ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ 76ನೇ ಜನ್ಮದಿನ
ಮೈಸೂರು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ 76ನೇ ಜನ್ಮದಿನ

May 27, 2018

ಪ್ರತ್ಯಕ್ಷ ಪಾದಪೂಜೆ, ಶ್ರೀಗಳ ಆಧ್ಯಾತ್ಮಿಕ ಚಿಂತನೆ, ಸಂಗೀತ, ಸೇವಾ ಕಾರ್ಯಗಳ ಗುಣಗಾನ

ಮೈಸೂರು:  ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 76ನೇ ಜನ್ಮದಿನದ ಅಂಗವಾಗಿ ಶನಿವಾರ ಸ್ವಾಮೀಜಿಯವರಿಗೆ ಪ್ರತ್ಯಕ್ಷ ಪಾದಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಅಪಾರ ಭಕ್ತ ಸಮೂಹದ ನಡುವೆ ವೈಭವದಿಂದ ನೆರವೇರಿತು.

ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಶ್ರೀ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಸ್ವಾಮೀಜಿಯವರಿಗೆ ಆಶ್ರಮದ ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಪಾದಪೂಜೆ ನೆರವೇರಿಸಿದರು. ಭಕ್ತ ಸಮೂಹದ ಭಕ್ತಿಯ ಜೈಕಾರದೊಂದಿಗೆ ಸ್ವಾಮೀಜಿಯವರು ಪಾದಪೂಜೆ ಸ್ವೀಕರಿಸಿದರು.
ಸ್ವರ್ಣ ಸಿಂಹಾಸನದಲ್ಲಿ ಆಸೀನರಾಗಿದ್ದ ಸ್ವಾಮೀಜಿಯವರ ಪಾದಗಳಿಗೆ ಆಶ್ರಮದ ವಿಧಿವಿಧಾನಗಳಂತೆ ಕಿರಿಯ ಶ್ರೀಗಳು ಪೂಜೆ ಕೈಂಕರ್ಯ ನೆರವೇರಿಸಿದರು. ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ನಡೆದ ಪೂಜಾ ಕಾರ್ಯಕ್ರಮದಲ್ಲಿ ಆಶ್ರಮದ ಭಕ್ತರಾದ ನಾಗಪಾಣ ಶರ್ಮ ತಾವು ಸ್ವಾಮೀಜಿಯವರ ಕುರಿತಾಗಿ ಸಂಸ್ಕøತದಲ್ಲಿ ರಚಿಸಿರುವ ಸಹಸ್ರನಾಮ ವಾಚಿಸಿ, ಅದರ ತಾತ್ಪರ್ಯವನ್ನು ಭಕ್ತಾದಿಗಳಿಗೆ ತೆಲುಗು ಭಾಷೆಯಲ್ಲಿ ವಿವರಿಸಿದರು.

ಸಹಸ್ರನಾಮದಲ್ಲಿ ಸ್ವಾಮೀಜಿಯವರ ಆಧ್ಯಾತ್ಮಿಕ ಚಿಂತನೆ-ಸಾಧನೆ, ಸಂಗೀತ ಸಾಧನೆ ಹಾಗೂ ಸೇವಾ ಕಾರ್ಯಗಳು ಸೇರಿದಂತೆ ಅವರ ಬಹುಮುಖ ವ್ಯಕ್ತಿತ್ವದ ಆರಾಧನೆ ಮಾಡಲಾಯಿತು. ಬಳಿಕ ಸಿಂಹಾಸನದಲ್ಲಿ ಆಸೀನರಾಗಿದ್ದ ಸ್ವಾಮೀಜಿಯವರು, ಚಿನ್ನಾಭರಣಗಳನ್ನು ತೊಟ್ಟು ವಜ್ರದ ಕಿರೀಟ ಧರಿಸಿ ಭಕ್ತರಿಗೆ ದರ್ಶನ ನೀಡುತ್ತಿದ್ದಂತೆ ಕರತಾಳ ಹಾಗೂ ಜೈಕಾರದೊಂದಿಗೆ ಭಕ್ತಾದಿಗಳು ಭಕ್ತಿಯ ಪರಾಕಾಷ್ಠೆ ಮೆರೆದರು.

ಸ್ವಾಮೀಜಿಯವರ ಜನ್ಮದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಗೋವಾ ಪಂಚಾಯತ್ ರಾಜ್ ಸಚಿವ ಮೌವಿನ್ ಗಾಡಿನ್ಹೊ, ಸ್ವಾಮೀಜಿಯವರಿಗೆ ಗಣೇಶನ ವಿಗ್ರಹವನ್ನು ಕಾಣ ಕೆಯಾಗಿ ನೀಡಿ, ಆಶೀರ್ವಾದ ಪಡೆದು ಮಾತನಾಡಿ, ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಮ್ಮ ಅಪಾರವಾದ ಮಾನವೀಯ ಮೌಲ್ಯಗಳ ಮೂಲಕ ವಿಶ್ವ ಮಟ್ಟದಲ್ಲಿ ಖ್ಯಾತನಾಮರಾಗಿದ್ದಾರೆ. ದೈವಿಕ ಶಕ್ತಿ ಮೂಲಕ ಭಕ್ತರಿಗೆ ಸನ್ಮಾರ್ಗ ತೊರುತ್ತಿರುವ ಶ್ರೀಗಳು, ಕಠಿಣ ವಿಧಿವಿಧಾನಗಳ ಮೂಲಕ ದೈವಿಕ ಶಕ್ತಿಯಾಗಿ ರೂಪುಗೊಂಡಿದ್ದಾರೆ ಎಂದು ತಮ್ಮ ಭಕ್ತಿಭಾವ ವ್ಯಕ್ತಪಡಿಸಿದರು.

ಇದೇ ವೇಳೆ ತೆಲುಗು ಚಿತ್ರರಂಗದ ಹಾಸ್ಯನಟ ಡಾ.ರಾಜೇಂದ್ರ ಪ್ರಸಾದ್ ಅವರಿಗೆ `ಕಲಾ ನಿಧಿ’ ಪ್ರಶಸ್ತಿಯನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪ್ರದಾನ ಮಾಡಿದರು. ಜೊತೆಗೆ ಸ್ವಾಮೀಜಿಯವರ ಕಂಠಸಿರಿಯಲ್ಲಿ ಮೂಡಿಬಂದಿರುವ `ದಿವ್ಯ ನಾಮಾಂಮೃತ’ ಹಾಗೂ `ಕಾಲಾತ್ರಯ ರಾಗ ಸಾಗರ’ ಸಿಡಿಗಳನ್ನು ಬಿಡುಗಡೆ ಮಾಡಲಾಯಿತು.
ಬಳಿಕ ಆಶ್ರಮದ ಸಹಾಯಧನದಲ್ಲಿ ಬನ್ನಿಮಂಟಪದ ಪೌರಕಾರ್ಮಿಕರ ಕಾಲೋನಿಯಲ್ಲಿ ನಿರ್ಮಿಸಿರುವ ಮಾರಮ್ಮನ ದೇವಸ್ಥಾನ ಉದ್ಘಾಟನೆಗೆ ಸ್ವಾಮೀಜಿಯವರಿಗೆ ಆಹ್ವಾನ ನೀಡಲಾಯಿತು. ದೇವಸ್ಥಾನದ ಬೃಹತ್ ಛಾಯಾಚಿತ್ರವನ್ನು ಮಾಜಿ ಮೇಯರ್ ನಾರಾಯಣ ಮತ್ತು ಇನ್ನಿತರ ಮುಖಂಡರು ಸ್ವಾಮೀಜಿಯವರಿಗೆ ನೀಡಿ ಜೂ.18ರಂದು ದೇವಸ್ಥಾನದ ಉದ್ಘಾಟನೆ ನೆರವೇರಿಸಲು ಆಹ್ವಾನ ನೀಡಿದರು. ಇದೇ ವೇಳೆ ಅಂದು 500 ಜೋಡಿಗಳ ಸಾಮೂಹಿಕ ವಿವಾಹವನ್ನು ಆಶ್ರಮದ ವತಿಯಿಂದ ನಡೆಸಲಾಗುತ್ತಿದೆ ಎಂದು ಪ್ರಕಟಿಸಲಾಯಿತು.

ನಂತರ ಆಶೀರ್ವಚನ ನೀಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಭಕ್ತರನ್ನು ಉದ್ದೇಶಿಸಿ `ಹ್ಯಾಪಿ ಬರ್ತ್ ಡೇ ಟು ಯು’ ಎಂದು ಹೇಳುವ ಮೂಲಕ ಇಂದು ನನ್ನ ಜನ್ಮದಿನವಲ್ಲ, ನಿಮ್ಮ ಜನ್ಮದಿನ ಎಂದರು. ಭಕ್ತರಾದ ನಾಗಪಾಣ ಶರ್ಮರವರು ನನ್ನ ಕುರಿತು ಬರೆದಿರುವ ಸಹಸ್ರನಾಮದಲ್ಲಿ ಅದ್ಭುತವಾಗಿ ಪದಪುಂಜ ಜೋಡಿಸಿದ್ದಾರೆ. ತುಂಬ ಸಂತೋಷವಾಯಿತು. ಇಂದು ನೆರವೇರಿದ ಪ್ರತ್ಯಕ್ಷ ಪಾದಪೂಜೆ ವರ್ಷಕ್ಕೆ ಒಮ್ಮೆ ಮಾತ್ರ ನಡೆಯುತ್ತದೆ. ಈ ಪೂಜೆಯ ಹಿನ್ನೆಲೆ ಹಾಗೂ ಮಹತ್ವ ಕುರಿತು ತಿಳಿದುಕೊಳ್ಳಬೇಕೆಂದರೆ, `ಗುರುಗೀತ’ ಪುಸ್ತಕ ಅವಲೋಕಿಸಿದರೆ ಸಾಕು. ಎಲ್ಲಾ ಭಾಷೆಗಳಲ್ಲೂ ಈ ಪುಸ್ತಕ ಹೊರಬಂದಿದ್ದು, ಆಸಕ್ತರು ಪುಸ್ತಕ ಓದಬಹುದು ಎಂದು ಸಲಹೆ ನೀಡಿದರು.
ಪಾದ ಪೂಜೆಗೂ ಮುನ್ನ ಶ್ರೀಚಕ್ರ ಪೂಜೆ ನೆರವೇರಿತು. ಜೊತೆಗೆ ಅಖಿಲ ಭಾರತ ದತ್ತ ಜ್ಞಾನಬೋಧ ಸಭಾ (ದೇಶದ ವಿವಿಧ ಭಾಗಗಳಲ್ಲಿರುವ ಆಶ್ರಮದ ಶಾಖೆಗಳು) ಹಾಗೂ ದತ್ತಯೋಗ ಸೆಂಟರ್‍ನಲ್ಲಿ (ವಿದೇಶದಲ್ಲಿರುವ ಶಾಖೆಗಳು) ಸಮ್ಮೇಳನ ಜರುಗಿತು.

ಅನೇಕ ವೇಳೆ ಹಲವು ಮಂದಿ `ನೀವು ಸಂಗೀತ ವಿದ್ವಾಂಸರೇ ಇಲ್ಲ, ಆಧ್ಯಾತ್ಮಿಕ ಚಿಂತಕರೇ ಅಥವಾ ಸ್ವಾಮೀಜಿಗಳೇ? ನಿಮ್ಮನ್ನು ಯಾವ ಪದನಾಮದಿಂದ ಕರೆಯಬೇಕು’ ಎಂದು ಕೇಳಿದ್ದುಂಟು. ಈ ಸಂದರ್ಭದಲ್ಲಿ `ನಾನು ನಿಮ್ಮ ಉತ್ತಮ ಗೆಳೆಯನಷ್ಟೇ’ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಕ್ತರನ್ನು ಉದ್ದೇಶಿಸಿ ಹೇಳಿದರು.

ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 76ನೇ ಜನ್ಮದಿನದ ಅಂಗವಾಗಿ ಶನಿವಾರ ಸ್ವಾಮೀಜಿಯವರಿಗೆ ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಪ್ರತ್ಯಕ್ಷ ಪಾದಪೂಜೆ ನೆರವೇರಿಸಿದರು. ಮತ್ತೊಂದು ಚಿತ್ರದಲ್ಲಿ ಭಕ್ತ ಸಮೂಹವನ್ನು ಕಾಣಬಹುದು.

Translate »