ಲಾಕ್‍ಡೌನ್ ಸರಿ-ತಪ್ಪು; ಮೈಸೂರಿಗರ ವಿಶ್ಲೇಷಣೆ
ಮೈಸೂರು

ಲಾಕ್‍ಡೌನ್ ಸರಿ-ತಪ್ಪು; ಮೈಸೂರಿಗರ ವಿಶ್ಲೇಷಣೆ

April 18, 2021

ಮೈಸೂರು,ಏ.17(ವೈಡಿಎಸ್)-`ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‍ಡೌನ್ ಒಳ್ಳೆಯದೆ. ಆದರೆ, ಕೊರೊನಾ ಹೆಚ್ಚಾ ಗುತ್ತಿದ್ದರೂ ರಾಜಕಾರಣಿಗಳು ಮೈಮರೆತಿದ್ದಾರೆ. ಗುಂಪು ಕಟ್ಟಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇವರಿಗಿಲ್ಲದ ನಿರ್ಬಂಧ ಸಾರ್ವಜನಿಕರಿಗೇಕೆ? ಮೊದಲು ರಾಜಕಾರಣಿಗಳು ಕೊರೊನಾ ಮಾರ್ಗಸೂಚಿ ಸರಿ ಯಾಗಿ ಅನುಸರಿಸಿದರೆ ಕೊರೊನಾ ಹೆಚ್ಚಾಗುತ್ತಿರಲಿಲ್ಲ. ಲಾಕ್‍ಡೌನ್ ಮಾಡಬೇಕಾದ ಪ್ರಮೇಯವೇ ಇರು ತ್ತಿರಲಿಲ್ಲ. ಮೊದಲು ರಾಜಕಾರಣಿಗಳು ಕೋವಿಡ್-19 ಮಾರ್ಗಸೂಚಿ ಅನುಸರಿಸಲಿ’…

ಇವು ಮೈಸೂರಿನ ವಿವಿಧ ಅಂಗಡಿ ಮಾಲೀಕರು, ಸಾರ್ವಜನಿಕರ ಆಕ್ರೋಶದ ನುಡಿಗಳು.
ಈಗಾಗಲೇ ಲಾಕ್‍ಡೌನ್‍ನಿಂದ ಸಂಕಷ್ಟ ಎದುರಾಗಿ ಭವಿಷ್ಯದ ದಾರಿಯೇ ಕಾಣದಾಗಿತ್ತು. ಜೀವನದ ಬಂಡಿ ಸಾಗಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಬಾಡಿಗೆ ಕಟ್ಟಲು ಹಣವಿಲ್ಲದೆ ಸಾಲ ಮಾಡಿ ಕಟ್ಟಿದ್ದೇವೆ. ಈಗ ಮತ್ತೆ ಲಾಕ್‍ಡೌನ್ ಮಾಡಿದರೆ ಜೀವನ ನಡೆಸಲು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.

ಸಾರ್ವಜನಿಕ ಕಿರಣ್ ಮಾತನಾಡಿ, ರಾಜ್ಯ ಸರ್ಕಾ ರದ ಕೊರೊನಾ ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯ ವಾಗಬೇಕು. ಆದರೆ, ಸರ್ಕಾರ ರಾಜಕಾರಣಿಗಳಿಗೆ ಪ್ರಚಾರಕ್ಕೆ ಅನುಮತಿ ನೀಡಿದೆಯಾ? ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪ ಚುನಾವಣೆಯಲ್ಲಿ ರಾಜಕಾರಣಿ ಗಳು ಗುಂಪು ಕಟ್ಟಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ರಾಜ್ಯ ಸರ್ಕಾರ, ಕೊರೊನಾ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಅಗತ್ಯವಿದ್ದರೆ ಮಾತ್ರ ಹೊರಗೆ ಬನ್ನಿ. ಇಲ್ಲವಾದರೆ ಬರಬೇಡಿ ಎಂದು ಹೇಳುವ ರಾಜ್ಯ ಸರ್ಕಾರ, ರಾಜಕಾರಣಿ ಹೇಗಾದರೂ ಇರಲಿ ಎಂದು ಬಿಟ್ಟಿದೆಯಾ? ಕೊರೊನಾ ಹೆಚ್ಚಳ ಮುನ್ಸೂಚನೆ ಸಿಕ್ಕಿದ ಕೂಡಲೇ ಎಲ್ಲಾ ಚಟುವಟಿಕೆಗಳಿಗೂ ನಿರ್ಬಂಧ ಹೇರಿದ್ದರೆ ಕೊರೊನಾ ಹೆಚ್ಚಾಗುತ್ತಿರಲಿಲ್ಲ.

ಮೈಸೂರಲ್ಲಿ ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ರಾಜ ಕಾರಣಿ ಸೇರಿದಂತೆ 30-40 ಮಂದಿ ಗುಂಪಾಗಿ ನಿಂತಿದ್ದರು. ಅವರನ್ನು ಯಾರೊಬ್ಬರೂ ಪ್ರಶ್ನಿಸಲಿಲ್ಲ. ಆದರೆ, ಅದೇ ಸಾರ್ವಜನಿಕರು ಗುಂಪು ಗುಂಪುಗೂಡಿದ್ದರೆ ದಂಡ ಹಾಕು ತ್ತಿದ್ದರು. ಇದ್ಯಾವ ನ್ಯಾಯ? ಕೊರೊನಾ ಮಾರ್ಗಸೂಚಿ ಗಳನ್ನು ಎಲ್ಲರೂ ಪಾಲಿಸುವಂತಾಗಬೇಕು. 10 ದಿನ ಲಾಕ್ ಡೌನ್ ಆದರೆ ಸಮಸ್ಯೆಯಾಗಲ್ಲ. ತಿಂಗಳುಗಟ್ಟಲೆ ಮಾಡಿ ದರೆ ಕೂಲಿ ಮಾಡಿ ಜೀವನ ಸಾಗಿಸುವವರು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

ದೇವರಾಜ ಅರಸು ರಸ್ತೆಯಲ್ಲಿನ ಫ್ಯಾಷನ್ ಫ್ಯಾಕ್ಟರಿ ಬಟ್ಟೆ ಅಂಗಡಿಯ ಬಾಲರಾಜ್ ಮಾತನಾಡಿ, ಲಾಕ್ ಡೌನ್ ಸಂದರ್ಭ ಹಣವಿಲ್ಲದೆ ತೊಂದರೆ ಅನುಭವಿಸಿ ದ್ದೆವು. ಲಾಕ್‍ಡೌನ್ ತೆರವಾದ ಬಳಿಕ ಎಂದಿನಂತೆ ಮದುವೆ ಸಮಾರಂಭಗಳು ಆರಂಭಗೊಂಡಿದ್ದರಿಂದ ಹಿಂದೆ ಹೇಗೆ ನಡೆಯುತ್ತಿತ್ತೋ ಹಾಗೇ ವ್ಯಾಪಾರ ನಡೆಯಿತು. ಇಂದು ಮತ್ತೆ ಲಾಕ್‍ಡೌನ್ ಎಂದರೆ ಭಯವಾಗುತ್ತಿದೆ ಎಂದರು.

ಶಿವರಾಂ ಪೇಟೆಯ ಶ್ರೀ ಕನ್ಯಕಾಪರಮೇಶ್ವರಿ ಪ್ರಿಂಟ್ಸ್, ಕಾರ್ಡ್ ಗ್ಯಾಲರಿ ಮಾಲೀಕ ಮೋಹನ್ ಗುಪ್ತ ಮಾತನಾಡಿ, ಕಳೆದ ಬಾರಿಯ ಲಾಕ್‍ಡೌನ್ ಕೊಟ್ಟ ಪೆಟ್ಟಿನಿಂದ ಇನ್ನೂ ಸುಧಾರಿಸಿಕೊಂಡಿಲ್ಲ. 1.5 ಲಕ್ಷ ರೂ. ಅಂಗಡಿ ಬಾಡಿಗೆ ಮತ್ತು 10 ಸಾವಿರ ಮನೆ ಬಾಡಿಗೆ ಕಟ್ಟಬೇಕಿತ್ತು. ಸಾಲ ಮಾಡಿ ಬಾಡಿಗೆ ಪಾವತಿಸಿದೆವು. ಲಾಕ್‍ಡೌನ್ ಸಡಿಲಿಕೆಯಾದ ಬಳಿಕ ವ್ಯಾಪಾರ ಮತ್ತೆ ಎಂದಿನಂತೆ ಆಗುತ್ತಿತ್ತು. ರಾಜ್ಯ ಸರ್ಕಾರ ಈಗ ಮದುವೆ ಮತ್ತಿತರೆ ಚಟುವಟಿಕೆÉ ನಿರ್ಬಂ ಧಿಸಿದ ಹಿನ್ನೆಲೆ ಶುಕ್ರವಾರ 1 ಸಾವಿರ ಮದುವೆ ಕಾರ್ಡ್‍ಗಳಿಗೆ ಆರ್ಡರ್ ನೀಡಿದ್ದ ಗ್ರಾಹಕರು ಈಗ ಬೇಡವೆಂದರು. ದಿನವೆಲ್ಲಾ ಕೂತರೂ 500-1000 ರೂ. ವ್ಯಾಪಾರ ಆಗುತ್ತಿದೆ. ಹೀಗಾದರೆ ಬಾಡಿಗೆ ಕಟ್ಟುವುದಾದರೂ ಹೇಗೆ? ಜೀವನ ನಡೆಸುವುದಾದರೂ ಹೇಗೆ? ಮತ್ತೆ ಲಾಕ್‍ಡೌನ್ ಮಾಡಿ ದರೆ ನಮ್ಮ ಕತೆ ಮುಗಿದಂತೆ ಎಂದು ಬೇಸರ ವ್ಯಕ್ತಪಡಿಸಿದರು.

ಹಳೇ ಆರ್‍ಎಂಸಿಯ ಅಕ್ಷಯ ಭಂಡಾರ್ ಅಂಗಡಿಯ ಕೈಲಾಸಕುಮಾರ್ ಮಾತನಾಡಿ, ಕೊರೊನಾ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಎಲ್ಲಾ ಚಟುವಟಿಕೆಗಳಿಗೆ ಕಟ್ಟು ನಿಟ್ಟಾಗಿ ನಿರ್ಬಂಧ ವಿಧಿಸಿದರೆ ಕೊರೊನಾ ಇಷ್ಟು ಹೆಚ್ಚಾಗುತ್ತಿರಲಿಲ್ಲ. ಒಮ್ಮೆ ಲಾಕ್ ಡೌನ್‍ನಿಂದ ಸಾಕಷ್ಟು ತೊಂದರೆ ಅನು ಭವಿಸಿದ್ದೇವೆ. ಮತ್ತೆ ಲಾಕ್‍ಡೌನ್ ಆದರೆ ಸಾಲ ತೀರಿಸಲು, ಜೀವನ ನಡೆಸಲು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.

Translate »