ಗುರುವಾರ ಇಲ್ಲವೇ ಶುಕ್ರವಾರ ದೋಸ್ತಿ ಪಟ್ಟಿ ಪ್ರಕಟ
ಮೈಸೂರು

ಗುರುವಾರ ಇಲ್ಲವೇ ಶುಕ್ರವಾರ ದೋಸ್ತಿ ಪಟ್ಟಿ ಪ್ರಕಟ

March 12, 2019

ಬೆಂಗಳೂರು: ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳದೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡು ಉಭಯ ಪಕ್ಷಗಳಿಗೆ ದೊರೆಯುವ ಕ್ಷೇತ್ರಗಳ ಪಟ್ಟಿ ಬರುವ ಗುರುವಾರ ಇಲ್ಲವೇ ಶುಕ್ರವಾರ ಪ್ರಕಟಿಸಲು ರಾಷ್ಟ್ರೀಯ ಕಾಂಗ್ರೆಸ್ ನಿರ್ಧರಿಸಿದೆ.

ದೆಹಲಿಯಲ್ಲಿಂದು ಪಕ್ಷದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಅಭ್ಯರ್ಥಿಗಳ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ರಾಜ್ಯದ ಮಟ್ಟಿಗೆ ಸಂಬಂಧಪಟ್ಟಂತೆ ತಮ್ಮ ಅನಿಸಿಕೆಗಳನ್ನು ವರಿಷ್ಠರ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕರ್ನಾಟಕದ ನಾಯಕರು ನೀಡಿದ ಮಾಹಿತಿ ಆಲಿಸಿದ ರಾಹುಲ್, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಾವು ಕೊಂಡು-ಕೊಳ್ಳುವ ನೀತಿ ಅನುಸರಿಸೋಣ.

ಇಲ್ಲಿ ಪಟ್ಟು ಹಿಡಿಯುವುದು ಬೇಡ, ಹಾಗೆಂದು ನಾವು ನಮ್ಮನ್ನು ಬಿಟ್ಟುಕೊಡಲು ಆಗುವುದಿಲ್ಲ. ಈ ಬಗ್ಗೆ ಉಭಯ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಕರ್ನಾಟಕದಲ್ಲಿ ನಮ್ಮ ಪಕ್ಷಕ್ಕೆ ದೊರೆಯುವ ಕ್ಷೇತ್ರ ಅದಕ್ಕೆ ಅಭ್ಯರ್ಥಿಗಳ ಹೆಸರನ್ನು ಮಾರ್ಚ್ 14 ಸಂಜೆ ಇಲ್ಲವೆ 15 ರ ಬೆಳಿಗ್ಗೆ ಬಿಡುಗಡೆ ಗೊಳ್ಳಲಿದೆ. ಅಂದೇ ಜೆಡಿಎಸ್‍ಗೆ ಲಭ್ಯವಾಗುವ ಕ್ಷೇತ್ರಗಳ ಹೆಸರನ್ನು ಎಐಸಿಸಿ ಜಂಟಿಯಾಗಿ ಪ್ರಕಟಿಸಲಿದೆ. ಆದರೆ ಅವರ ಅಭ್ಯರ್ಥಿಗಳ ಹೆಸರು ಆ ಪಕ್ಷಕ್ಕೆ ಸೇರಿದ್ದು.

ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಮುನ್ನವೇ ಉಭಯ ಪಕ್ಷಗಳು ಕರ್ನಾಟಕದಲ್ಲಿ ಜಂಟಿಯಾಗಿ ಚುನಾವಣಾ ಪ್ರಚಾರ ಕೈಗೊಳ್ಳುತ್ತವೆ. ಅಲ್ಲದೆ ಎರಡೂ ಪಕ್ಷಗಳ ಸ್ಟಾರ್ ಕ್ಯಾಂಪೇನ್ ಯಾರು ಎಂಬುದನ್ನು ಘೋಷಣೆ ಮಾಡ ಲಾಗುವುದು ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ. ಸಿದ್ದ ರಾಮಯ್ಯ ಮಾತ್ರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದು ಮಾಜಿ ಸಚಿವ ವಿಜಯಶಂಕರ್ ಅವರ ಹೆಸರನ್ನು ಮಾತ್ರ ಹೇಳಿದ್ದಾರೆ. ಜೆಡಿಎಸ್‍ನ ಹಾಲಿ ಲೋಕಸಭಾ ಅಭ್ಯರ್ಥಿ ಗಳಿರುವೆಡೆ ನಮ್ಮ ತಕರಾರು ಇಲ್ಲ. ಶಿವಮೊಗ್ಗವನ್ನೂ ಬಿಟ್ಟುಕೊಡೋಣ. ವಿಜಯ ಪುರಕ್ಕೂ ನಮ್ಮ ಅಭ್ಯಂತರವಿಲ್ಲ. ಅದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಅವರಿಗೆ ಬಲವಿಲ್ಲ ಎಂದು ಮಾಹಿತಿ ನೀಡಿದ್ದಾರೆ. ನಮ್ಮ ಅಭ್ಯರ್ಥಿಗಳು ಗೆಲ್ಲಬೇಕಾದರೆ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಫ್ರೆಂಡ್ಲಿ ಫೈಟ್ ಅಗತ್ಯವಿದೆ ಎಂದಿದ್ದಾರೆ. ಉಳಿದೆಡೆ ಮೈತ್ರಿ ಅಭ್ಯರ್ಥಿಗಳೇ ಇರಲಿ ಎಂಬ ತಮ್ಮ ವಾದವನ್ನು ಸಭೆ ಮುಂದಿಟ್ಟರು ಎಂದು ಹೇಳಿರುವುದಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಮೈತ್ರಿ ಸರ್ಕಾರಕ್ಕೆ ಧಕ್ಕೆ ಇಲ್ಲ
ಬೆಂಗಳೂರು:ಲೋಕಸಭೆ ಚುನಾವಣಾ ಪೂರ್ವ ಮೈತ್ರಿ ಏರುಪೇರಿನಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುವ ಸ್ಕ್ರೀನಿಂಗ್ ಕಮಿಟಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ಗೆ ಕ್ಷೇತ್ರಗಳನ್ನು ಬಿಟ್ಟುಕೊಡುವುದು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಹೈ ಕಮಾಂಡ್‍ನ ನಿರ್ಧಾರಕ್ಕೆ ಬಿಟ್ಟಿದೆ ಎಂದು ಹೇಳಿದರು.

ಈ ಮೊದಲು ನಡೆದ ಸಮನ್ವಯ ಸಮಿತಿ ಸಭೆ ಮತ್ತು ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಯಲ್ಲಿ ಜೆಡಿಎಸ್ ಜೊತೆ ಕ್ಷೇತ್ರಗಳ ಹಂಚಿಕೆ ಕುರಿತು ಚರ್ಚೆಯಾಗಿದೆ. ಕಾಂಗ್ರೆಸ್‍ನ ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟುಕೊಡಬಾರದು ಎಂಬುದು ಖಚಿತ ವಾಗಿದೆ. ಮೈಸೂರು ಕ್ಷೇತ್ರವನ್ನು ಜೆಡಿಎಸ್‍ನವರು ಕೇಳುತ್ತಿದ್ದಾರೆ. ಆದರೆ ಆ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ನಾನು ಎಲ್ಲಿಯೂ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಇಂದು ನಡೆಯುವ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದರು.

Translate »