ಯಾಂತ್ರಿಕ ಪೂಜಾ ವಿಧಿವಿಧಾನಗಳು ಫಲ ನೀಡಲ್ಲ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಭಿಮತ
ಮೈಸೂರು

ಯಾಂತ್ರಿಕ ಪೂಜಾ ವಿಧಿವಿಧಾನಗಳು ಫಲ ನೀಡಲ್ಲ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಭಿಮತ

August 20, 2018

ಮೈಸೂರು: ಮಹಾ ದಾರ್ಶನಿಕ ಶ್ರೀರಾಮಾನುಜಾಚಾರ್ಯರರು ದೇವತಾ ಪ್ರಾರ್ಥನೆಯಲ್ಲಿ ಭಕ್ತಿನಿಷ್ಠೆಯ ಮಹತ್ವವನ್ನು ಸಾರಿದ್ದಾರೆ. ಆದರೆ ಪ್ರಸ್ತುತ ಬಹುತೇಕರು ಭಕ್ತಿನಿಷ್ಠೆಗೆ ಆದ್ಯತೆ ನೀಡಿದೇ ಯಾಂತ್ರಿಕವಾಗಿ ಪೂಜಾ ಕೈಂಕರ್ಯ ನೆರವೇರಿಸುವ ಪ್ರವೃತ್ತಿಯಲ್ಲಿ ತೊಡಗಿದ್ದು, ಯಾಂತ್ರಿಕ ಪೂಜಾ ವಿಧಿವಿಧಾನಗಳು ಫಲ ನೀಡುವುದಿಲ್ಲ ಎಂದು ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.

ಶ್ರೀರಾಮಾನುಜ ಸಹಸ್ರಮಾನ ಸಭಾ ಟ್ರಸ್ಟ್ ವತಿಯಿಂದ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಗವದ್ ಶ್ರೀರಾಮಾನುಜರ ಸಹಸ್ರಮಾನೋತ್ಸವದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭಗವಂತನ ಪೂಜಾ ಕೈಂಕರ್ಯವನ್ನು ದಾವಂತದಲ್ಲಿ ನೆರವೇರಿಸುವ ಪ್ರವೃತ್ತಿಯಿಂದ ಯಾವುದೇ ಪ್ರಯೋಜನ ಆಗದು. ಪೂಜಾ ವಿಧಿವಿಧಾನದಲ್ಲಿ ಏಕಾಗ್ರತೆಯ ಮೂಲಕ ಸಂಪೂರ್ಣ ತೊಡಗಿಸಿಕೊಂಡರೆ ಮಾತ್ರ ಪೂಜೆಯ ಫಲ ದೊರೆಯಲು ಸಾಧ್ಯ. ಅಂತಹ ಭಕ್ತಿನಿಷ್ಠೆ ನಮ್ಮಲ್ಲಿರಬೇಕು ಎಂದು ನುಡಿದರು.

ಪರಮಾತ್ಮರೇ ರಾಮಾನುಜರ ಸ್ವರೂಪದಲ್ಲಿ ಬಂದು ಧರ್ಮ ಪ್ರಚಾರ ಮಾಡಿದ್ದಾರೆ. ಈ ರೀತಿಯ ಭಗವಂತನ ಸಂಕಲ್ಪದಿಂದ ಅನೇಕ ಮಹಾತ್ಮರು ಭೂಮಿ ಮೇಲೆ ಜನ್ಮತಾಳಿ ಸಮಾಜದ ಏಳಿಗೆಗೆ ಕೊಡುಗೆ ನೀಡಿದ್ದಾರೆ. ರಾಮಾನುಜರ ಜೀವನವೇ ನಮಗೆ ಆದರ್ಶ. ಅವರ ಸ್ಮರಣೆ ನಮ್ಮ ಬದುಕಿನಲ್ಲಿ ಪ್ರತಿದಿನವೂ ಆಗಬೇಕು. ಆ ಮೂಲಕ ಅವರ ತತ್ವ-ಉಪದೇಶಗಳು ನಮ್ಮ ಬದುಕಿನಲ್ಲಿ ಆಚರಣೆಗೆ ಬರಬೇಕು ಎಂದು ಹೇಳಿದರು.

ರಾಮಾನುಜರು ಹಾಗೂ ಅವರ ತತ್ವಗಳ ಕುರಿತಂತೆ ಸಾಕಷ್ಟು ಪುಸ್ತಕಗಳು ವಿವಿಧ ಭಾಷೆಗಳಲ್ಲಿ ಪ್ರಕಟಗೊಂಡಿವೆ. ಇವುಗಳನ್ನು ಓದಿದರೆ ರಾಮಾನುಜರ ಬದುಕಿನ ಅಚ್ಚರಿ ಹಾಗೂ ವೈಶಿಷ್ಟ್ಯಗಳು ತೆರೆದುಕೊಳ್ಳಲಿವೆ. ಮಹಿಳಾ ಸಮುದಾಯದಲ್ಲಿ ಬಹುತೇಕರು ದೂರದರ್ಶನದ ಧಾರಾವಾಹಿಗಳ ವೀಕ್ಷಣೆಯಲ್ಲೇ ಹೆಚ್ಚು ಕಾಲ ಕಳೆಯುವ ಪ್ರವೃತ್ತಿ ಇಂದು ಹೆಚ್ಚಾಗುತ್ತಿದ್ದು, ರಾಮಾನುಜರು ಸೇರಿದಂತೆ ಇಂತಹ ಮಹಾಮಹಿಮರ ಕುರಿತ ಪುಸ್ತಕಗಳನ್ನು ಓದಲೂ ಒಂದಿಷ್ಟು ಸಮಯ ಮೀಸಲಿಟ್ಟಿರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.

ಸಂಕಷ್ಟದಿಂದ ಪಾರಾಗಲಿ: ನೆರೆಯ ಜಿಲ್ಲೆ ಕೊಡಗಿನಲ್ಲಿ ಮಳೆಯ ಅಬ್ಬರದಿಂದ ಉಂಟಾಗಿರುವ ಪ್ರಕೃತಿ ವಿಕೋಪ ತಣ್ಣಾಗಾಗಿ ಸಂಕಷ್ಟಕ್ಕೆ ಸಿಲುಕಿರುವ ಜನತೆ ಸುರಕ್ಷಿತವಾಗಿರಲಿ ಎಂದು ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಇದೇ ವೇಳೆ ದೇವರಲ್ಲಿ ಪ್ರಾರ್ಥಿಸಿದರು.

ಶ್ರೀರಾಮಾನುಜ ಸಹಸ್ರಮಾನ ಸಭಾ ಟ್ರಸ್ಟ್ ಉಪಾಧ್ಯಕ್ಷ ಹೆಚ್.ವಿ.ಎಲ್.ಎನ್.ಆಚಾರ್ ಪ್ರಸ್ತಾವಿಕವಾಗಿ ಮಾತನಾಡಿ, ಎರಡೂವರೆ ವರ್ಷಗಳ ಕಾಲ ಶ್ರೀರಾಮಾನುಜರ ಸಹಸ್ರಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ರಾಮಾನುಜರ ಸಂದೇಶ ಪಸರಿಸಲು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಮನೆ-ಮನೆಗೂ ರಾಮಾನುಜ, ಚಿಣ್ಣರಿಗಾಗಿ ರಾಮಾನುಜ ಎಂಬುದೂ ಸೇರಿದಂತೆ ನಾನಾ ಕಾರ್ಯಕ್ರಮಗಳ ಮೂಲಕ ರಾಮಾನುಜರ ತತ್ವ ಸಿದ್ಧಾಂತಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯ ನಡೆಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ `ಸಹಸ್ರ ಫಣಿ’ ಎಂಬ ಸ್ಮರಣ ಸಂಚಿಕೆಯನ್ನು ಹಿರಿಯ ವಿದ್ವಾಂಸ ಪ್ರೊ.ಕೆ.ಎಸ್.ನಾರಾಯಣಾಚಾರ್ಯ ಬಿಡುಗಡೆ ಮಾಡಿದರು. ಶ್ರೀರಂಗಪಟ್ಟಣ ತಾಲೂಕು ಮಂಟಿ ಬೆಳಗೊಳದ ಶ್ರೀಲಕ್ಷ್ಮೀನರಸಿಂಹ ಕ್ಷೇತ್ರದ ಶ್ರೀ ವೀರರಾಘವಾಚಾರ್ಯ ಸ್ವಾಮೀಜಿ, ವಾಗ್ಮಿ ಡಾ.ಹೆಚ್.ವಿ.ನಾಗರಾಜರಾವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಬಿಜೆಪಿ ನಗರ ಕಾರ್ಯದರ್ಶಿ ಹೆಚ್.ವಿ.ರಾಜೀವ್, ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ಡಾ.ಚಕ್ರವರ್ತಿ ರಾಮಚಂದ್ರನ್, ಶ್ರೀರಾಮಾನುಜ ಸಹಸ್ರಮಾನ ಸಭಾ ಟ್ರಸ್ಟ್‍ನ ಬಿ.ಎಸ್.ಪಾರ್ಥಸಾರಥಿ ಮತ್ತಿತರರು ಹಾಜರಿದ್ದರು.

Translate »