹಲವಾರು ಮರಗಳಲ್ಲಿ ಹತ್ತಾರು ಮರಗಳಲ್ಲಿ ಬಾವಲಿಗಳು ಆಶ್ರಯ ಪಡೆದಿವೆ. ನೂರಾರು ಸಂಖ್ಯೆಯಲ್ಲಿರುವ ಬಾವಲಿಗಳಲ್ಲಿ ಯಾವುದಾದರೂ ಬಾವಲಿಗೆ ನಿಫಾ ಸೋಂಕು ಇದ್ದರೆ ಅವುಗಳು ಹಾಕುವ ಪಿಕ್ಕೆಗಳಿಂದ ಇತರೆ ಪ್ರಾಣ ಮತ್ತು ಪಕ್ಷಿಗಳಿಗೆ ನಿಫಾ ವೈರಾಣು ಹರಡಬಹುದಾಗಿದ್ದು, ಈ ಹಿನ್ನೆಲೆಯಲ್ಲಿ ಬಾವಲಿಗಳಿರುವ ಮರದ ಕೆಳಗೆ ಸುತ್ತಲೂ ಔಷಧಿ ಸಿಂಪಡಿಸಲಾಗುತ್ತಿದೆ. ಇದರಿಂದ ಸೋಂಕು ತಲುಪುವ ಮುನ್ನವೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವುದು ಪ್ರಶಂಸೆಗೆ ಒಳಗಾಗಿದೆ.

 

ವೈರಾಣು ನಾಶಕ್ಕೆ ಕ್ರಮ….
ಮೈಸೂರು ಮೃಗಾಲಯದಲ್ಲಿ ನಿಫಾ ವೈರಾಣು ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಮೃಗಾಲಯದ ಆವರಣದಲ್ಲಿರುವ ಮಾವು ಹಾಗೂ ಹಲಸಿನ ಮರದಲ್ಲಿದ್ದ ಹಣ್ಣುಗಳನ್ನು ಕೀಳಿಸಲಾಗಿದೆ. ಮರದಲ್ಲಿ ಹಣ್ಣುಗಳಿದ್ದರೆ ಬಾವಲಿಗಳು ತಿನ್ನಬಹುದು. ಅರ್ಧ ತಿಂದ ಹಣ್ಣುಗಳು ಕೆಳಗೆ ಬಿದ್ದಾಗ ಅವುಗಳನ್ನು ಪ್ರಾಣ ಮತ್ತು ಪಕ್ಷಿಗಳು ತಿನ್ನಬಹುದು. ಈ ಹಿನ್ನೆಲೆಯಲ್ಲಿ ಈಗಾಗಲೇ ಮೃಗಾಲಯದಲ್ಲಿ ಸುಮಾರು 12 ಮಾವು ಮತ್ತು ಹಲಸಿನ ಮರದಲ್ಲಿದ್ದ ಎಲ್ಲಾ ಹಣ್ಣುಗಳನ್ನು ಕೀಳಲಾಗಿದೆ. ಇಲ್ಲಿನ ಹತ್ತಾರು ಮರಗಳಲ್ಲಿ ಬಾವಲಿಗಳು ಆಶ್ರಯ ಪಡೆದಿವೆ. ಅವುಗಳಿರುವ ಮರದ ಕೆಳಗೆ ವೈರಾಣು ನಾಶಕ `ಕೋಸ್ಟಲಿನ್’ ಹಾಗೂ ‘ವಿಕ್ರಾನ್’ ಔಷಧಿಯನ್ನು ಸಿಂಪಡಿಸಲಾಗುತ್ತಿದೆ. ಇದರಿಂದ ಬಾವಲಿಗಳು ಹಾಕಿರುವ ಪಿಕ್ಕೆಗಳಲ್ಲಿ ವೈರಾಣುಗಳಿದ್ದರೆ ಅವುಗಳು ಮಣ್ಣಲ್ಲಿಯೇ ನಾಶವಾಗಲೆಂಬ ಉದ್ದೇಶದಿಂದ ಮರದ ಕೆಳಗೆ ಔಷಧಿ ಸಿಂಪಡಿಸಲಾಗುತ್ತಿದೆ. ಪ್ರವಾಸಿಗರು ಬರುವ ಪ್ರವೇಶ ದ್ವಾರದಲ್ಲಿಯೂ ಔಷಧಿ ಸಿಂಪಡಿಸಿರುವ ಮ್ಯಾಟ್ ಹಾಸಲಾಗಿದೆ.
ಸಿ.ರವಿಶಂಕರ್, ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ,
ಮೈಸೂರು ಮೃಗಾಲಯ

.

Translate »