2023ರೊಳಗೆ ಜಿಲ್ಲೆ ಮಲೇರಿಯಾ ಮುಕ್ತ: ಡಾ.ಸತೀಶ್
ಹಾಸನ

2023ರೊಳಗೆ ಜಿಲ್ಲೆ ಮಲೇರಿಯಾ ಮುಕ್ತ: ಡಾ.ಸತೀಶ್

July 6, 2018

ಹಾಸನ:  ‘ಸೊಳ್ಳೆಯಿಂದ ಮಲೇರಿಯಾ ಮತ್ತು ಡೆಂಗ್ಯೂ ಹರಡು ವುದರಿಂದ ಇದರ ನಿಯಂತ್ರಣಕ್ಕೆ ಕ್ರಮ ವಹಿಸಲು ಜನರಿಗೆ ತಿಳುವಳಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ 2023ರ ವೇಳೆಗೆ ಮಲೇರಿಯಾ ನಿರ್ಮೂಲನೆ ಮಾಡುವ ಗುರಿ ಹೊಂದಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಂಗಳವಾರ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಲಾಖೆಯಿಂದ ಪತ್ರಕರ್ತರಿಗಾಗಿ ಹಮ್ಮಿ ಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸೊಳ್ಳೆಗಳಿಂದ ಹರಡುವ ಮಲೇರಿಯಾ ಮತ್ತು ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ ಒಂದೇ ಒಂದು ಮಲೇರಿಯಾ ಪ್ರಕರಣ ವರದಿಯಾಗಿದ್ದು, ಅವರು ಗುಣಮುಖರಾಗಿರುತ್ತಾರೆ. ಮಂಗ ಳೂರು ಅಥವಾ ಇತರೆ ಮಲೇರಿಯಾ ಪೀಡಿತ ಪ್ರದೇಶ/ ರಾಜ್ಯಗಳಿಂದ ಜಿಲ್ಲೆಗೆ ಅನ್ಯ ಕಾರ್ಯ ನಿಮಿತ್ತ ಬರುವ ಕಾರ್ಮಿಕರ ಬಗ್ಗೆ ನಿಗಾವಹಿಸಲಾಗಿದ್ದು, ಅವರಿಗೆ ಕೂಡಲೇ ರಕ್ತ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

2025ರ ವೇಳೆಗೆ ರಾಜ್ಯದಲ್ಲಿ ಮಲೇ ರಿಯಾ ನಿರ್ಮೂಲನೆ ಗುರಿ ಹೊಂದಿದ್ದು, ಜಿಲ್ಲೆಯಾದ್ಯಂತ ಈ ನಿಟ್ಟಿನಲ್ಲಿ ನಿಯಂತ್ರಣ ಕಾರ್ಯ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮಂಗಳೂರು ಅಥವಾ ಇತರೆ ಮಲೇರಿಯಾ ಸಮಸ್ಯಾತ್ಮಕ ಪ್ರದೇಶಗಳಿಂದ ಹೋಗಿ ಬರುವವರ ಅಥವಾ ವಲಸೆಗಾರರ ರಕ್ತ ಲೇಪನಗಳನ್ನು ಸಂಗ್ರಹಿಸಿ ಮಲೇರಿಯಾ ಪತ್ತೆ ಹಚ್ಚಿ ಹರಡುವಿಕೆಯನ್ನು ನಿಯಂತ್ರಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಮಲೇರಿಯಾ ಸೊಳ್ಳೆಗಳಾದ ಅನಾಫೀಲಿಸ್ ಗಳು ನಿಂತ ತಿಳಿ ನೀರು ಅಂದರೆ, ಕೆರೆ, ಕಟ್ಟೆ, ಹಳ್ಳ, ಬಾವಿ, ನದಿ, ಡ್ಯಾಂ ಅಥವಾ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು ಇವುಗಳಲ್ಲಿ ಬೆಳೆಯುತ್ತವೆ. ಆದ್ದರಿಂದ ಅವುಗಳ ನಿಯಂತ್ರಣ ಸಲುವಾಗಿ ಅಂತಹ ನೀರಿನ ತಾಣಗಳಲ್ಲಿ ಗಪ್ಪಿ- ಗಾಂಬೂ ಷಿಯಾ ಮೀನುಗಳನ್ನು ಬಿಡಲಾಗಿದೆ ಎಂದು ಮಾಹಿತಿ ನೀಡಿದರು.

ಕೀಟ ಶಾಸ್ತ್ರಜ್ಞ ರಾಜೇಶ್ ಮಾತನಾಡಿ, ಡೆಂಗ್ಯೂ ಜ್ವರದ ಬಗ್ಗೆ ತಿಳಿಯಲು ಪ್ಲೇಟ್ ಲೇಟ್ ಮತ್ತು ರಕ್ತ ಪರೀಕ್ಷೆಗೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಏಕ ಬೆಲೆ ನಿಗದಿ ಮಾಡಲಾಗಿದೆ. ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯೂ ಪತ್ತೆಯಾಗಿದೆ ಎಂಬುದನ್ನು ಘೋಷಣೆ ಮಾಡುವಂತಿಲ್ಲ. ಎಲೈಸಾ ಪರೀಕ್ಷೆಗೆ ಒಳಪಡಿಸಿದ ನಂತರ ಡೆಂಗ್ಯೂಯನ್ನು ಖಚಿತಪಡಿಸಿಕೊಳ್ಳ ಬಹುದು. ಎಲ್ಲಾ ಖಾಸಗಿ ಆಸತ್ರ್ರೆಯಲ್ಲಿ ಡೆಂಗ್ಯೂ ಪರೀಕ್ಷೆಗೆ ತಗಲುವ ವೆಚ್ಚವನ್ನು ಫಲಕದಲ್ಲಿ ಹಾಕಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜ್‍ಗೋಪಾಲ ಮಾತನಾಡಿ, ಡೆಂಗ್ಯೂ ಜೂನ್ ಮತ್ತು ಜುಲೈ ನಲ್ಲಿ ಹರಡುವುದು ಹೆಚ್ಚು. ಮಳೆ ಬಂದು ಕಡಿಮೆಯಾದ ಸಮಯದಲ್ಲಿ ಲಾರ್ವಾ ಉತ್ಪತ್ತಿ ಯಾಗುತ್ತದೆ. ಕಳೆದ ಬಾರಿ ಪ್ರಕರಣ ಬಂದಿ ದ್ದರೂ ಯಾವುದೇ ಸಾವು ಸಂಭವಿಸಿ ರುವುದಿಲ್ಲ ಎಂದರು. ಕಾರ್ಯಾಗಾರದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಂಕರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಹಿರಣ್ಣಯ್ಯ, ಪತ್ರಕರ್ತ ಪ್ರಕಾಶ್ ಇದ್ದರು.

Translate »