ಭಿನ್ನಾಭಿಪ್ರಾಯ ಬಿಟ್ಟು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಎಂ.ಬಿ.ಪಾಟೀಲ್
ಹಾಸನ

ಭಿನ್ನಾಭಿಪ್ರಾಯ ಬಿಟ್ಟು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಎಂ.ಬಿ.ಪಾಟೀಲ್

April 12, 2019

ಅರಸೀಕೆರೆ: ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಭಿನ್ನಾ ಭಿಪ್ರಾಯವನ್ನು ಬದಿಗಿಟ್ಟು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಕರೆ ನೀಡಿದರು.

ತಾಲೂಕಿನ ದೊಡ್ಡಮೇಟಿ ಕುರ್ಕೆ ಗ್ರಾಮ ದಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನಪರ ಕಾಳಜಿ ಸ್ವಂತ ವರ್ಚಸ್ಸಿನಿಂದ ಬಿಜೆಪಿ ಅಭ್ಯರ್ಥಿಗಳು ಮತ ಕೇಳು ತ್ತಿಲ್ಲ. ಬದಲಿಗೆ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡು ಮತ ಕೇಳುತ್ತಿರುವುದು ವಿಪರ್ಯಾಸವಾಗಿದೆ ಎಂದರು.

2014ರ ಲೋಕಸಭೆ ಚುನಾವಣೆ ಪೂರ್ವದಲ್ಲಿ ನರೇಂದ್ರ ಮೋದಿ ಅವರು ಸ್ವಿಸ್ ಬ್ಯಾಂಕ್‍ನಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದರು. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸಿ ನಿರುದ್ಯೋಗಿ ವಿದ್ಯಾವಂತ ಯುವಜನತೆಗೆ ಉದ್ಯೋಗ ನೀಡುವು ದಾಗಿ ಜನರ ಮನಸ್ಸಿನಲ್ಲಿ ಆಸೆ ಹುಟ್ಟಿಸಿದರು. ಇದನ್ನು ನಂಬಿ ದೇಶದ ಮತದಾರರು ಸ್ಪಷ್ಟ ಬಹುಮತವನ್ನು ಬಿಜೆಪಿಗೆ ನೀಡುವು ದರೊಂದಿಗೆ ಅಧಿಕಾರವನ್ನು ನೀಡಿದರು. ಆದರೆ, ಇಲ್ಲಿಯವರೆಗೂ ಯಾರ ಖಾತೆಗೂ 15 ಲಕ್ಷವಿರಲೀ, ನಯಾಪೈಸೆಯೂ ಬಂದಿಲ್ಲ. ಉದ್ಯೋಗ ನೀಡುವ ಬದಲು ನೋಟ್ ಬ್ಯಾನ್ ಮಾಡುವ ಮೂಲಕ ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ನಡೆಸುತ್ತಿದ್ದ ಕೋಟ್ಯಾಂತರ ಬಡ ಹಾಗೂ ಮಧ್ಯಮ ವರ್ಗದ ಉದ್ಯೋಗ ವನ್ನು ಕಸಿದುಕೊಂಡಿದ್ದಾರೆ ಎಂದು ದೂರಿದರು.

ಹಾಸನ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೇರಿದಂತೆ ರಾಜ್ಯದಲ್ಲಿ 22 ರಿಂದ 23 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಜಾತ್ಯಾತೀ ಯತೆಯನ್ನು ಪ್ರತಿಪಾದಿಸುವ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಬಿಜೆಪಿ ನಾಯಕರ ನಿದ್ದೆಗೆಡುವಂತೆ ಮಾಡಿದೆ. ಬಡವರು ರೈತರು ಹಾಗೂ ಇತರ ಎಲ್ಲಾ ವರ್ಗದ ಜನತೆಯನ್ನು ಗಮನ ದಲ್ಲಿರಿಸಿಕೊಂಡು ರಾಜ್ಯ ಸಮ್ಮಿಶ್ರ ಸರ್ಕಾರ ನೀಡುತ್ತಿರುವ ಆಡಳಿತ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬೇಲೂರು ಶಾಸಕ ನಿಂಗೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಮಲ್ಲೇನಹಳ್ಳಿ ಶಿವಶಂಕರ ಸ್ವಾಮಿ, ಬಾಣಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಜಿಪಂ ಸದಸ್ಯ ಮಾಡಾಳುಸ್ವಾಮಿ, ಮುಖಂಡರಾದ ಶಶಿಧರ್, ಗೊಲ್ಲರಹಳ್ಳಿ ಹನುಮಪ್ಪ, ಶಿವಮೂರ್ತಿ, ಮೋಹನ್‍ಕುಮಾರ್ ಇನ್ನಿತರÀರಿದ್ದರು.

Translate »