ಲೋಕಸಭಾ ಚುನಾವಣೆ ಚಾಮರಾಜನಗರ: ಕಾಂಗ್ರೆಸ್‍ನಿಂದ ಧ್ರುವನಾರಾಯಣ್, ಬಿಜೆಪಿಯಿಂದ …?
ಚಾಮರಾಜನಗರ

ಲೋಕಸಭಾ ಚುನಾವಣೆ ಚಾಮರಾಜನಗರ: ಕಾಂಗ್ರೆಸ್‍ನಿಂದ ಧ್ರುವನಾರಾಯಣ್, ಬಿಜೆಪಿಯಿಂದ …?

November 16, 2018

ಚಾಮರಾಜನಗರ, ನ.15- ಮುಂಬರುವ ಲೋಕಸಭಾ ಚುನಾವಣೆಗೆ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಆರ್. ಧ್ರುವನಾರಾಯಣ್ ಸ್ಪರ್ಧಿಸುವುದು ಖಚಿತವಾಗಿದೆ. ಕಾಂಗ್ರೆಸ್‍ಗೆ ಪ್ರಬಲ ಎದುರಾಳಿ ಆಗಿರುವ ಬಿಜೆಪಿಯಿಂದ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಚರ್ಚೆ ಕ್ಷೇತ್ರಾದ್ಯಂದ ಈಗಾಗಲೇ ಆರಂಭವಾಗಿದೆ.

ಲೋಕಸಭೆಗೆ 2019ರ ಏಪ್ರಿಲ್‍ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ರಾಜ್ಯದಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಯಾರಿ ನಡೆಸುತ್ತಿವೆ. ಎಲ್ಲಾ ರೀತಿಯಲ್ಲೂ ಅಳೆದು-ಸುರಿದು ಅಭ್ಯರ್ಥಿಗಳ ಆಯ್ಕೆ ಗಾಗಿ ಪಕ್ಷಗಳು ಕಸರತ್ತು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್, ಬಿಎಸ್‍ಪಿ ಮೈತ್ರಿ ಆಗಿ ಅಧಿಕಾರಕ್ಕೆ ಬಂದಿದೆ. ಇತ್ತೀಚೆಗೆ ಬಿಎಸ್‍ಪಿಯ ಏಕೈಕ ಶಾಸಕ ಎನ್.ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿರುವುದರಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದು ವರೆದಿದೆ. ಹೀಗಾಗಿ ಇದೇ ಮೈತ್ರಿ ಮುಂಬ ರುವ ಲೋಕಸಭಾ ಚುನಾವಣೆಯಲ್ಲೂ ಮುಂದುವರೆಯುವ ಸಾಧ್ಯತೆ ಸದ್ಯದ ಮಟ್ಟಿಗೆ ಗೋಚರಿಸುತ್ತಿದೆ.

ಚಾಮರಾಜನಗರ ಕ್ಷೇತ್ರ ಪರಿಶಿಷ್ಟ ಜಾತಿಗೆ (ಎಸ್‍ಸಿ) ಮೀಸಲಾಗಿದೆ. ಕ್ಷೇತ್ರದ ವ್ಯಾಪ್ತಿಗೆ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳು ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು, ಟಿ.ನರಸೀಪುರ, ವರುಣಾ, ಹೆಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿವೆ.

ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 4 ಕ್ಷೇತ್ರ (ಚಾಮರಾಜನಗರ, ಹನೂರು, ವರುಣಾ, ಹೆಚ್.ಡಿ.ಕೋಟೆ), ಬಿಜೆಪಿ 2 ಕ್ಷೇತ್ರ (ಗುಂಡ್ಲು ಪೇಟೆ, ನಂಜನಗೂಡು), ಜೆಡಿಎಸ್ 1 ಕ್ಷೇತ್ರ (ಟಿ.ನರಸೀಪುರ), ಬಿಎಸ್‍ಪಿ 1 ಕ್ಷೇತ್ರ (ಕೊಳ್ಳೇಗಾಲ)ದಲ್ಲಿ ಗೆಲುವು ಕಂಡಿದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಾದರೆ, ಚಾಮರಾಜನಗರ ಕ್ಷೇತ್ರವನ್ನು ಕಾಂಗ್ರೆಸ್ ತನಗೆ ಬಿಡಿಸಿ ಕೊಳ್ಳುವುದರಲ್ಲಿ ಯಾವುದೇ ಅನುಮಾನ ವಿಲ್ಲ. ಏಕೆಂದರೆ ಕ್ಷೇತ್ರದ ವ್ಯಾಪ್ತಿಗೆ ಒಳ ಪಡುವ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ಜೆಡಿಎಸ್ ಪ್ರಾಬಲ್ಯ ಹೇಳಿಕೊಳ್ಳುವ ಮಟ್ಟಿಗೆ ಇಲ್ಲ. ಹೀಗಾಗಿ ಜೆಡಿಎಸ್ ಸಹ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಆರ್.ಧ್ರುವ ನಾರಾಯಣ್ ಕಣಕ್ಕೆ ಇಳಿಯುವುದರಲ್ಲಿ ಯಾವುದೇ ಅನುಮಾನಗಳು ಇಲ್ಲ.

ಎರಡು ಬಾರಿ ಶಾಸಕ, ಎರಡು ಬಾರಿ ಸಂಸದರಾಗಿ ಸತತವಾಗಿ ಆಯ್ಕೆಯಾಗುತ್ತಾ ಪ್ರಭಾವಿ ಆಗಿರುವ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಸಾಧಿಸಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲಿ ರಾಜ್ಯದಲ್ಲಿಯೇ ನಂ.1 ಸಂಸದ ಎಂದು ಹಾಲಿ ಸಂಸದ ಆರ್.ಧ್ರುವನಾರಾಯಣ್ ಹೆಸರು ಗಳಿಸಿದ್ದಾರೆ. ಹೀಗಾಗಿ ಇವರನ್ನು ಮಣಿಸಬೇಕಾದರೆ ಸೂಕ್ತ ಹಾಗೂ ಪ್ರಭಾವಿ ಅಭ್ಯರ್ಥಿಯೇ ಬೇಕು ಎಂದು ನಿರ್ಧ ರಿಸಿರುವ ಬಿಜೆಪಿ ನಾಯಕರು ಎಲ್ಲಾ ರೀತಿ ಯಲ್ಲಿ ಚಿಂತಿಸಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಇನ್ನೂ ನಾಲ್ಕು-ಐದು ತಿಂಗಳು ಇದೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ತೊಡಗಿವೆ. ಚಾಮರಾಜನಗರ ಕ್ಷೇತ್ರದಿಂದ ಜನಪ್ರಿಯ ಸಂಸದ ಆರ್.ಧ್ರುವನಾರಾಯಣ್ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು? ಎಂಬುದೇ ಈಗ ಕ್ಷೇತ್ರದ್ಯಾಂತ ಚರ್ಚೆ ಆಗುತ್ತಿರುವ ವಿಚಾರವಾಗಿದೆ.

ಬಿಜೆಪಿಯಿಂದ 8 ಜನ ಆಕಾಂಕ್ಷಿಗಳು

ಕಾಂಗ್ರೆಸ್‍ಗೆ ಪ್ರಬಲ ಪೈಪೋಟಿ ನೀಡುವ ಶಕ್ತಿ ಇರುವುದು ಬಿಜೆಪಿಗೆ ಮಾತ್ರ ಇದೆ ಎಂಬುದು ಕ್ಷೇತ್ರದ ಪರಿಚಯ ಇರುವ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಹೀಗಾಗಿ ಆ ಪಕ್ಷದಿಂದ ಯಾರು ಸ್ಪರ್ಧಿಸುತ್ತಾರೆ? ಎಂಬ ಚರ್ಚೆ ಕ್ಷೇತ್ರಾದ್ಯಂತ ಈಗಾಗಲೇ ಆರಂಭವಾಗಿದೆ. 8ಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳು ಬಿಜೆಪಿಯಲ್ಲಿ ಇರುವುದರಿಂದ ಇದು ಚರ್ಚೆಗೆ ಪುಷ್ಟಿ ನೀಡಿದೆ.

ವಕೀಲ ಅರುಣ್‍ಕುಮಾರ್, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಮಾಜಿ ಶಾಸಕರಾದ ಭಾರತಿ ಶಂಕರ್, ಜಿ.ಎನ್.ನಂಜುಂಡಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ, ಜ್ಯೋತಿಷ್‍ಕುಮಾರ್, ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಅಳಿಯ ಡಾ.ಮೋಹನ್ ಹಾಗೂ ಆಹಾರ ಇಲಾಖೆಯ ನಿವೃತ್ತ ಅಧಿಕಾರಿ ಮಹದೇವಪ್ಪ ಅವರ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿದೆ.

ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಈಗಾಗಲೇ ಚುನಾವಣಾ ರಾಜಕೀಯದಿಂದ ನಿವೃತ್ತ ಘೋಷಿಸಿರುವುದರಿಂದ ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಇತ್ತೀಚೆಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ, ಅವರು ಚುನಾವಣೆಗೆ ನಿಲ್ಲುವ ಸಾಧ್ಯತೆ ತೀರ ಕಡಿಮೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಬಿಎಸ್‍ಪಿಯಿಂದಲೂ ಅಭ್ಯರ್ಥಿ ಕಣಕ್ಕೆ

ಇನ್ನೂ ಶಾಸಕ ಎನ್.ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯ ಸರ್ಕಾರದಿಂದ ಹೊರ ಬಂದಿರುವ ಬಿಎಸ್‍ಪಿ ಮುಂದಿನ ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಸ್ಪಷ್ಟವಾಗಿದೆ.

ಪಕ್ಷದ ನಾಯಕರು ಈಗಾಗಲೇ ಚುನಾ ವಣೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಪಕ್ಷದ ಏಕೈಕ ಶಾಸಕ ಎನ್. ಮಹೇಶ್ ಈಗಾಗಲೇ ಮೂರು-ನಾಲ್ಕು ಬಾರಿ ಪಕ್ಷದ ಮುಖಂಡರ ಸಭೆ ನಡೆಸಿ ಲೋಕಸಭೆ ಚುನಾವಣೆಗೆ ಸಜ್ಜಾ ಗುವಂತೆ ಕರೆ ನೀಡಿದ್ದಾರೆ. ಹೀಗಾಗಿ ಪಕ್ಷ ದಿಂದ ಯಾರು ಅಭ್ಯರ್ಥಿ ಆಗುತ್ತಾರೆ? ಎಂಬುದು ಇನ್ನು ಬಹಿರಂಗವಾಗಿಲ್ಲ.

– ಸಿದ್ದಲಿಂಗಸ್ವಾಮಿ

Translate »