ಇನ್ಫೋಸಿಸ್ ಫೌಂಡೇಷನ್‍ನಿಂದ ಮೇಲುಕೋಟೆ  ಪಾರಂಪರಿಕ ತಾಣಗಳ ಸಂರಕ್ಷಣೆ
ಮೈಸೂರು

ಇನ್ಫೋಸಿಸ್ ಫೌಂಡೇಷನ್‍ನಿಂದ ಮೇಲುಕೋಟೆ ಪಾರಂಪರಿಕ ತಾಣಗಳ ಸಂರಕ್ಷಣೆ

December 3, 2018

ಮೇಲುಕೋಟೆ: ಸರ್ಕಾರದ ಸಹ ಕಾರದೊಂದಿಗೆ ಇನ್ಫೋಸಿಸ್ ಫೌಂಡೇಷನ್ ಮೇಲುಕೋಟೆಯ ಪಾರಂಪರಿಕ ತಾಣಗಳನ್ನು ಸಂರಕ್ಷಿಸಲು ಸಂಕಲ್ಪ ಮಾಡಿದೆ ಎಂದು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ತಿಳಿಸಿದರು.

ಭಾನುವಾರ ಮೇಲುಕೋಟೆ ಕ್ಷೇತ್ರ ಅಭಿ ವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿ ದಂತೆ ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟದ ಸುಂದರ ಸಂಸ್ಕೃತಿ, ಪರಂಪರೆ ಹೊಂದಿದ ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿ ಆಗಬೇಕು. ಅದಕ್ಕಾಗಿ ಇಲ್ಲಿನ ಪಂಚಕಲ್ಯಾಣಿ ಸೇರಿದಂತೆ ಪಾರಂಪರಿಕ ಶೈಲಿಯ ಎಲ್ಲಾ ಕೊಳಗಳು, ಮಂಟಪಗಳನ್ನು ಜೀರ್ಣೋದ್ಧಾರ ಗೊಳಿಸಿ ನಿರಂತರ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗುವುದು. ಮೈಸೂರು ದಸರಾ ವೇಳೆ ಮುಖ್ಯಮಂತ್ರಿಗಳೊಡನೆ ಚರ್ಚಿಸಿದ್ದೇನೆ. ಅವರ ಒಪ್ಪಿಗೆ ನಂತರವೇ ಮುಂದಿನ ಯೋಜನೆ ರೂಪಿಸಿದ್ದೇವೆ. ಸರ್ಕಾರ ಮತ್ತು ಫೌಂಡೇಷನ್ ನಡುವೆ ಒಪ್ಪಂದ ಆಗಬೇಕು. ನಂತರ ಸ್ಮಾರಕಗಳ ರಕ್ಷಣೆ ಹಾಗೂ ಭಕ್ತರಿಗೆ ಅನುಕೂಲ ವಾಗುವ ಕಾಮಗಾರಿ ಆರಂಭಿಸಲಾಗುತ್ತದೆ. ನಾವು ನಿರ್ವಹಿಸುವ ಕೆಲಸಗಳಿಗೆ ಅನುದಾನದ ಮಿತಿ ನಿಗದಿ ಮಾಡಿಲ್ಲ. ಆದರೆ ಸರ್ಕಾರದ ಸಹಕಾರದಲ್ಲಿ ಪೂರ್ಣ ಪ್ರಮಾಣದ ಅಭಿವೃದ್ಧಿಗೆ ಕೈ ಜೋಡಿಸುತ್ತೇವೆ ಎಂದರು. ಮೇಲುಕೋಟೆ ಕಲ್ಯಾಣಿ ಸಮುಚ್ಛಯಕ್ಕೆ ಭೇಟಿ ನೀಡಿದ ಸುಧಾಮೂರ್ತಿ ಅವರು, ಮತ್ತೊಮ್ಮೆ ಅಶುಚಿತ್ವ ಕಂಡು ಅಸಮಧಾನ ವ್ಯಕ್ತಪಡಿಸಿದರು. ಭುವನೇಶ್ವರಿ ಮಂಟಪ, ಏಕಶಿಲಾ ಗಣಪ, ಕಲ್ಯಾಣಿಗೆ ನೀರು ಬರಲು ಮಾಡಿರುವ ಕಾಲುವೆ, ಅಕ್ಕತಂಗಿ ಕೊಳ ವೀಕ್ಷಿಸಿದರು. ಕಲ್ಯಾಣಿ ಆವರಣದಲ್ಲಿರುವ ಪೆಟ್ಟಿಗೆ ಅಂಗಡಿಗಳನ್ನು ಸ್ಥಳಾಂತರ ಮಾಡಿಕೊಟ್ಟರೆ ಸರ್ಕಾರದ ಒಪ್ಪಂದ ಪತ್ರ ಬರುವ ಮುನ್ನ ಕಾಂಪೌಂಡ್ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡುತ್ತೇವೆ. ಗಣಪನ ಸನ್ನಿಧಿಯಿಂದ ಕಲ್ಯಾಣಿಗೆ ಸಂಪರ್ಕ ಕಲ್ಪಿಸುವ ಕಾಲುವೆಗಳನ್ನು ಸ್ವಚ್ಛಗೊಳಿಸಿ ದುರಸ್ತಿಗೊಳಿಸುತ್ತೇವೆ ಎಂದರು.

ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಮೇಲುಕೋಟೆ ಅಭಿವೃದ್ಧಿಗೆ ಇನ್ಫೋಸಿಸ್ ಕೈಗೊಳ್ಳುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ, ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತದೆ. ತಿರುಪತಿಗೆ ಸಮಾನ ಮಹತ್ವ ಹೊಂದಿರುವ ಕ್ಷೇತ್ರವನ್ನು ಮಾದರಿ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತಿಸಲಾಗುತ್ತದೆ. ವಿವಿಧ ಇಲಾಖೆಗಳ ವತಿಯಿಂದಲೂ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿದೆ ಎಂದರು.

ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಪ್ರಾಚ್ಯವಸ್ತು ಇಲಾಖೆಯ ಹೆಚ್ಚಿನ ಅನುದಾನಗಳನ್ನು ಮೇಲುಕೋಟೆ ಅಭಿವೃದ್ಧಿಗೆ ಮೀಸಲಿಡಲಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿ ಉದ್ಯೋಗ ಸೃಷ್ಠಿಸಲಾಗುವುದು. ದೇವಾಲಯ, ಸ್ಮಾರಕಗಳ ಸುತ್ತಲ ಪರಿಸರವನ್ನು ಮುಜರಾಯಿ, ರಾಜ್ಯ ಪ್ರಾಚ್ಯುವಸ್ತು ಇಲಾಖೆ ಅಧಿಕಾರಿಗಳು ಸ್ವಚ್ಛವಾಗಿಟ್ಟುಕೊಳ್ಳಲು ಮುಂದಾಗ ಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಮಂಜುಶ್ರೀ, ಜಿಪಂ ಸಿಇಓ ಯಾಲಕ್ಕಿಗೌಡ, ಪ್ರಾಚ್ಯವಸ್ತು ಇಲಾಖೆ ಆಯುಕ್ತ ವೆಂಕಟೇಶ್, ಎಸಿ ಶೈಲಜಾ, ತಹಶೀಲ್ದಾರ್ ಹನುಮಂತರಾಯಪ್ಪ, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ನಂಜೇಗೌಡ ಇದ್ದರು.

ಪ್ರಸಾದ ವಿತರಣೆ ಆರಂಭಿಸಿ: ಭಕ್ತರಿಗೆ ಕನಿಷ್ಟ ಪುಳಿಯೋಗರೆ ಪ್ರಸಾದ ವಿತರಿಸುವ ಯೋಜನೆಯನ್ನಾದರೂ ಆರಂಭಿಸಿ ಎಂದು ದೇವಾಲಯದ ಅಧಿಕಾರಿಗೆ ಸುಧಾ ಮೂರ್ತಿ ಸಲಹೆ ನೀಡಿದರು. ಮಧ್ಯಾಹ್ನ ಮಹಾಮಂಗಳಾರತಿ ನಂತರ ದರ್ಶನ ಪಡೆಯುವ ಭಕ್ತರಿಗೆ ಒಂದು ದೊನ್ನೆ ಪುಳಿಯೋಗರೆ ವಿತರಿಸಲು ಯೋಜನೆ ರೂಪಿಸಿ ನಾನೂ ಸಹಕಾರ ನೀಡುತ್ತೇನೆ. ಭಕ್ತರೂ ಸಹಕಾರ ನೀಡುತ್ತಾರೆ ಎಂದರು.

ಸರ್ಕಾರವೇನೂ ಕೇಳಿರಲಿಲ್ಲ, ನಮಗೇ ನೋವಾಯ್ತುಅದಕ್ಕೆ ನಾವೇ ಕೊಡಗಿಗೆ ಹಣ ತೆಗೆದಿಟ್ಟೆವು: ಸುಧಾಮೂರ್ತಿ

ದಸರಾ ಉದ್ಘಾಟನೆ ವೇಳೆ ಕೊಡಗು ಸಂತ್ರಸ್ತರಿಗೆ ನೆರವು ನೀಡಿ ಎಂದು ಸರ್ಕಾರ ನಮ್ಮನ್ನು ಕೇಳಿರಲಿಲ್ಲ. ಆದರೆ ಕೊಡವರ ಕಷ್ಟ ನೋಡಿ ನಮಗೇ ನೋವಾಯ್ತು, ಅದಕ್ಕೆ ನಾವೇ ಕೊಡಗಿಗೆ ಹಣ ತೆಗೆದಿಟ್ಟೆವು ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಹೇಳಿದ್ದಾರೆ.

ಮೇಲುಕೋಟೆ ಕ್ಷೇತ್ರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮೇಲು ಕೋಟೆ ಪ್ರವಾಸಿ ಮಂದಿರದಲ್ಲಿ ನಡೆದ ಬಳಿಕ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನುಷ್ಯನ ದೇಹದಲ್ಲಿ ಒಂದು ಭಾಗಕ್ಕೆ ನೋವಾದ್ರೆ ಇನ್ನೊಂದು ಭಾಗಕ್ಕೆ ನೋವಾದ ಹಾಗೇ. ಕೊಡಗು ನಮ್ಮ ಕರ್ನಾಟಕದ ಒಂದು ಭಾಗವಾದ ಕೊಡಗಿಗೆ ಕಷ್ಟ ಬಂದಾಗ ನಮ್ಮ ಸಂಸ್ಥೆಯೇ ನೆರವು ನೀಡುವ ತೀರ್ಮಾನ ಮಾಡಿತ್ತು.

ನೆರವು ನೀಡಿ ಎಂದು ಯಾವ ಮಂತ್ರಿಯಾಗಲೀ ಕೇಳಿರಲಿಲ್ಲ. ಕನ್ನಡಿಗರಿಗಾಗಿ ಏನಾದ್ರು ಮಾಡಬೇಕೆಂದು 25 ಕೋಟಿ ನೀಡುವ ತೀರ್ಮಾನ ನಮ್ಮಸಂಸ್ಥೆ ಮಾಡಿತ್ತು. ನಮ್ಮ ಸಂಸ್ಥೆಯ ಮೂಲಕ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ಯೋಚನೆ ಮಾಡಿದ್ವಿ. ನಾವೂ ಸರ್ಕಾರಕ್ಕೆ ಕೇಳಿಕೊಂಡಿದ್ದೆವು. ಕೊಡಗಿಗೆ ಸಹಾಯ ಮಾಡಲು ಇಚ್ಛಿಸಿದ್ದೇವೆ. ಸಂತ್ರ ಸ್ತರಿಗೆ ಮನೆ ಕಟ್ಟಿ ಕೊಡಲು ತೀರ್ಮಾನಿಸಿದ್ದೇವೆ. ಹಾಗಾಗಿ ವಿದ್ಯುತ್ ಹಾಗೂ ಲೇಬರ್ ಕ್ಯಾಂಪ್‍ಗೆ ಜಾಗ ನೀಡಬೇಕೆಂದು ಸರ್ಕಾರದ ಬಳಿ ಕೇಳಿದ್ವಿ, ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ. ಸರ್ಕಾರವೇ ನೀಡಿದ ನಕ್ಷೆಯಂತೆ ನಮ್ಮ ತಂಡ ಮನೆಗಳನ್ನು ಕಟ್ಟಿಕೊಡಲಿದೆ. ನಾವು ಸರ್ಕಾರಕ್ಕೆ ಹಣ ನೀಡೋದಿಲ್ಲ ನಾವೇ ಮನೆ ಕಟ್ಟಿಸಿ ಕೊಡುತ್ತೇವೆ. ಸರ್ಕಾರ ಜಾಗತೋರಿಸಿದ ಮರು ದಿನವೇ ನಮ್ಮ ತಂಡ ಕೆಲಸ ಶುರು ಮಾಡಲಿದೆ. ಈಗಾಗಲೇ ನಮ್ಮಸಂಸ್ಥೆ ಈ ಯೋಜನೆಗಾಗಿ 25 ಕೋಟಿ ತೆಗೆದಿಟ್ಟಿದೆ ಎಂದು ಅವರು ತಿಳಿಸಿದರು.

Translate »