ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮಹಾತ್ಮರ ಮಾರ್ಗ ಅಗತ್ಯ
ಹಾಸನ

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮಹಾತ್ಮರ ಮಾರ್ಗ ಅಗತ್ಯ

November 28, 2018

ಅರಸೀಕೆರೆ: ಮಹಾತ್ಮರು ತೋರಿಸಿದ ಹಾದಿಯಲ್ಲಿ ಎಲ್ಲರೂ ಒಗ್ಗೂಡಿ ನಡೆದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಾಧ್ಯ ಎಂದು ಕನಕ ಗುರುಪೀಠ ಕೆ.ಆರ್.ನಗರ ಶಾಖಾ ಮಠ ಕಾಗಿನೆಲೆ ಮಹಾ ಸಂಸ್ಥಾನದ ಶಿವಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಗಂಡಸಿ ಹೋಬಳಿಯ ಕೆಂಕರೆ ಗ್ರಾಮದಲ್ಲಿ ಕನಕದಾಸ ಗ್ರಾಮೀಣಾಭಿವೃದ್ಧಿ ಸಂಘ ಮತ್ತು ರೇವಣ್ಣ ಸಿದ್ದೇಶ್ವರ ಮಠದಿಂದ ನಡೆದ ಕನಕದಾಸರ ಪುತ್ಥಳಿ ಲೋಕಾರ್ಪಣೆ ಮತ್ತು ಕನಕದಾಸರ 531ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನಕದಾಸರು 15ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದರು. ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಕನಕದಾಸರು ದೇವರು ಇದ್ದಾನೆ ಎಂದು ನಿರೂಪಿಸಿದರು ಎಂದರು.
ಕನಕದಾಸರ ಪುತ್ಥಳಿ ಲೋಕಾರ್ಪಣೆ ಇಡೀ ಜಿಲ್ಲೆಯಲ್ಲೇ ಪ್ರಥಮವಾಗಿ ನೆರವೇರಿದೆ. ಇದಕ್ಕೆ ಜಿಪಂ ಸದಸ್ಯ ಪಟೇಲ್ ಶಿವಪ್ಪನವರ ಕೊಡುಗೆ ಹೆಚ್ಚಿದೆ ಎಂದು ತಿಳಿಸಿದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಕನಕದಾಸರು ಸಮಾಜ ಕಟ್ಟುವ ಕಾರ್ಯ ಮಾಡಿದರು. ಅವರ ಆದರ್ಶಗಳು ನಮಗೆ ಅತ್ಯಮೂಲ್ಯವಾಗಿದೆ. ಆ ನಿಟ್ಟಿನಲ್ಲಿ ದಾಸರ ಪುತ್ಥಳಿಕೆಯ ಅನಾವರಣ ಅರ್ಥಪೂರ್ಣವಾಗಿದೆ. ಜಾತಿಯತೆ ಯುಗಾಂತರಗಳಿಂದಲೂ ಬೆಳೆದು ಬಂದಿದೆ. ಇದನ್ನು ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿರುವುದು ನೋವಿನ ಸಂಗತಿ. ಶೋಷಿತ ವರ್ಗದವರು ಸಮಾಜ ಮುಖಿಯಾಗಿ ಬರಬೇಕು ಎಂಬುದು ಹಲವು ನಾಯಕರು ಗಳು ಹೋರಾಟ ನಡೆಸಿದರು. ಆ ನಿಟ್ಟಿನಲ್ಲಿ ರಾಜಕಾರಣದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಹಲವರು ಮಾಡಿದ್ದಾರೆ ಎಂದರು.

ಜಿಪಂ ಸದಸ್ಯ ಪಟೇಲ್ ಶಿವಪ್ಪ ಮಾತನಾಡಿದರು. ಕಾರ್ಯಕ್ರಮ ದಲ್ಲಿ ರೇವಣಸಿದ್ದೇಶ್ವರ ಮಠದ ಗುರುಗಳು, ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತರಮೇಶ್, ಗ್ರಾಪಂ ಅಧ್ಯಕ್ಷೆ ಮಲ್ಲಿಕಾರ್ಜುನ್, ಪ್ರಾಂಶುಪಾಲ ಬಿ.ಚಂದ್ರಶೇಖರ್, ಜಿಪಂ ಮಾಜಿ ಅಧ್ಯಕ್ಷ ಹುಚ್ಚೇ ಗೌಡ, ಚಂದ್ರಶೇಖರ್, ಕುರುಬ ಸಮಾಜದ ರಾಜ್ಯ ಉಪಾಧ್ಯಕ್ಷ ನವಿಲೆ ಅಣ್ಣಪ್ಪ, ತಮ್ಮಣ್ಣಗೌಡ, ಗಿರಿಗೌಡ ಇದ್ದರು.

Translate »