ಬೆಂಗಳೂರು, ಉಡುಪಿ, ಬಾಗಲಕೋಟೆಯಲ್ಲಿ  ರಾಮಭಕ್ತರಿಂದ ರಣಕಹಳೆ
ಮೈಸೂರು

ಬೆಂಗಳೂರು, ಉಡುಪಿ, ಬಾಗಲಕೋಟೆಯಲ್ಲಿ  ರಾಮಭಕ್ತರಿಂದ ರಣಕಹಳೆ

December 3, 2018

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಇಂದು ಬೆಂಗಳೂರು, ಬಾಗಲಕೋಟೆ ಮತ್ತು ಉಡುಪಿಯಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಿತ್ತು.

ಬೆಂಗಳೂರಿನಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ರಾಮಭಕ್ತರು ಭಾಗವಹಿಸಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇಬೇಕು ಎಂದು ಆಗ್ರಹಿಸಿದರು. ಈ ಬೃಹತ್ ಸಭೆಗೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಂದ ಹಿಂದೂ ಪರ ಸಂಘಟನೆ ಗಳ ಕಾರ್ಯಕರ್ತರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು.

ಈ ಸಂಬಂಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಲಹಂಕ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಬನಶಂಕರಿ ಸೇರಿದಂತೆ ಹಲವಾರು ಕಡೆಗಳಿಂದ ರಾಮ ಹಾಗೂ ಹನುಮಂತನ ಬೃಹತ್ ಪ್ರತಿಮೆಯುಳ್ಳ ರಥಯಾತ್ರೆ ಹಾಗೂ ರಾಮ ಜನ್ಮ ಭೂಮಿ ಇತಿಹಾಸ ಸಾರುವ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಸಲಾಯಿತು.

ಈ ಐದು ಸ್ಥಳಗಳಿಂದಲೂ ಬೃಹತ್ ಮೆರವಣಿಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಆಗಮಿಸಿತ್ತು. ಮೆರವಣಿಗೆಯಲ್ಲಿ ಆಗಮಿಸಿದ ವಾಹನ ಗಳನ್ನು ಕನ್ನಡ ಸಾಹಿತ್ಯ ಪರಿಷತ್ ಸುತ್ತಮುತ್ತ, ಕೋಟೆ ಹೈಸ್ಕೂಲ್ ಮೈದಾನ, ಚಾಮರಾಜಪೇಟೆ ಮೈದಾನ, ಶಂಕರ ಮಠ ರಸ್ತೆ, ದೊಡ್ಡ ಗಣಪತಿ ದೇವಸ್ಥಾನದ ಬಳಿ ಹಾಗೂ ವಿವಿಪುರ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ನಿಲ್ಲಿಸಲಾಗಿತ್ತು. ಸಭೆಗಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿತ್ತು. ಮೈದಾನಕ್ಕೆ ನ್ಯಾಷನಲ್ ಕಾಲೇಜು ಮೆಟ್ರೋ ಕಡೆಯಿಂದಲೂ ಪ್ರವೇಶ ಕಲ್ಪಿಸಲಾಗಿತ್ತು. ವೇದಿಕೆ ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಾಗುವಂತೆ ಮೈದಾನದ ಪಕ್ಕದ ರಸ್ತೆಯಲ್ಲಿ 2 ಬೃಹತ್ ಎಲ್‍ಸಿಡಿ ಪರದೆಗಳನ್ನು ಅಳವಡಿಸಲಾಗಿತ್ತು.

ಜನಾಗ್ರಹ ಸಭೆಯಲ್ಲಿ ಜಬಲ್‍ಪುರ ಶ್ರೀ ಅಖಿಲೇಶ್ವರಾನಂದ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ನಿರ್ಮಲಾ ನಂದನಾಥ ಸ್ವಾಮೀಜಿ, ಆರ್‍ಎಸ್‍ಎಸ್ ಸಹ ಕಾರ್ಯನಿರ್ವಾಹಕ ಸಿ.ಆರ್.ಮುಕುಂದ, ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ ಪಾರಂಡೆ, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಚಾಮರಾಜ ಕ್ಷೇತ್ರ ಶಾಸಕ ಆರ್.ನಾಗೇಂದ್ರ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. ಈ ಸಭೆಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರಬೇಕು ಎಂದು ಆಗ್ರಹಿಸಲಾಯಿತು. ಮಂದಿರ ನಿರ್ಮಾಣಕ್ಕಾಗಿ ಯಾವ ತ್ಯಾಗಕ್ಕಾದರೂ ಸಿದ್ಧ ಎಂದು ಘೋಷಿಸಲಾಯಿತು.

ದೇಶದಲ್ಲಿ ರಾಮ ಮಂದಿರ ನಿರ್ಮಾಣದ ಬಿರುಗಾಳಿ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ

ಉಡುಪಿ: ಭಾರತದಲ್ಲಿ ರಾಮ ಮಂದಿರ ನಿರ್ಮಾ ಣದ ಬಿರುಗಾಳಿ ಎದ್ದಿದೆ. ರಾಮ ಮಂದಿರ ನಿರ್ಮಾಣವನ್ನು ಯಾರೂ ವಿರೋಧಿಸುವಂತಿಲ್ಲ ಎಂದು ಪರ್ಯಾಯ ಫಲಿಮಾರು ಶ್ರೀಗಳಾದ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾ ಣಕ್ಕೆ ಆಗ್ರಹಿಸಿ ಉಡುಪಿಯಲ್ಲಿ ನಡೆದ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಅಥವಾ ಚೀನಾದಲ್ಲಿ ರಾಮ ಮಂದಿರ ಕಟ್ಟಿಕೊಡಿ ಎಂದು ಕೇಳುತ್ತಿಲ್ಲ. ನಮ್ಮ ದೇಶದಲ್ಲಿ ರಾಮ ಕೇಳುತ್ತಿದ್ದೇವೆ. ಇದು ಬೇಡಿಕೆಯೇ ಹೊರತು, ನಾವು ಭಿಕ್ಷೆ ಕೇಳುತ್ತಿಲ್ಲ. ರಾಮ ದೇವರಿಗೆ ತನ್ನ ಮಂದಿರ ಕಟ್ಟಿಸಿಕೊಳ್ಳುವುದು ಕಷ್ಟವೇನೂ ಅಲ್ಲ ಎಂದರು. ರಾಮ ಮಂದಿರ ನಿರ್ಮಾಣದ ಉದ್ದೇಶದಿಂದ ಕೃಷ್ಣ ಮಠದಲ್ಲಿ ನಿರಂತರವಾಗಿ ಭಜನೆ ನಡೆಯುತ್ತಿದೆ. ಪ್ರೀತಿಯಿಂದ ರಾಮ ಮಂದಿರ ಕಟ್ಟೋಣ, ಗಲಾಟೆಯಿಂದಲ್ಲ. ಕೆಲವರು ರಾಮ ದೇವರು ಇದ್ದಾನಾ?ಎಂದು ಕೇಳುತ್ತಿದ್ದಾರೆ. ರಾಮನ ವಿರೋಧಿಸಿದವರಿಗೆ ಉಳಿಗಾಲವಿಲ್ಲ. ತಮಿಳುನಾಡಿ ನಲ್ಲಿ ರಾಮ ಸೇತು ಪ್ರಶ್ನಿಸಿದವರು ಇನ್ನೂ ಚೇತರಿಸಿಕೊಂಡಿಲ್ಲ. ನಾವು ದಕ್ಷಿಣದಿಂದ ಉತ್ತರಕ್ಕೆ ಪ್ರೀತಿಯ ಸೇತುವೆ ಕಟ್ಟೋಣ. ರಾಮ ಮಂದಿರ ವಿಷಯದಲ್ಲಿ ನ್ಯಾಯಾಲಯ ನ್ಯಾಯ ಕೊಟ್ಟಿಲ್ಲ. ಈಗ ಸಂಸತ್ತಿನ ಮೇಲೆ ನಮ್ಮೆಲ್ಲರ ನಿರೀಕ್ಷೆಯಿದೆ ಎಂದರು.

ಮೊದಲು ರಾಮ ಭಕ್ತೆ, ನಂತರ ಸಂಸದೆ: ನಾನು ಮೊದಲು ರಾಮಭಕ್ತೆ, ನಂತರ ಸಂಸದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಜಾತ್ಯತೀತ ಹೆಸರಿನಲ್ಲಿ ಹಲವಾರು ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಆದರೆ ಯಾವುದೇ ಸರ್ಕಾರ ರಾಮ ಮಂದಿರ ನಿರ್ಮಾಣ ಮಾಡಿಲ್ಲ. ಮೋದಿ ಸರ್ಕಾರದಿಂದ ರಾಮ ಮಂದಿರ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಆದೇಶಕ್ಕಾಗಿ ಕಾಯುತ್ತಿದೆ. ಕಪಿಲ್ ಸಿಬಲ್ ಮಧ್ಯೆ ಪ್ರವೇಶಿಸಿದ್ದಾರೆ. ಅ.29ಕ್ಕೆ ನಡೆಯಬೇಕಾಗಿದ್ದ ವಿಚಾರಣೆಯನ್ನು ಮುಂದಿನ ಜ. 29ಕ್ಕೆ ಮುಂದೂಡಿದ್ದಾರೆ. ಸುಗ್ರೀವಾಜ್ಞೆ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಮನವಿ ಮಾಡುತ್ತಿದ್ದು, ನಮ್ಮ ಭಾವನೆಯನ್ನು ಪ್ರಧಾನಿ ಮೋದಿಯವರಿಗೆ ತಿಳಿಸುತ್ತೇನೆ ಎಂದು ಹೇಳಿದರು.

ಸುಗ್ರೀವಾಜ್ಞೆ ಚಿಂತನೆ ಇಲ್ಲ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ನವದೆಹಲಿ: ಅಯೋಧ್ಯೆಯ ರಾಮ ಜನ್ಮ ಭೂಮಿ ಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುವ ಸಂಬಂಧ ಸುಗ್ರೀ ವಾಜ್ಞೆ ಹೊರಡಿಸುವ ವಿಚಾರವಾಗಿ ಬಿಜೆಪಿ ಇನ್ನೂ ಚಿಂತನೆ ಮಾಡಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಕೈಲಾಶ್ ವಿಜಯ ವರ್ಗೀಯ ಹೇಳಿದ್ದಾರೆ. ಆದರೆ, ರಾಮ ಮಂದಿರ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ, ಬೇರಾರಿಂದಲೂ ಅಲ್ಲ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ದ್ದಾರೆ. ಮಂದಿರ ವಿಚಾರದ ದಾವೆಯ ತೀರ್ಪಿನ ವಿಚಾರವಾಗಿ ನಾವು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದೇವೆ. ಸದ್ಯ ವಿಚಾರ ನ್ಯಾಯಾಲಯದಲ್ಲಿದೆ. ಹಾಗಾಗಿ ನಾವು ಆತುರದಿಂದ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಆದರೆ ಜನತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅದಲ್ಲದೇ ಶಿವಸೇನೆ, ವಿಶ್ವ ಹಿಂದೂ ಪರಿಷತ್‍ನವರೂ ಸುಗ್ರೀವಾಜ್ಞೆ ಹೊರಡಿಸುವಂತೆ ಆಗ್ರಹಿಸುತ್ತಿದ್ದಾರೆ. ಸದ್ಯಕ್ಕೆ ಪಕ್ಷದಲ್ಲಿ ಅಂತಹ ಚಿಂತನೆ ಇಲ್ಲ ಎಂದಿದ್ದಾರೆ. ಜನವರಿ ಆರಂಭದಲ್ಲೇ ಸುಪ್ರೀಂಕೋರ್ಟ್‍ನಲ್ಲಿ ಈ ವಿಚಾರ ವಿಚಾರಣೆಗೆ ಬರಲಿದೆ. ಇದರ ಬಗ್ಗೆಯೂ ಒತ್ತಾಯವನ್ನು ನ್ಯಾಯಾಲಯದಲ್ಲಿಯೂ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.

ಸಂಘ ಪರಿವಾರದವರು ರಾಮಮಂದಿರ ಕಟ್ಟಲು ಸಿದ್ಧ… ಸುಗ್ರೀವಾಜ್ಞೆ ತರಲು ಕೇಂದ್ರ ಸಿದ್ಧವಾಗಲಿ: ಪೇಜಾವರ ಶ್ರೀ
ಬೆಂಗಳೂರು, ಡಿ.2-ಈ ಜನಾಗ್ರಹ ಸಭೆಯನ್ನು ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರಲು ಆಯೋ ಜನೆ ಮಾಡಲಾಗಿದೆ. ಸಂಘ ಪರಿವಾರದವರು ರಾಮ ಮಂದಿರ ಕಟ್ಟಲು ಸಿದ್ಧವಾಗಿದ್ದಾರೆ. ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ತರಲು ಸಿದ್ಧವಾಗಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ರಾಮ ಮಂದಿರ ವಿಚಾರ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈಗಲೂ ಕೂಡ ಜನಾಂದೋ ಲನ ನಡೆಯುತ್ತಿದೆ. ನ್ಯಾಯಾಲಯಗಳು ಹಿಂದೂ ಸಮಾಜದ ಭಾವನೆಗೆ ಗೌರವ ಕೊಡ ಬೇಕು. ಆದರೆ ನ್ಯಾಯಾಧೀಶರಿಗೆ ರಾಮಮಂದಿರ ನಿರ್ಮಾಣ ವಿಚಾರ ಆದ್ಯತೆಯಾಗಿಲ್ಲ. ಇದು ರಾಮನಿಗೆ ಹಾಗೂ ಹಿಂದೂಗಳಿಗೆ ಮಾಡಿದ ಅವಮಾನ ಎಂದರು.

ನನಗೆ 85 ವರ್ಷ ವಯಸ್ಸಾಗಿದೆ. ರಾಮ ಮಂದಿರದಲ್ಲಿ ರಾಮನನ್ನು ದರ್ಶನ ಮಾಡು ತ್ತೇನೋ ಇಲ್ಲವೋ ಗೊತ್ತಿಲ್ಲ. ಸಂತರು, ಮಠಾಧೀಶರು ಯಾವುದೇ ರಾಜಕೀಯ ಪಕ್ಷದ ವಿರುದ್ಧ ಧ್ವನಿ ಎತ್ತಿಲ್ಲ. ಕ್ರಿಶ್ಚಿಯನ್ ಮತ್ತು ಮುಸ್ಲಿಮರು ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಬೇಕು. ಅವರು ಬೆಂಬಲ ನೀಡಿದರೆ ದೇಶದಲ್ಲಿ ಹಿಂದೂ-ಮುಸ್ಲಿಂ ನಡುವೆ ದೊಡ್ಡ ಸೌಹಾರ್ದತೆ ಬೆಳೆಯುತ್ತದೆ ಎಂದು ಹೇಳಿದರು.

ಲೋಕಸಭೆ ಮತ್ತು ರಾಜ್ಯಸಭೆಯ ಸಂಯುಕ್ತ ಸಭೆ ಕರೆದು ಪ್ರಧಾನಿ ಮೋದಿ ಅವರು ದೇಶದ ಸಂತರ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಅವರು ಸಭೆ ನಡೆಸದಿದ್ದರೆ ಉಪವಾಸ ಕುಳಿತುಕೊಳ್ಳೋಣ. ರಾಮ ಮಂದಿರ ನಿರ್ಮಿಸಲು ಎಂತಹ ತ್ಯಾಗಕ್ಕೂ ಸಿದ್ಧರಾ ಗೋಣ. ನಾವು ಕೋಮುವಾದಿಗಳಲ್ಲ, ಪ್ರೇಮವಾದಿಗಳು. ನಾವು ಯಾರನ್ನೂ ದ್ವೇಷಿಸುವು ದಿಲ್ಲ ಎಂದರು. ಆರ್‍ಎಸ್‍ಎಸ್ ಸಹ ಕಾರ್ಯವಾಹ ಮುಕುಂದ್ ಅವರು ಮಾತನಾಡಿ, ಹಿಂದೂ ಸಮಾಜಕ್ಕೆ ನ್ಯಾಯಾಲಯಗಳಲ್ಲಿ ಬೆಲೆ ಇಲ್ಲ.

ನ್ಯಾಯಾಲಯಗಳಿಗೆ ಹಿಂದೂ ಸಮಾಜ ಆದ್ಯತೆಯಲ್ಲ. ಕೋಟಿ ಜನರ ಭಾವನೆ ಮುಖ್ಯ ವಿಷಯವಲ್ಲ. ನ್ಯಾಯಾಲಯ ಗಳಿಗೆ ಯಾಕುಬ್ ಮೆನನ್, ನಾಯಿಗಳಿಗೆ ಕಲ್ಲು ಹೊಡೆಯುವ ವಿಚಾರಗಳು ಆದ್ಯತೆಗಳಾಗಿವೆ. ಹಿಂದೂಗಳ ಭಾವನೆ ಆದ್ಯತೆ ಅಲ್ಲವಂತೆ. ಅದಕ್ಕಾಗಿ ಜನಾಗ್ರಹ ಸಭೆ ಮಾಡಬೇಕಾಯಿತು ಎಂದರು. ಜಬಲ್‍ಪುರದ ಅಖಿಲೇಶ್ವರಾನಂದ ಸ್ವಾಮೀಜಿ ಮಾತನಾಡಿ, ಹಿಂದೂಗಳ ಭಾವನೆಗೆ ಧಕ್ಕೆ ತಂದರೆ ನಾವು ಅಂತಹವರ ವಿರುದ್ಧ ಆಂದೋಲನಕ್ಕೆ ಇಳಿದೇ ಇಳಿಯುತ್ತೇವೆ. ಇಲ್ಲಿವರೆಗೂ ನಾವು ಹಲವು ವಿಷಯಗಳನ್ನು ಒಪ್ಪಿಕೊಂಡಿದ್ದೇವೆ. ಆದರೆ ರಾಮ ಜನ್ಮಭೂಮಿ ವಿಚಾರದಲ್ಲಿ ಯಾವುದೇ ಸಬೂಬು ಬೇಡ. ರಾಹುಲ್ ಗಾಂಧಿ ತೆಲಂಗಾಣದಲ್ಲಿ ನಮ್ಮ ಪೂರ್ವಜರು ಮುಸಲ್ಮಾನರು ಅಂತಾರೆ. ನನ್ನ ಅಮ್ಮ ಕ್ರಿಶ್ಚಿಯನ್ ಅಂತಾರೆ. ಆದರೆ ದೇವಸ್ಥಾನಕ್ಕೆ ಹೋದಾಗ ಹಿಂದೂ ಅಂತಾರೆ. ಅವರಿಗೆ ಯಾವ ಧರ್ಮವೂ ಇಲ್ಲ, ಗೋತ್ರವೂ ಇಲ್ಲ ಎಂದು ಟೀಕಿಸಿದರು.

Translate »