ಗೊಮ್ಮಟಗಿರಿ ಶಾಂತಮೂರ್ತಿಗೆ ವೈಭವದ ಮಸ್ತಕಾಭಿಷೇಕ
ಮೈಸೂರು

ಗೊಮ್ಮಟಗಿರಿ ಶಾಂತಮೂರ್ತಿಗೆ ವೈಭವದ ಮಸ್ತಕಾಭಿಷೇಕ

December 3, 2018

ಹುಣಸೂರು: ಜೈನ ಧರ್ಮದ ಆರಾಧ್ಯ ದೈವ ಹುಣಸೂರು ತಾಲೂಕು ಗೊಮ್ಮಟಗಿರಿಯ ಗೊಮ್ಮಟೇಶ್ವರ ನಿಗೆ ಇಂದು ವೈಭವದ 69ನೇ ಮಸ್ತಕಾಭಿಷೇಕ ಜರುಗಿತು.

ವಿವಿಧ ಅಭಿಷೇಕಗಳಲ್ಲಿ ಕಂಗೊಳಿಸಿದ ಮೂರ್ತಿಯನ್ನು ಕಂಡು ಭಕ್ತರು ಪುಳಕಿತರಾದರು. ತಾಲೂಕಿನ ಬಿಳಿಕೆರೆ ಹೋಬಳಿಯ ಬೆಟ್ಟದೂರು ಬಳಿಯ ದಿಗಂಬರ ಜೈನ ಅತಿಶಯ ಕ್ಷೇತ್ರ ಶ್ರೀ ಗೊಮ್ಮಟಗಿರಿಯ ವಿರಾಟ್‍ಯೋಗಿ ಗೊಮ್ಮಟೇಶ್ವರನಿಗೆ 69ನೇ ಮಸ್ತಕಾಭಿಷೇಕದ ಪ್ರತಿ ಅಭಿಷೇಕದಲ್ಲೂ ತನ್ನ ನಗು ಮುಖದ ತನ್ಮಯತೆಯ ಭಾವ ಮೆರೆದಾಗ ಭಕ್ತರು ಬಾಹುಬಲಿ ಭಗವಾನಕೀ ಜೈ, ಗೊಮ್ಮಟೇಶ್ವರಕೀ ಜೈ ಎನ್ನುತ್ತಾ ಭಕ್ತಿಪರವಶರಾದರು. ಅಭಿಷೇಕಕ್ಕೂ ಮುನ್ನ ಬೆಟ್ಟದ ಕೆಳಗಿನ ಸಭಾ ಭವನದ ಆವರಣದಲ್ಲಿ ನಡೆದ ಶಿವಮೊಗ್ಗ ಜಿಲ್ಲೆಯ ಹೊಂಬುಜ ಶ್ರೀ ಕ್ಷೇತ್ರದ ಡಾ.ದೇವೇಕೀರ್ತಿ ಭಟ್ಟಾರಕ ಪಟ್ಟಾರಕ ವರ್ಯ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಧಾರ್ಮಿಕ ಸಭೆ, ಕಳಸ ಹರಾಜಿನ ನಂತರ ಮಧ್ಯಾಹ್ನ ಬೆಟ್ಟದ ಮೇಲಿನ ಗೊಮ್ಮಟನಿಗೆ ವಿವಿಧ ಅಭಿಷೇಕಕ್ಕೆ ಸ್ವಾಮೀಜಿ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಅಭಿಷೇಕಗಳಲ್ಲಿ ಮಿಂದ ಗೊಮ್ಮಟ: ಗೊಮ್ಮಟನಿಗೆ ಮೊದಲು ಜಲಾಭಿಷೇಕ ಸಮರ್ಪಿಸಿದ ನಂತರ ಹೊಬುಜ ಮಠದ ಸ್ವಾಮೀಜಿ, ಅರ್ಚಕರಾದ ಪುಷ್ಪದಂತ ಇಂದ್ರ, ಧರಣೇಂದ್ರ, ಸರ್ವೇಶ್ ಅವರು ಮಂತ್ರಘೋಷಗಳ ನಡುವೆ ಎಳನೀರು, ಕ್ಷೀರ, ಕಷಾಯ, ಅರಿಶಿನ, ಕೇಸರಿ, ಅಷ್ಟಗಂಧ, ಕುಂಕುಮ, ಭತ್ತದ ಅರಳು, ಸಕ್ಕರೆ, ಕಲ್ಕಚೂರ್ಣ (ಅಕ್ಕಿಹಿಟ್ಟು,) ಚಂದನ, ಕಂಕಚೂರ್ಣ, ಪುಷ್ಪ, ಕನಕವೃಷ್ಟಿ ಕೊನೆ ಯಲ್ಲಿ ಚತುಷ್ಕಾಭಿಷೇಕ ಸೇರಿದಂತೆ ವಿವಿಧ ಅಭಿಷೇಕ ನೆರವೇ ರಿಸಿದರು. ಪ್ರತಿ ಅಭಿಷೇಕಕ್ಕೂ ಒಂದೊಂದು ಮಾದರಿಯಲ್ಲಿ ಗೊಮ್ಮಟ ಮೂರ್ತಿಯನ್ನು ಕಂಡು ತನ್ನ ಭಕ್ತರು ಧನ್ಯತಾ ಭಾವ ಹೊಂದಿದರು. ಗೊಮ್ಮಟನ ಪಾದದಡಿಯಲ್ಲಿ ನಿಂತ ಸಾಕಷ್ಟು ಭಕ್ತರು ಭಜನೆ ಮಾಡುವ, ಜೈಕಾರ ಹಾಕಿ ಸಂಭ್ರಮಿಸಿದರು.

ಕಳಸ ಹರಾಜು: ಹರಾಜಿನಲ್ಲಿ ಕಳಸ ತಮ್ಮದಾಗಿಸಿಕೊಂಡಿದ್ದ ಬೆಂಗ ಳೂರಿನ ನಾಗರತ್ನ, ವಿನುತಾ ಜೈನ್, ಶ್ರೀಧರ್, ಕಿರಣ್‍ಕುಮಾರ್, ಸಂತೋಷಕುಮಾರ್, ಹುಣಸೂರಿನ ಮೋಹನ್ ಲಾಲ್ ಮಾರು ಅವರು ಕುಟುಂಬ ಸಮೇತರಾಗಿ ಸ್ವಾಮೀಜಿಗಳೊಂದಿಗೆ ಬಾಹು ಬಲಿಸ್ವಾಮಿಗೆ ಅಭಿಷೇಕ ನೆರವೇರಿಸಿದರು.

ಮಹಿಳೆಯರಿಗೂ ಅವಕಾಶ: ಹಿಂದೆಲ್ಲಾ ಅರ್ಚಕರು ಹಾಗೂ ಹರಾಜಿನಲ್ಲಿ ಕಳಸ ತಮ್ಮದಾಗಿಸಿಕೊಂಡ ಕುಟುಂಬದವರಿಗೆ ಮಾತ್ರ ಅಭಿಷೇಕಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು, ಆದರೆ ಇದೇ ಪ್ರಥಮ ಬಾರಿಗೆ ಸ್ವಾಮೀಜಿಗಳೊಂದಿಗೆ ಮಹಿಳೆಯರಿಗೂ ಗೊಮ್ಮಟೇಶ್ವರ ನಿಗೆ ಅಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಮಸ್ತಕಾಭಿಷೇ ಕಕ್ಕೆ ಬಂದ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಮಸ್ತಕಾಭಿಷೇಕ ಮಹೋತ್ಸವಕ್ಕೆ ಸುತ್ತಮುತ್ತಲ ಗ್ರಾಮಗಳಲ್ಲದೆ, ದೂರದ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಬೆಟ್ಟ ಹತ್ತಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

ಸೆಲ್ಫಿಗೀಳು: ಯುವ ಸಮೂಹ ತೀರ್ಥಂಕರರ ಪಾದಕೂಟ, ಜಲ ಮಂದಿರ ಇನ್ನಿತರ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದು ಸಾಮಾನ್ಯವಾಗಿತ್ತು. ಬೆಟ್ಟದಲ್ಲಿ ಪಾನಿಪುರಿ, ತಂಪುಪಾನಿಯ, ಕಬ್ಬಿನ ಹಾಲಿನ ಕೇಂದ್ರಗಳು, ಇನ್ನು ಸಿಹಿತಿಂಡಿ ಅಂಗಡಿಗಳು, ಮಕ್ಕಳ ಆಟಿಕೆ ಮಾರಾಟಗಾರರು ಭರ್ಜರಿ ವ್ಯಾಪಾರ ವಹಿವಾಟು ನಡೆಸಿದರು. ಈ ಮಸ್ತಕಾ ಭಿಷೇಕದಲ್ಲಿ ಮಸ್ತಕಾಭಿಷೇಕ ಸಮಿತಿ ಕಾರ್ಯದರ್ಶಿ ಎಂ.ವಿ.ಶಾಂತಕುಮಾರ್, ಖಜಾಂಚಿ ಚಂದ್ರಕುಮಾರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಹಾಜರಿದ್ದರು. ಎಸ್‍ಐ ಎಂ.ನಾಯ್ಕ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದರು.

Translate »