ಜವರಾಯನ ಮನೆಗೆ ಕರೆದೊಯ್ದ ನೂತನ ಬೈಕ್! ರಸ್ತೆ ಅಪಘಾತದಲ್ಲಿ ಸವಾರ ಸಾವು, ಬೇಗೂರು ಬಳಿ ಘಟನೆ
ಚಾಮರಾಜನಗರ

ಜವರಾಯನ ಮನೆಗೆ ಕರೆದೊಯ್ದ ನೂತನ ಬೈಕ್! ರಸ್ತೆ ಅಪಘಾತದಲ್ಲಿ ಸವಾರ ಸಾವು, ಬೇಗೂರು ಬಳಿ ಘಟನೆ

November 16, 2018

ಬೇಗೂರು: ಆತ ಜೀವನದಲ್ಲಿ ಹಲವು ಕನಸು ಕಟ್ಟಿಕೊಂಡಿದ್ದನು… ಹೊಸ ಬೈಕ್ ಖರೀದಿಸಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದನು… ಆದರೆ, ಆತನ ಸಂಭ್ರಮ ಒಂದೇ ವಾರದಲ್ಲಿ ಅಂತ್ಯಕೊಂಡಿದೆ… ನೂತನ ಬೈಕ್‍ನಲ್ಲಿ ದೇವಸ್ಥಾನ, ಬಂಧು ಬಳಗದವರ ಮನೆಗೆ ಓಡಾಡಬೇಕಿದ್ದ ಆತ ಜವರಾಯನ ಮನೆ ಸೇರಿರುವ ಹೃದಯ ವಿದ್ರಾಹಕ ಘಟನೆ ಬುಧವಾರ ರಾತ್ರಿ ಇಲ್ಲಿನ ಸಮೀಪದ ಹಿರಿಕಾಟಿ ಗೇಟ್ ಬಳಿ ನಡೆದಿದೆ. ನಂಜನಗೂಡು ತಾಲೂಕಿನ ಉಪ್ಪನಹಳ್ಳಿ ಗ್ರಾಮದ ನಿವಾಸಿ ರಾಜೇಶ್(25) ಬೈಕ್ ಖರೀದಿಸಿದ ಒಂದೇ ವಾರದಲ್ಲಿ ರಸ್ತೆ ಅಪಘಾತ ಸಂಭವಿಸಿ ಮೃತಪಟ್ಟಿದ್ದಾನೆ.

ಘಟನೆಯ ವಿವರ: ರಾಜೇಶ್ ಅವರು ದೀಪಾವಳಿ ಹಬ್ಬ ಎರಡು-ಮೂರು ದಿನ ಮುನ್ನಾ ಫ್ಯಾಷನ್ ಫ್ರೋ ಬೈಕ್ ಅನ್ನು ಖರೀದಿಸಿ ಕುಟುಂಬದವರೊಂದಿಗೆ ಹಬ್ಬವನ್ನು ಸಂಭ್ರಮಿಸಿದ್ದಾನೆ. ಆದರೆ, ಈತನ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ತನ್ನ ನೂತನ ಬೈಕ್‍ನಲ್ಲಿ ಬುಧವಾರ ರಾತ್ರಿ ಗುಂಡ್ಲುಪೇಟೆಯಿಂದ ಸ್ವ ಗ್ರಾಮ ಉಪ್ಪನಹಳ್ಳಿಗೆ ಹೋಗುತ್ತಿದ್ದಾಗ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಬ್ಯಾರಿಕೇಟ್‍ಗೆ ಡಿಕ್ಕಿ ಹೊಡೆದು ಆಯಾತಪ್ಪಿ ಕೆಳಕ್ಕೆ ಬಿದಿದ್ದಾನೆ. ಈ ವೇಳೆ ಅಪರಿಚಿತ ವಾಹನವೊಂದು ಆತನ ಮೇಲೆ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ರಾಜೇಶ್ ಬೈಕ್ ಖರಿದೀಸಿ 7-8 ದಿನಗಳಾಗಿರಬಹುದು. ಬೈಕ್ ಇನ್ನೂ ನೋಂದ ಣಿಯೂ ಆಗಿಲ್ಲ. ಮೃತ ದೇಹವನ್ನು ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಕುಟುಂಬದವರಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »