ಹಾಸನ, ಮಂಡ್ಯ ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಾಚರಣೆ
ಹಾಸನ

ಹಾಸನ, ಮಂಡ್ಯ ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಾಚರಣೆ

January 6, 2019

ಹಾಸನ, ಜ.5- ಹಾಸನ ಮತ್ತು ಮಂಡ್ಯ ಜಿಲ್ಲಾ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ವರು ಸುಲಿಗೆಕೋರರನ್ನು ಬಂಧಿಸಿ, 3,01,600 ರೂ ಮೌಲ್ಯದ ಸ್ವತ್ತುಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಳೆನರಸೀಪುರ ತಾಲೂಕು ಜಿ.ಸೋಮನಹಳ್ಳಿ ಗ್ರಾಮದ ಕಾರು ಚಾಲಕ ಅಶ್ವಥ್(23), ಚೆನ್ನರಾಯ ಪಟ್ಟಣ ತಾಲೂಕು ಆನೆಕೆರೆ ಗ್ರಾಮದ ಜೆಸಿಬಿ ಚಾಲಕ ಮೇಘನಾಥ್(23), ಚೆನ್ನರಾಯಪಟ್ಟಣ ಸಜ್ಜೆಕೊಪ್ಪಲು ಗ್ರಾಮದ ಕಾರು ಚಾಲಕ ಸೋಮ ಶೇಖರ್(28) ಮತ್ತು ಚೆನ್ನರಾಯಪಟ್ಟಣ ತಾಲೂಕು ಬರಾಳು ಗ್ರಾಮದ ಹೋಟೆಲ್ ಸಪ್ಲೇಯರ್ ಚಂದ್ರಶೇಖರ್(22) ಬಂಧಿತ ಸುಲಿಗೆಕೋರರಾ ಗಿದ್ದು, ಇವರಿಂದ ನಿಸ್ಸಾನ್ ಮೈಕ್ರಾ ಕಾರು(ಕೆಎ05-ಎಜಿ5726), ಚಾಕು, 4,620 ರೂ ನಗದು, 2 ಚಿನ್ನದ ಉಂಗುರ, 3 ಮೊಬೈಲ್ ಸೇರಿದಂತೆ 3,01,600 ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿವರ: ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಲಿ ಗ್ರಾಮದ ಯಗಚಿ ಪ್ರೌಢಶಾಲೆ ಮುಂಭಾಗ ಜ.2ರಂದು ರಾತ್ರಿ 10 ಗಂಟೆಗೆ ಕಾರಿನಲ್ಲಿ ಕುಳಿತಿದ್ದ ಬಾಗೆ ಗ್ರಾಮದ ರಾಜ ಮತ್ತು ಸುರೇಶ್ ಎಂಬವರಿಗೆ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಚಾಕು ತೋರಿಸಿ, ಬೆದರಿಸಿ 2 ಚಿನ್ನದ ಉಂಗುರ ಮತ್ತು 21 ಸಾವಿರ ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಹಾಸನ ನಗರ ಠಾಣೆಗೆ ದೂರು ಬಂದಿತ್ತು. ಅದೇ ದಿನ ರಾತ್ರಿ 11.30ರ ವೇಳೆಯಲ್ಲಿ ಹಳ್ಳಿ ಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಾಸನ-ಮೈಸೂರು ರಸ್ತೆಯಲ್ಲಿರುವ ಸಿ.ಹಿಂದಲಹಳ್ಳಿ ಸಮೀಪ ಬೈಕ್ ನಲ್ಲಿ ತೆರಳುತ್ತಿದ್ದ ಮೈಕ್ರೋ ಫೈನಾನ್ಸ್ ಕಂಪನಿ ಮ್ಯಾನೇಜರ್ ಹರೀಶ್ ಎಂಬುವರನ್ನು ಅಡ್ಡಗಟ್ಟಿ ಕಾರಿ ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಚಾಕು ತೋರಿಸಿ, ಬೆದರಿಸಿ ಅವರ ಬಳಿ ಇದ್ದ 1,120 ನಗದು ಮತ್ತು ಮೊಬೈಲ್ ಕಸಿದು ಪರಾರಿಯಾಗಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆಯೇ ಹೊಳೆ ನರಸೀಪುರ ಡಿವೈಎಸ್‍ಪಿ ಬಿ.ಬಿ.ಲಕ್ಷ್ಮೇಗೌಡರು ವಿಚಾರವನ್ನು ಜಿಲ್ಲಾ ಎಸ್ಪಿ ಡಾ.ಎ.ಎನ್.ಪ್ರಕಾಶ್ ಗೌಡ ಮತ್ತು ಎಎಸ್‍ಪಿ ಶ್ರೀಮತಿ ಬಿ.ಎನ್.ನಂದಿನಿ ಅವರಿಗೆ ತಿಳಿಸಿ ಅವರ ಮಾರ್ಗದರ್ಶನದಂತೆ ಹೊಳೆನರಸೀಪುರ ಪ್ರಭಾರ ಸರ್ಕಲ್ ಇನ್‍ಸ್ಪೆಕ್ಟರ್ ಹೆಚ್.ಎಂ.ಕಾಂತರಾಜು ಮತ್ತು ಹಾಸನ ಸರ್ಕಲ್ ಇನ್‍ಸ್ಪೆಕ್ಟರ್ ಸತ್ಯನಾರಾಯಣ್ ಅವರಿಗೆ ಸೂಕ್ತ ಸೂಚನೆಗಳನ್ನು ನೀಡಿದರು. ಅಲ್ಲದೆ, ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಪೊಲೀಸ್ ಕಂಟ್ರೋಲ್ ರೂಂಗಳಿಗೂ ಮಾಹಿತಿ ರವಾನಿಸಲಾಗಿತ್ತು.
ದುಷ್ಕರ್ಮಿಗಳು ಬಂದ ಕಾರಿನ ಹಿಂಭಾಗದ ನಂಬರ್ ಪ್ಲೇಟ್ ಕಳಚಲಾಗಿತ್ತು. ಆದ್ದರಿಂದ ದೂರು ದಾರರಿಗೆ ಕಾರಿನ ನಂಬರ್ ತಿಳಿದಿಲ್ಲವಾದರೂ, ಕಾರಿನ ಬಣ್ಣ ಬಿಳಿ ಮತ್ತು ಹಸಿರು ಎಂಬುದನ್ನು ಮಾತ್ರ ತಿಳಿಸಿದ್ದರು.

ಸರ್ಕಲ್ ಇನ್‍ಸ್ಪೆಕ್ಟರ್ ಕಾಂತರಾಜು ಸೂಚನೆ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಹೊಳೆ ನರಸೀಪುರ ಗ್ರಾಮಾಂತರ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಮೋಹನ್, ಸಿಬ್ಬಂದಿಗಳಾದ ಬಸವ ರಾಜು, ಬಸವೇಗೌಡ, ಸತೀಶ್, ನಾಗೇಶ್, ನಾಗ ರಾಜು, ಪ್ರಕಾಶ್ ಅವರನ್ನೊಳಗೊಂಡ ತಂಡವು ಕಾರು ತೆರಳಿದ್ದ ದಿಕ್ಕಿನತ್ತ ಬೆನ್ನತ್ತಿದ್ದಾರೆ. ಅದೇ ವೇಳೆ ಕೆ.ಆರ್.ಪೇಟೆ ಸರ್ಕಲ್ ಇನ್‍ಸ್ಪೆಕ್ಟರ್ ಕೆ.ಎನ್.ಸುಧಾಕರ್, ಅವರ ಜೀಪ್ ಚಾಲಕ ಮಂಜು ನಾಥ್, ಕಿಕ್ಕೇರಿ ಸಬ್‍ಇನ್‍ಸ್ಪೆಕ್ಟರ್ ಕೆ.ಎನ್.ಚಂದ್ರ ಶೇಖರ್ ಅವರುಗಳು ಕಿಕ್ಕೇರಿ ಜಂಕ್ಷನ್‍ನಲ್ಲಿ ದುಷ್ಕರ್ಮಿ ಗಳ ಬಳಿ ಮತ್ತು ಹಸಿರು ಬಣ್ಣದ ಕಾರಿಗಾಗಿ ಬ್ಯಾರಿಕೇಡ್ ಅಳವಡಿಸಿ ತಪಾಸಣೆಯಲ್ಲಿ ತೊಡಗಿದ್ದಾರೆ.

ಮಧ್ಯರಾತ್ರಿ 1.30ರ ವೇಳೆಗೆ ಕೆಎ05-ಎಜಿ5726 ಸಂಖ್ಯೆ ಓಲಾ ಬಿಳಿ ಮತ್ತು ಹಸಿರು ಬಣ್ಣದ ಕಾರು ಕಿಕ್ಕೇರಿ ಜಂಕ್ಷನ್‍ಗೆ ಬಂದಿದೆ. ಜಂಕ್ಷನ್‍ನಲ್ಲಿದ್ದ ಮಂಡ್ಯ ಜಿಲ್ಲಾ ಪೊಲೀಸರು ಮತ್ತು ಬೆನ್ನತ್ತಿ ಬಂದ ಹಾಸನ ಜಿಲ್ಲಾ ಪೊಲೀಸರ ನಡುವೆ ಸಿಲುಕಿಕೊಂಡ ದುಷ್ಕರ್ಮಿಗಳು ತಪ್ಪಿಸಿಕೊಳ್ಳಲಾಗದೇ ಸಿಕ್ಕಿ ಬಿದ್ದಿದ್ದಾರೆ.

ಇವರನ್ನು ವಿಚಾರಣೆಗೊಳಪಡಿಸಿದಾಗ ಈ ತಂಡ ಜ.2ರಂದೇ ಬೆಂಗಳೂರಿನ ಕಲ್ಯಾಣ ನಗರದಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ ನಿಶಾಂತ್‍ಶೆಟ್ಟಿ ಎಂಬುವರಿಂದ ಹಣ ಕೀಳಲು ಪ್ರಯತ್ನಿಸಿ, ಅವರ ಕೆನ್ನೆ ಮತ್ತು ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದು, ಈ ಕುರಿತು ಚಂದ್ರ ಲೇಔಟ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಈ ಕಾರ್ಯಾಚರಣೆಯನ್ನು ಜಿಲ್ಲಾ ಎಸ್ಪಿ ಡಾ.ಎ.ಎನ್.ಪ್ರಕಾಶ್‍ಗೌಡ ಮತ್ತು ಎಎಸ್‍ಪಿ ಬಿ.ಎನ್.ನಂದಿನಿ ಅವರು ಪ್ರಶಂಸಿಸಿ 10 ಸಾವಿರ ರೂ ಬಹುಮಾನ ಘೋಷಿಸಿದ್ದಾರೆ.

Translate »