ಮಂಡ್ಯ ಲೋಕಸಭಾ ಉಪ ಚುನಾವಣೆ: ಹಾಲಿ, ಮಾಜಿ ‘ದಳ’ಪತಿಗಳ ಕದನ
ಮಂಡ್ಯ

ಮಂಡ್ಯ ಲೋಕಸಭಾ ಉಪ ಚುನಾವಣೆ: ಹಾಲಿ, ಮಾಜಿ ‘ದಳ’ಪತಿಗಳ ಕದನ

October 10, 2018

ಮಂಡ್ಯ: ಲೋಕಸಭಾ ಉಪಚುನಾವಣಾ ಕಣ ದಿನೇ ದಿನೆ ಕಾವೇರುತ್ತಿದೆ. ಹಾಲಿ-ಮಾಜಿ ದಳಪತಿಗಳಾದ ಸಿ.ಎಸ್.ಪುಟ್ಟರಾಜು ಮತ್ತು ಎನ್.ಚೆಲುವರಾಯಸ್ವಾಮಿ ನಡುವೆ ಬಹಿರಂಗ ವಾಕ್ಸಮರ ಶುರುವಾಗಿರುವುದು ಒಂದೆಡೆಯಾದರೆ ದಳದೊಳಗೆ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಮತ್ತು ನಿವೃತ್ತ ಐಆರ್‍ಎಸ್ ಅಧಿಕಾರಿ ಲಕ್ಷ್ಮಿಅಶ್ವಿನ್ ಗೌಡರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದಾಟ ತಾರಕಕ್ಕೇರಿದೆ.

ಡೆಡ್ ಹಾರ್ಸ್‍ಗಳೆಲ್ಲಾ ಮಾತನಾಡೋ ಹಾಗಾಗಿದೆ: ಡೆಡ್ ಹಾರ್ಸ್‍ಗಳೆಲ್ಲಾ ಮಾತ ನಾಡುವ ಹಾಗಾಗಿದೆ ಎನ್ನುವ ಮೂಲಕ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಅವರನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಹಿಯ್ಯಾಳಿಸಿದ್ದಾರೆ.

ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಇತಿಹಾಸದಲ್ಲಿ 52 ಸಾವಿರ ಲೀಡ್‍ನಲ್ಲಿ ನಾಗಮಂಗಲದಲ್ಲಿ ಗೆದ್ದಿದ್ದು ನೋಡಿದ್ದೀರಾ. ಚೆಲುವರಾಯಸ್ವಾಮಿ ಅವರನ್ನು ಜನರು ಸ್ವಲ್ಪ ಬಾಯಿ ಮುಚ್ಚಿಕೊಂಡು ಇರಲಿ ಅಂತ ಸೋಲಿಸಿ ಕಳುಹಿಸಿದ್ದಾರೆ. ಮೊದಲು ಅವರು ಅದನ್ನು ಮಾಡಲಿ ಎಂದು ಹೇಳಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಮ್ಮ ಪಕ್ಷದಲ್ಲಿ ಸಮರ್ಥರಿದ್ದಾರೆ. ಸ್ಪರ್ಧೆಯೂ ಇದೆ. ಅಂತಿಮವಾಗಿ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು, ಸಿಎಂ ಕುಮಾರಣ್ಣ ಅವರು ತೀರ್ಮಾನ ಮಾಡುತ್ತಾರೆ. ಹೀಗೆ ತೀರ್ಮಾನ ಮಾಡಿದ ಅಭ್ಯರ್ಥಿಯನ್ನು ಅತ್ಯಂತ ಭಾರೀ ಅಂತರ ದಿಂದ ಮಂಡ್ಯ ಜನತೆ ಗೆಲ್ಲಿಸಿಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

ನಾನೊಬ್ಬ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರಿಂದ ಸಮರ್ಥವಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು. ಈ ಹಿನ್ನೆಲೆಯಲ್ಲಿ ಇರುವಂತಹ ವಸ್ತುಸ್ಥಿತಿಯನ್ನು ರಾಷ್ಟ್ರಾಧ್ಯಕ್ಷರು, ಸಿಎಂ ಹಾಗೂ ರಾಜ್ಯಾ ಧ್ಯಕ್ಷರಿಗೆ ಮನವರಿಕೆ ಮಾಡಿಕೊಡುತ್ತೇನೆ. ಅದರ ಹಿನ್ನೆಲೆಯಲ್ಲಿ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.

ಮೈತ್ರಿ ಬೇಕು ಅಂತ ಮಂಡ್ಯದಲ್ಲಿ ನಾವ್ಯಾರೂ ಗೋಗರೆಯುತ್ತಿಲ್ಲ. ಜನ ಕೊಟ್ಟ ತೀರ್ಪಿನಿಂದ ಅನಿವಾರ್ಯತೆ ಬಂದ ಕಾರಣ ಈ ರಾಜ್ಯದಲ್ಲಿ ಇಂದು ಸಮ್ಮಿಶ್ರ ಸರ್ಕಾರ ಆಗಿದೆ. ಮಂಡ್ಯದಲ್ಲಿ ಜೆಡಿಎಸ್ ಸುಭದ್ರವಾಗಿದೆ. ಹೀಗಾಗಿ ಇಂದು ನಾವು ಯಾರ ಜೊತೆನೂ ಅಂಗಲಾಚುವ ಅಗತ್ಯತೆ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ವಿಡುವ ನಿಟ್ಟಿನಲ್ಲಿ ನಾಯಕರು ಮೈತ್ರಿಗೆ ಸಮ್ಮತಿಸಿದ್ರು. ಹೀಗಾಗಿ ಎರಡೂ ಪಕ್ಷದ ನಾಯಕರ ತೀರ್ಮಾನದಂತೆ ನಾನೂ ನಡೀಬೇಕಾಗುತ್ತದೆ. ಚೆಲುವರಾಯ ಸ್ವಾಮಿ ಅವರೂ ನಡೀಬೇಕಾಗಿದೆ ಎಂದು ತಿಳಿಸಿದರು.

ಸಿಎಂ ಎಷ್ಟು ಅಂತರದಿಂದ ಸೋತಿದ್ರು ಗೊತ್ತಾ: ನಾನು ಎಷ್ಟು ಸಾವಿರ ಅಂತರದಿಂದ ಸೋತಿದ್ದೇನೆ ಎಂಬುದು ಗೊತ್ತಿರಲಿಲ್ಲ. ಸತ್ತ ಕುದುರೆಗಳು ಅಂತಾ ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಹೇಳಿದ್ದಾರೆ. ನಮ್ಮನ್ನ ಯಾವ ಸ್ಥಿತಿಗೆ ಜನ ತಂದರು ಅನ್ನೋದನ್ನ ಅವರೇ ಹೇಳಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಸತ್ತ ಕುದುರೆಗಳು ಮಾತನಾಡುವಂತಾಗಿವೆ’’ ಎಂಬ ಸಚಿವ ಸಿ.ಎಸ್ ಪುಟ್ಟರಾಜು ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಮೈತ್ರಿ ಅನ್ನೋದು ಬರೀ ವಿಧಾನಸೌಧಕ್ಕೆ ಸೀಮಿತ ಅಂತ ದೇವೇಗೌಡರೇ ಹೇಳಿದ್ದಾರೆ. ಸಿ.ಎಸ್. ಪುಟ್ಟರಾಜುಗೆ ನಿಜವಾದ ರಾಜಕಾರಣ ಗೊತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಸಿಎಂ ಎಷ್ಟು ಅಂತರದಿಂದ ಸೋತಿದ್ದರು ಅನ್ನೋದು ಗೊತ್ತಿಲ್ಲ ಅನ್ಸುತ್ತೆ? ಎಂದು ಸಚಿವ ಪುಟ್ಟರಾಜು ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಸರ್ಕಾರದ ಫಲಾನುಭವಿಗಳು, ಪ್ರತಿಫಲ ಅನುಭವಿಸುತ್ತಿರುವವರಿಗೆ ಕೃತಜ್ಞತೆ ಇರಬೇಕು. ಸಮ್ಮಿಶ್ರ ಸರ್ಕಾರದ ಬಗ್ಗೆ ನಮಗೆ ಅಭ್ಯಂತರವಿಲ್ಲ. ಆದರೆ, ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಹಾಕಲೇಬೇಕು. ಇದನ್ನು ನಮ್ಮ ನಾಯಕರಿಗೆ ತಿಳಿಸುತ್ತೇವೆ. ಅವರು ನಾವು ಕಾಂಗ್ರೆಸ್ ಮನೆಗೆ ಹೋಗಿ ಅಧಿಕಾರ ಕೊಡಿ ಅಂತಾ ಕೇಳಿಲ್ಲ ಎನ್ನುತ್ತಾರೆ. ಆದರೆ ಹಾಸನದಲ್ಲಿ ಬಾಯಿಗೆ ಬಂದಂತೆ ಮಾತನಾಡ್ತಾರೆ. ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರ ಕೆಲಸಗಳು ನಡೆಯುತ್ತಿಲ್ಲ, ಮಂಡ್ಯ ಜಿಲ್ಲೆಯಲ್ಲಿ ನಮ್ಮನ್ನೆ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ಕೇವಲ ವರಿಷ್ಠರ ನಿರ್ಧಾರದಂತೆ ಮೈತ್ರಿ ಸರ್ಕಾರಕ್ಕೆ ನಾವು ಬದ್ಧರಾಗಿದ್ದೇವೆ.

ಫಲಾನುಭವಿ ಸಚಿವ ಜವಾಬ್ದಾರಿಯಿಂದ ಮಾತನಾಡಬೇಕು. ನಾನು ಅವರಷ್ಟು ಕೆಳ ಮಟ್ಟಕ್ಕೆ ಇಳಿದು ಮಾತನಾಡಲ್ಲ. ಅವರು ಯಾವ ರೀತಿ ಸಂಸದರಾದರು ಅನ್ನೋದು ಗೊತ್ತು? ದೇವೇಗೌಡರೇ ಕೇಳಿದ್ದರು ನೀನು ಹೇಗೆ ಗೆದ್ದು ಬಂದಿದ್ದೀಯಾ ಅಂತಾ. ಈಗ ಮಂಡ್ಯದಲ್ಲಿ ಜೆಡಿಎಸ್ ಗೆದ್ದಿರಬಹುದು. ಆದರೆ ಈಗಲೂ ಕಾಂಗ್ರೆಸ್ ಅಭ್ಯರ್ಥಿ ಹಾಕಿದರೆ ನೇರ ಪೈಪೋಟಿ ಕೊಡುವ ಶಕ್ತಿ ಇದೆ ಎಂದರು. ಒಟ್ಟಿನಲ್ಲಿ ಕೈ & ದಳದೊಳಗಿನ ಈ ಬೆಳವಣಿಗೆ ಯಾವ ಹಂತಕ್ಕೆ ಕೊಂಡೊಯ್ಯ ಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಎಲ್‍ಆರ್‍ಎಸ್-ಲಕ್ಷ್ಮಿಅಶ್ವಿನ್‍ಗೌಡರ ನಡುವೆ ಗುದ್ದಾಟ
ಲೋಕಸಭಾ ಉಪ ಚುನಾವಣೆಗೆ ಮಂಡ್ಯದಿಂದ ಯಾರನ್ನು ಕಣಕ್ಕಿಳಿಸಬೇಕೆಂಬುದು ಜೆಡಿಎಸ್‍ಗೆ ತಲೆನೋವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶಿವರಾಮೇಗೌಡರು ಯೋಚಿಸುತ್ತಿದ್ದು, ಜೆಡಿಎಸ್ ಟಿಕೆಟ್‍ಗಾಗಿ ಪ್ರಯತ್ನ ಪಡುತ್ತಿ ದ್ದಾರೆ. ಇತ್ತ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆ ಗಳಿವೆ. ಎಲ್.ಆರ್.ಶಿವರಾಮೇಗೌಡ ಹೆಸರಿನ ಫೇಸ್‍ಬುಕ್ ಪೇಜಿನಲ್ಲಿ ಬರೆದುಕೊಂಡಿ ರುವ ಕೆಲವು ಸಾಲುಗಳು ಜೆಡಿಎಸ್‍ನಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ ಎಂದು ಹೇಳುತ್ತಿವೆ.

ಫೇಸ್‍ಬುಕ್ ನಲ್ಲಿ ಏನು ಬರೆಯಲಾಗಿದೆ?: ಯಾರೀ ಸ್ವಾಮಿ, ಈ ಲಕ್ಷ್ಮಿಅಶ್ವಿನಿ ಗೌಡ? ಎಷ್ಟು ವರ್ಷದಿಂದ ರಾಜಕೀಯದಲ್ಲಿ ಇದ್ದಾರೆ? ನಮ್ಮ ನಾಯಕರು ಶ್ರೀ ಎಲ್.ಆರ್.ಶಿವರಾಮೇಗೌಡರು ಸುಮಾರು 25 ವರ್ಷಗಳಿಂದ ರಾಜಕೀಯ ಜೀವನ ನಡೆಸುತ್ತಿದ್ದಾರೆ. ನಿನ್ನೆ ಮೊನ್ನೆ ಬಂದವರಿಗೆಲ್ಲ ಲೋಕಸಭಾ ಚುನಾವಣೆಗೆ ಟಿಕೆಟ್ ಬೇಕು ಅಂದ್ರೆ… ಹೆಂಗೆ, ನೀವೇ ಹೇಳಿ… ಅಂತಾ ಬರೆಯಲಾಗಿದೆ.

ಮಂಡ್ಯ ಜಿಲ್ಲೆಯ ಮುಂದಿನ ಜೆಡಿಎಸ್ ಲೋಕಸಭಾ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಎಲ್.ಆರ್. ಶಿವರಾಮೇಗೌಡರಿಗೆ ಟಿಕೆಟ್ ಕೊಡಲಿ. ಎಲ್ಲ ನಮ್ಮ ಜೆಡಿಎಸ್ ನಾಯಕರು ಸಂಪೂರ್ಣ ಸಪೋರ್ಟ್ ಮಾಡಿ. ಜೈ ದೇವೇಗೌಡಜೀ, ಜೈ ಕುಮಾರಣ್ಣ ಎಂದು ಮತ್ತೊಂದು ಪೋಸ್ಟ್ ಕೂಡ ಮಾಡಲಾಗಿದೆ.

ಶಿವರಾಮೇಗೌಡರೇ ಈ ರೀತಿಯ ಸಾಲುಗಳನ್ನು ಬರೆದ್ರಾ ಎನ್ನುವ ಸಂಶಯ ಕೂಡ ಹುಟ್ಟಿಕೊಂಡಿದೆ. ಈ ಫೇಸ್‍ಬುಕ್ ಪೇಜ್ ಶಿವರಾಮೇಗೌಡರ ಅಧಿಕೃತ ಖಾತೆಯೇ ಅಥವಾ ಅಭಿಮಾನಿ ಗಳದ್ದಾ? ಎಂಬ ಗೊಂದಲವು ಹುಟ್ಟಿಕೊಂಡಿದೆ. ಈ ಬಗ್ಗೆ ಶಿವರಾಮೇಗೌಡರು ಇದುವರೆಗೂ ಯಾವುದೇ ಪ್ರತಿಕ್ರಿಯೆ ಯನ್ನು ನೀಡಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತಾ ಎಂಬುದರ ಬಗ್ಗೆ ಪ್ರಶ್ನೆಯೂ ಹುಟ್ಟಿಕೊಂಡಿದೆ.

2017ರಲ್ಲಿ ಐಆರ್‍ಎಸ್ ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಲಕ್ಷ್ಮಿ ಅಶ್ವಿನ್‍ಗೌಡ ಜೆಡಿಎಸ್ ಸೇರ್ಪಡೆಗೊಂಡು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿ ಕೊಂಡಿದ್ದಾರೆ. ಮಾಜಿ ಸಂಸದೆ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಲಕ್ಷ್ಮಿ ಅಶ್ವಿನ್‍ಗೌಡರನ್ನು ಎದುರಾಳಿಯಾಗಿ ನಿಲ್ಲಿಸುವುದು ಜೆಡಿಎಸ್‍ನ ಲೆಕ್ಕಾಚಾರ ಎಂಬ ಸುದ್ದಿ ಬಲವಾಗಿ ಹರಿದಾಡಿತ್ತು. ಆದರೆ ಶಿವರಾಮೇಗೌಡರು ಜೆಡಿಎಸ್‍ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ 25 ವರ್ಷಗಳಿಂದ ರಾಜಕೀಯದಲ್ಲಿ ಗುರುತಿಸಿ ಕೊಂಡಿರುವ ನನಗೆ ಟಿಕೆಟ್ ನೀಡಬೇಕೆಂಬುದು ಶಿವರಾಮೇಗೌಡ ಅಭಿಮಾನಿಗಳ ವಾದ.

2012ರ ಬ್ಯಾಚ್‍ನ ಐಆರ್‍ಎಸ್ ಆಫೀಸರ್ ಆಗಿದ್ದ ಲಕ್ಷ್ಮಿ ಅಶ್ವಿನ್‍ಗೌಡ, ರೈಲ್ವೆ ಇಲಾಖೆ ಯಲ್ಲಿ ಸಹಾಯಕ ಹಣಕಾಸು ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ನಾನು ಅಭ್ಯರ್ಥಿನಾ, ಅಲ್ವಾ? ಅನ್ನೋದನ್ನ ನಿರ್ಧರಿಸೋದು ವರಿಷ್ಠರು: ಇಂದು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಲಕ್ಷ್ಮೀ ಅಶ್ವಿನ್ ಗೌಡ, ಮಠದಲ್ಲಿ ನಡೆದ ಕಾಲಭೈರವನ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಮಾತನಾಡಿದ ಲಕ್ಷ್ಮೀ ಅಶ್ವಿನ್ ಗೌಡ, ನಾನು ಟಿಕೆಟ್ ಆಕಾಂಕ್ಷಿಯಲ್ಲ. ನಾನು ಎಂದಿಗೂ ಟಿಕೆಟ್‍ಗಾಗಿ ವರಿಷ್ಠರ ಬಳಿ ಬೇಡಿಕೆ ಇಟ್ಟಿಲ್ಲ. ಜೆಡಿಎಸ್ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ. ನಾನು ಜೆಡಿಎಸ್ ಪಕ್ಷದ ಭಕ್ತೆ, ಅಭಿಮಾನಿ. ನಾನು ಅಭ್ಯರ್ಥಿನೋ, ಅಲ್ವೋ ಅನ್ನೋದನ್ನ ನಿರ್ಧರಿಸೋದು ಕುಮಾರಸ್ವಾಮಿ ಹಾಗೂ ದೇವೇಗೌಡರು ಎಂದು ತಿಳಿಸಿದರು.

ಬೆಂಬಲಿಗರ ಫೇಸ್ ಬುಕ್ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಫೇಸ್ ಬುಕ್‍ನಲ್ಲಿ ನಡೀತಿರೋ ಚರ್ಚೆ ನನ್ನ ಗಮನಕ್ಕೆ ಬಂದಿಲ್ಲ. ವಿಧಾನಸಭೆ ಸಮಯದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದೇನೆ. ನಾನು ಜನರ ಮನಸ್ಸಲ್ಲಿ ಉಳಿದಿರೋದು ನನ್ನ ಪುಣ್ಯ. ನಾನು ಹಾಗೂ ಶಿವರಾಮೇ ಗೌಡರು ಒಂದೇ ಕುಟುಂಬದ (ಜೆಡಿಎಸ್) ಸದಸ್ಯರು. ನಮ್ಮ ಮಧ್ಯೆ ಯಾವುದೇ ಅಸಮಾಧಾನವಿಲ್ಲ. ದೇವೇಗೌಡರು ನನ್ನನ್ನ ಚುನಾವಣೆಗೆ ಸ್ಪರ್ಧಿಸು ಅಂದರೆ ಮಾತ್ರ ಸ್ಪರ್ಧೆ ಮಾಡುತ್ತೇನೆ. ಇಲ್ಲವಾದ್ರೆ ಪಕ್ಷಕ್ಕಾಗಿ ದುಡಿಯುವೆ. ಈವರೆಗೂ ವರಿಷ್ಠರು ಯಾವುದೇ ರೀತಿಯ ಸೂಚನೆ ನೀಡಿಲ್ಲ. ಅವರ ಸೂಚನೆ ನಂತರ ಮುಂದುವರಿಯುತ್ತೇನೆ ಎಂದು ಹೇಳಿದರು.

Translate »