ಹಕ್ಕಿಗಾಗಿ ಮಹಿಳೆಯರು ಚಳವಳಿಯನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕಿದೆ : ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್
ಮೈಸೂರು

ಹಕ್ಕಿಗಾಗಿ ಮಹಿಳೆಯರು ಚಳವಳಿಯನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕಿದೆ : ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್

August 20, 2018

ಮೈಸೂರು: ಭಾರತದ ಸಂವಿಧಾನ ಮಹಿಳಾ ಸಮುದಾಯದ ಹಕ್ಕುಗಳನ್ನು ಎತ್ತಿಹಿಡಿದಿದ್ದು, ರಾಜಕೀಯ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಚಳವಳಿಗಳನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಹೇಳಿದರು.

ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ `ಮಹಿಳೆ-ರಾಜಕಾರಣ-ಹೊಸದಿಕ್ಕು, ಚುನಾವಣೆ : ಒಳ ಹೊರಗೆ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಕಂಜರ ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಶಿಕ್ಷಿತರಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ವಿಷಯದಲ್ಲಿಯೂ ಇಂದು ಮಹಿಳಾ ಚಳವಳಿ ಪರಿಣಾಮಕಾರಿಯಾಗಿದ್ದರೆ ಅದಕ್ಕೆ ದೇಶದ ಸಂವಿಧಾನವೇ ಕಾರಣ. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯಗಳು ವ್ಯಾಪಕವಾಗುತ್ತಿದ್ದು, ಇವುಗಳಲ್ಲಿ ಬಹುತೇಕ ಪ್ರಕರಣಗಳು ಮುಚ್ಚಿ ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಇಂದಿನ ರಾಜಕಾರಣ ಎಂದರೆ ಕೇವಲ ಹಣ ಮಾಡುವುದೇ ಮುಖ್ಯ ಉದ್ದೇಶವಾಗಿದೆ. ರಾಜಕೀಯ ಪ್ರವೇಶಿಸಿದ ನಂತರ ಹೇಗಾದರೂ ಸರಿ ಹಣ ಮಾಡಬೇಕು. ಅದರಲ್ಲಿ ಒಂದಿಷ್ಟು ಪಾಲನ್ನು ನಾವು ಬಳಸಿಕೊಂಡು, ಉಳಿದಿದ್ದನ್ನು ಪಕ್ಷಕ್ಕೆ ನೀಡಬೇಕು ಎಂಬಂತಹ ರಾಜಕೀಯ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಕಿಡಿಕಾರಿದರು.

ಸರ್ಕಾರಗಳು ಮೂಢನಂಬಿಕೆಗಳನ್ನು ಹೋಗಲಾಡಿಸಿ, ವೈಚಾರಿಕ ವಿಚಾರಗಳನ್ನು ಬಿತ್ತುವ ಕಾರ್ಯ ಮಾಡಬೇಕು. ಜನಪ್ರತಿನಿಧಿಗಳು ದೇವಸ್ಥಾನಗಳನ್ನು ಸುತ್ತುವುದನ್ನು ಬಿಟ್ಟು, ಜನ ಸೇವೆಯಲ್ಲಿ ತೊಡಗಿಸಿಕೊಂಡು ವೈಚಾರಿಕ ಚಿಂತನೆಗಳನ್ನು ಸಮಾಜದಲ್ಲಿ ಬಿತ್ತುವ ಮನೋಭಾವ ಬೆಳೆಸಿಕೊಳ್ಳಬೇಕು. ನಿತ್ಯ ಸಾವಿರಾರು ಜನರಿಂದ ತುಂಬಿ ತುಳುಕುವ ಅಕ್ಕಲಕೋಟೆಗೆ ಹೋಗುವ ರೈಲಿನಲ್ಲಿ ಚಂದ್ರಗ್ರಹಣದಂದು ರಾತ್ರಿ ನನ್ನ ಜತೆ ನಾಲ್ಕು ಮಂದಿ ಮಾತ್ರ ಪ್ರಯಾಣಿಕರಿದ್ದರು. ಏಕೆ ಎಂದು ರೈಲ್ವೆ ಸಿಬ್ಬಂದಿಯವರಲ್ಲಿ ವಿಚಾರಿಸಿದಾಗ ಗ್ರಹಣ ಎಂದು ಯಾರೂ ಪ್ರಯಾಣ ಮಾಡುತ್ತಿಲ್ಲ. ಇಲ್ಲದಿದ್ದರೆ, ರೈಲಿನಲ್ಲಿ ಕಾಲಿಡಲಾಗದಷ್ಟು ದಟ್ಟಣೆ ಇರುತ್ತಿತ್ತು ಎಂಬ ವಿಚಾರ ಗೊತ್ತಾಯಿತು. ಇದು ಪ್ರಸ್ತುತ ಸಮಾಜದಲ್ಲಿ ಬೇರೂರಿರುವ ಮೌಢ್ಯ ಪ್ರತಿಬಿಂಬ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಉಮಾಪತಿ ಮಾತನಾಡಿ, ಮಹಿಳಾ ಸಮುದಾಯವನ್ನು ಧರ್ಮಶಾಸ್ತ್ರಗಳ ಬಂಧನಕ್ಕೆ ಒಳಪಡಿಸಿ, ಎರಡನೇ ದರ್ಜೆಯವರಾಗಿ ಕಾಣಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮಹಿಳಾ ಮೀಸಲಾತಿ ನೀಡಿದಂತೆ ವಿಧಾನಸಭೆ ಹಾಗೂ ಲೋಕಸಭೆಗಳಲ್ಲಿ ಮಹಿಳಾ ಮೀಸಲಾತಿ ಕಲ್ಪಿಸಬೇಕೆಂದು ಹೋರಾಟ ನಡೆಯುತ್ತಲೇ ಇದೆ. ಎಲ್ಲಾ ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುತ್ತವೆ. ಆದರೆ ಮಹಿಳೆಯರಿಗೆ ಟಿಕೆಟ್ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಸಂಘದ ನಂದಿನಿ ಜಯರಾಮ್ ಮಾತನಾಡಿ, ಇಂತಹ ಸಂವಾದ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದ ಮಹಿಳೆಯರನ್ನೂ ಒಳಗೊಳ್ಳಬೇಕು. ಪ್ರತಿಯೊಬ್ಬ ಮಹಿಳೆಯರು ತಮ್ಮ ಏಳಿಗೆಗಾಗಿ ದುಡಿಯುವ ಇತರೆ ಮಹಿಳೆಯರನ್ನು ಗೌರವಿಸುವ ಮೂಲಕ ಸಂಘಟಿತರಾಗುವುದು ಅವಶ್ಯಕ ಎಂದು ತಿಳಿಸಿದರು. ಜಿಪಂ ಮಾಜಿ ಅಧ್ಯಕ್ಷೆ ಡಾ.ಪುಷ್ಪ ಅಮರ್‍ನಾಥ್, ಮಹಿಳಾಪರ ಹೋರಾಟಗಾರರಾದ ರತಿರಾವ್, ಮಾಲವಿಕ ಗುಬ್ಬಿವಾಣಿ ಮತ್ತಿತರರು ಹಾಜರಿದ್ದರು.

Translate »