ಮಾಕುಟ್ಟ ರಸ್ತೆ ಕಾಮಗಾರಿ ಪರಿಶೀಲನೆ
ಕೊಡಗು

ಮಾಕುಟ್ಟ ರಸ್ತೆ ಕಾಮಗಾರಿ ಪರಿಶೀಲನೆ

January 24, 2019

ವಿರಾಜಪೇಟೆ: ಕೊಡಗು-ಕೇರಳ ಸಂಪರ್ಕ ರಾಜ್ಯ ಹೆದ್ದಾರಿಯಲ್ಲಿ ಭಾರಿ ಮಳೆಯಿಂದಾಗಿ ಕುಸಿದು ಹಾನಿಗೊಳಗಾಗಿದ್ದ ಮಾಕುಟ್ಟ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಲೋಕೊಪಯೋಗಿ ಇಲಾಖೆ ಅಧಿಕಾರಿಗಳೋಂದಿಗೆ ಮಾಕುಟ್ಟಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಣೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಬೋಪಯ್ಯ, ಮಹಾ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿತ್ತು. ಈಗ ತುರ್ತು ಕಾಮಗಾರಿ ಮುಗಿದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ಬಾಕಿ ಉಳಿದಿರುವ ತಡೆಗೋಡೆ, ಸೇತುವೆ, ಮೋರಿಗಳ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಫೆಬ್ರವರಿ ತಿಂಗಳ ಕೊನೆಯಲ್ಲಿ ಬಿಟ್ಟು ಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಕಾರ್ಯಪಾಲಕ ಅಭಿಯಂತರ ಕೆ.ಇ.ಇಬ್ರಾಹಿಂ ಮಾತನಾಡಿ, ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಅಭಿವೃದ್ಧಿಗಾಗಿ ಈಗಾಗಲೇ ಅನೇಕ ತಡೆಗೋಡೆಗಳ ನಿರ್ಮಾಣ, ರಸ್ತೆ ನಿರ್ಮಾಣ, ರಸ್ತೆಬದಿಯ ವಾಲ್, ರಕ್ಷಣಾ ಕಾಮಗಾರಿಗಳನ್ನು ಮಾಡ ಲಾಗಿದೆ. ಹೆದ್ದಾರಿಯಲ್ಲಿರುವ ಮಾಕುಟ್ಟ ಅರಣ್ಯ ಕಚೇರಿಯ ಪಕ್ಕದ ಹೊಳೆಗೆ ರೂ. 1 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮತ್ತು ಕೂಟುಪೊಳೆ ಸೇತುವೆ ಪಕ್ಕದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ಅಭಿಯಂತರರು ಹೇಳಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ಶಶಿ ಸುಬ್ರಮಣಿ, ಬಿಜೆ ಪಿಯ ಗಿರೀಶ್ ಗಣಪತಿ, ಎಂ.ಮಧುದೇವಯ್ಯ, ವಿಷ್ಣು, ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಇ.ಸುರೇಶ್, ಅಭಿಯಂತರುಗಳಾದ` ಯು.ಆರ್.ಯತೀಶ್, ನವಿನ್ ಪೊನ್ನಣ್ಣ ಇತರರು ಉಪಸ್ಥಿತರಿದ್ದರು.

Translate »