ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ-70 ಅಭಿನಂದನಾ ಸಮಾರಂಭ: ಪ್ರಕಾಶನ ವೀರ ಡಿ.ಎನ್.ಲೋಕಪ್ಪ
ಮೈಸೂರು

ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ-70 ಅಭಿನಂದನಾ ಸಮಾರಂಭ: ಪ್ರಕಾಶನ ವೀರ ಡಿ.ಎನ್.ಲೋಕಪ್ಪ

August 20, 2018

ವಿಮರ್ಶಕ ಡಾ.ಎನ್.ಎಸ್.ತಾರಾನಾಥ್ ಬಣ್ಣನೆ
ಮೈಸೂರು:  ಕಳೆದ ಮೂರೂವರೆ ದಶಕಗಳಿಂದ ಕನ್ನಡದ ಹಿರಿಯ ಲೇಖಕರಿಂದ ಇತ್ತೀಚಿನ ಯುವ ಲೇಖಕರವರೆಗೆ 1100ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಮೈಸೂರಿನ ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ ಅವರು 70ನೇ ವಸಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಡಿ.ಎನ್.ಲೋಕಪ್ಪ ಅಭಿನಂದನಾ ಸಮಿತಿ ಆಶ್ರಯದಲ್ಲಿ ಅವರ ಗೆಳೆಯರು, ಅಭಿಮಾನಿಗಳು ಭಾನುವಾರ ಮೈಸೂರಿನಲ್ಲಿ ಆತ್ಮೀಯವಾಗಿ ಅಭಿನಂದಿಸಿದರು.

ಮೈಸೂರಿನ ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಿರಿಗೆರೆ ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸುತ್ತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಡಿ.ಎನ್.ಲೋಕಪ್ಪ ಮತ್ತು ಅವರ ಪತ್ನಿ ಮಹೀಂದ್ರ ಮಣಿ ಲೋಕಪ್ಪ ಅವರಿಗೆ ಮರದ ಕೆತ್ತನೆಯ ಬೃಹತ್ ಗಾತ್ರದ ಸರಸ್ವತಿ ವಿಗ್ರಹ ನೀಡಿ, ಪೇಟ ತೊಡಿಸಿ, ಶಾಲು ಹೊದಿಸಿ ಅಭಿನಂದಿಸಿದರು.

ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಧ್ಯಕ್ಷತೆಯಲ್ಲಿ `ಲೋಕಪ್ರಿಯ’ ಅಭಿನಂದನಾ ಗ್ರಂಥ ಹಾಗೂ ಲೋಕಪ್ಪ ಅವರನ್ನು ಕುರಿತು ಜೀನಹಳ್ಳಿ ಸಿದ್ಧಲಿಂಗಪ್ಪ ಬರೆದ `ಪುಸ್ತಕ ಪ್ರೇಮಿ ಲೋಕಪ್ರಿಯ ಲೋಕಪ್ಪ’ ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿ.ಎನ್.ಲೋಕಪ್ಪ ಅವರನ್ನು ಅಭಿನಂದಿಸಿ ಮಾತನಾಡಿದ ಹಿರಿಯ ವಿಮರ್ಶಕ ಡಾ.ಎನ್.ಎಸ್.ತಾರಾನಾಥ್, ಮೈಸೂರಿನಲ್ಲಿ ಅನೇಕ ಪ್ರಕಾಶನ ಸಂಸ್ಥೆಗಳು ಸ್ಥಗಿತಗೊಂಡ ಹೊತ್ತಿನೊಳಗೆ ಡಿ.ಎನ್.ಲೋಕಪ್ಪ ಪ್ರಕಾಶನ ಸಂಸ್ಥೆ ಪ್ರಾರಂಭಿಸಿ, ಓದುಗರಲ್ಲಿ ಪುಸ್ತಕ ಪ್ರೀತಿಯನ್ನು ವರ್ಧಿಸಿದ್ದಾರೆ. ಮೂರೂವರೆ ದಶಕದಿಂದ ಲೇಖಕರು, ಓದುಗರು, ವಿದ್ಯಾರ್ಥಿಗಳಿಗೆ, ಅಭ್ಯಾಸಿಗಳಿಗೆ ಇಷ್ಟವಾಗುವ ಕೆಲಸದಲ್ಲಿ ನಿರತರಾಗಿದ್ದಾರೆ. 1980ರ ದಶಕದಿಂದ ಸಂವಹನ ಪ್ರಕಾಶನದ ಮೂಲಕ ಕಾವ್ಯ, ಕಾದಂಬರಿ, ನಾಟಕ, ಶಾಸ್ತ್ರ ಸಾಹಿತ್ಯ, ವಿಜ್ಞಾನ, ಮಾನವಿಕ, ಧರ್ಮ, ವಿಚಾರ ವಿಮರ್ಶೆ ಸೇರಿದಂತೆ 1100 ಪುಸ್ತಕಗಳನ್ನು ಪ್ರಕಟಿಸಿ, ಅವರು ಮಾಡಿರುವುದು ಬಹು ದೊಡ್ಡ ಸಾಧನೆಯೇ ಹೌದು ಎಂದರು.

ಇವರ ಪ್ರಕಾಶನದಲ್ಲಿ ಎಳೆಯರಿಂದ ಹಿರಿಯರವರೆಗೆ ಪ್ರಕಟಿತ ಕೃತಿಗಳು ವೈವಿಧ್ಯಮಯ, ಪ್ರಕಾರ ವಸ್ತುಗಳಾಗಿವೆ. ಸಿಪಿಕೆ, ರಾಗೌ ಸೇರಿದಂತೆ ಇನ್ನಿತರ ಸಮಗ್ರ ಕಾವ್ಯಗಳಿವೆ. ಮಹಾಕಾವ್ಯಗಳನ್ನು ಪ್ರಕಟಿಸಿದ್ದಾರೆ. ನಾಟಕಗಳ ಸಮಗ್ರ ಸಂಪುಟಗಳನ್ನು ಹೊರ ತಂದಿದ್ದಾರೆ. ಇವರದ್ದು ಬಹು ದೊಡ್ಡ ಸಾರಸ್ವತ ಸೇವೆ. ಅರಸೀಕೆರೆಯ ಹೊಯ್ಸಳೇಶ್ವರ ಕಾಲೇಜಿನಲ್ಲಿ ಗ್ರಂಥಪಾಲಕರಾಗಿದ್ದ ಲೋಕಪ್ಪ, ಅದನ್ನು ಬಿಟ್ಟು ಪ್ರಕಾಶನ ವೃತ್ತಿ ಆರಿಸಿಕೊಂಡಿದ್ದಲ್ಲದೆ, ಪುಸ್ತಕದ ಮೂಲಕ ಮೌಲ್ಯ ಪ್ರಸಾರ ಸಾಧ್ಯ ಎಂಬುದನ್ನು ಕಂಡುಕೊಂಡರು ಎಂದು ಹೇಳಿದರು.

ಇಂದಿನ ಧಾವಂತದ ಬದುಕಿನ ನಡುವೆ ಪುಸ್ತಕ ಓದುವಿಕೆ ನಮ್ಮ ಭಾವನಾತ್ಮಕ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಪ್ರಕಾಶನದ ಮೂಲಕ ಸಾಮಾಜಿಕ ಸೇವೆ, ಸಂಸ್ಕøತಿ ಸೇವೆ ಮಾಡುತ್ತಿರುವ ಲೋಕಪ್ಪ, ಧೈರ್ಯದಿಂದ ಪುಸ್ತಕೋಪಾಸನೆಯಲ್ಲಿ ತೊಡಗಿರುವ ಪ್ರಕಾಶನ ವೀರ ಎಂದು ಬಣ್ಣಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಚಿವ ಅಡಗೂರು ಹೆಚ್.ವಿಶ್ವನಾಥ್ ಮಾತನಾಡಿ, ನಾನು ವಿದ್ಯಾಮಂತ್ರಿಯಾಗದ್ದ ವೇಳೆ ಪುಸ್ತಕ ಖರೀದಿ ಸಮಿತಿ ಸದಸ್ಯರಾಗಿದ್ದ ಲೋಕಪ್ಪನವರು ಸರಳ ಹಾಗೂ ಸ್ನೇಹ ಜೀವಿ. ಅವರು ಪ್ರಕಟಿಸಿದ 1100 ಪುಸ್ತಕಗಳ ನಡುವೆ ನನ್ನ `ಮತ ಸಂತೆ’ಯೂ ಒಂದಾಗಿದೆ. ನಾನು ಚುನಾವಣೆ ಸಂದರ್ಭದಲ್ಲಿ ಚುನಾವಣೆ ಮತ್ತು ಫಲಿತಾಂಶದ ನಡುವೆ ಅನುಭವಿಸಿದ ಯಾತನೆ ಕುರಿತು ಬರೆದಿದ್ದೇನೆ. ಕೇವಲ ಒಂದು ವಾರದಲ್ಲಿ ಲೋಕಪ್ಪ `ಮತ ಸಂತೆ’ ಪುಸ್ತಕ ಮುದ್ರಿಸಿಕೊಟ್ಟರು. ಇದಕ್ಕೆ ಸಿಪಿಕೆ ಮುನ್ನುಡಿ ಬರೆದಿದ್ದಾರೆ. ಸಂವಹನ ಪ್ರಕಾಶನದಲ್ಲಿ ಗ್ರೀಸ್ ಮೇಲೆ ಬರೆದ ನನ್ನ 7ನೇ ಪುಸ್ತಕ `ದಿ ಅಡ್ಮಿನಿಸ್ಟ್ರೇಷನ್ ಆಫ್ ಅಥೆನ್ಸ್’ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ಹೇಳಿದರು.

ಪುಸ್ತಕ ಉದ್ಯಾನ ಮಾಡಬೇಕೆಂಬ ಹಂಬಲ ಲೋಕಪ್ಪನವರಿಗಿದೆ. ನಮ್ಮಂಥ ರಾಜಕಾರಣಿಗಳಿಗೆ ಪುಸ್ತಕ ಮತ್ತು ಉದ್ಯಾನ ಎರಡೂ ಅರ್ಥವಾಗಲ್ಲ. ಪುಸ್ತಕ ಉದ್ಯಾನವನದ ಅವರ ಕನಸು ಈಡೇರಲಿ ಎಂದು ಅವರು ಶುಭ ಹಾರೈಸಿದರು.

ಸಮಾರಂಭದಲ್ಲಿ ಕವಿಯತ್ರಿ ಡಾ.ಲತಾ ರಾಜಶೇಖರ್, ಮಾಜಿ ಎಂಎಲ್‍ಸಿ ತೋಂಟದಾರ್ಯ, ಮಾಜಿ ಸಚಿವ ದಿ.ಹೆಚ್.ಎಸ್.ಮಹದೇವಪ್ರಸಾದ್ ಪುತ್ರ ಹೆಚ್.ಎಂ.ಗಣೇಶ್ ಪ್ರಸಾದ್, ಅಭಿನಂದನಾ ಸಮಿತಿಯ ಅಧ್ಯಕ್ಷ ಮ.ಗು.ಸದಾನಂದಯ್ಯ ಇನ್ನಿತರರು ಉಪಸ್ಥಿತರಿದ್ದರು.

ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ; ದೊಡ್ಡ ವಿಸ್ಮಯ
ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿರುವುದೇ 2018ರ ಬಹು ದೊಡ್ಡ ವಿಸ್ಮಯ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ನನ್ನ ಹೆಸರು ಪ್ರಕಟ ಮಾಡಿದಾಗ ನಾನು ಆ ಕಡೆ ಈ ಕಡೆ ನೋಡುವಂತಾಯಿತು. ಇದೊಂದು ದೊಡ್ಡ ವಿಸ್ಮಯವೇ ಹೌದು. ಇದು ನನ್ನ ಮೇಲಿಟ್ಟಿರುವ ನಂಬಿಕೆ ಎಂದು ಅಡಗೂರು ವಿಶ್ವನಾಥ್ ನುಡಿದರು.

Translate »