ಚಾಮರಾಜನಗರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿ
ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿ

September 19, 2018

ಚಾಮರಾಜನಗರ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಾಗಿ ಹತೋಟಿಯಲ್ಲಿ ಇದೆ ಎಂದು ದಕ್ಷಿಣ ವಲಯ ಐಜಿಪಿ ಶರತ್‍ಚಂದ್ರ ತಿಳಿಸಿದರು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ತುರ್ತು ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿದೆ. ಕಾನೂನು ಸುವ್ಯವಸ್ಥೆ, ಸಂಚಾರದ ವ್ಯವಸ್ಥೆ ಸೇರಿದಂತೆ ಎಲ್ಲವೂ ಹತೋಟಿಯಲ್ಲಿ ಇದೆ. ಅಪರಾಧ ಪ್ರಕರಣಗಳು ಹೆಚ್ಚಾಗಿಲ್ಲ ಎಂದರು.

ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಶೇ.3 ರಿಂದ 4 ರಷ್ಟು ಸಿಬ್ಬಂದಿಗಳ ಕೊರತೆ ಇದೆ. 75 ಹೊಸ ಕಾನ್ಸ್‍ಟೇಬಲ್‍ಗಳು ಹೊಸದಾಗಿ ಸೇವೆಗೆ ಸೇರ್ಪಡೆ ಆಗಿದ್ದಾರೆ. ಇನ್ನೂ 100 ಕಾನ್ಸ್‍ಟೇಬಲ್ ಹುದ್ದೆ ಖಾಲಿ ಇದೆ ಎಂದು ಅವರು ಹೇಳಿದರು.

ಕೊಳ್ಳೇಗಾಲ ಭಾಗದಲ್ಲಿ ನಡೆಯುತ್ತಿದ್ದ ಮರಳು ದಂಧೆ ನಿಂತಿದೆ. ಅಕ್ರಮವಾಗಿ ಮರಳು ಸಾಗಣೆ ನಿಯಂತ್ರಣಕ್ಕೆ ಕಾರ್ಯ ಪಡೆಯನ್ನು ಅಸ್ಥಿತ್ವಕ್ಕೆ ತರಲಾಗಿದೆ. ಇದೇ ಭಾಗದಲ್ಲಿ (ಕೊಳ್ಳೇಗಾಲ) ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವುದು ಹೆಚ್ಚಾಗಿ ರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಈಗಾಗಲೇ 25 ಪ್ರಕರಣಗಳು ಈ ವರ್ಷ ದಾಖಲಾಗಿವೆ. ಇದರ ನಿಯಂತ್ರಣಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಕ್ರಮಗೊಳ್ಳಲಾಗಿದೆ ಎಂದು ಶರತ್‍ಚಂದ್ರ ತಿಳಿಸಿದರು.

ಜಿಲ್ಲೆಯಲ್ಲಿ ನಕ್ಸಲರ ಚಲನ ವಲನಗಳು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ನಕ್ಸಲರಿದ್ದಾರೆ ಎಂಬ ಸುಳಿವು ದೊರೆತರೆ, ಕೇರಳ ಮತ್ತು ತಮಿಳುನಾಡಿನ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಐಜಿಪಿ, ಚಾಮರಾಜನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರ ಸಿಗ್ನಲ್ ದೀಪಗ ಳನ್ನು ಶೀಘ್ರದಲ್ಲಿಯೇ ಅಳವಡಿಸಲಾ ಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾತ ನಾಡಿ, ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಾಗಲೀ ಅಥವಾ ಇನ್ನಿತರ ಯಾವುದೇ ಅಕ್ರಮ ಚಟುವಟಿಕೆಗಳು, ಅಕ್ರಮ ಸಾಗಾ ಣಿಕೆಗಳು ನಡೆಯುತ್ತಿಲ್ಲ ಎಂದರು.

ಜಿಲ್ಲೆಯ ಯಾವುದೇ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಮಾಹಿತಿ ನೀಡಿ, ದೂರು ನೀಡಿದರೆ ತಕ್ಷಣವೇ ಕ್ರಮ ಕೈಗೊಳ್ಳುತ್ತೇನೆ. ಇದುವರೆವಿಗೆ ನನಗೆ ಒಂದೇ ಒಂದು ದೂರು ಸಹ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್‍ಪಿ ಜಯಕುಮಾರ್ ಈ ವೇಳೆ ಹಾಜರಿದ್ದರು.

Translate »