ಮೈಸೂರು: ಮೈಸೂರು ಜಿಲ್ಲಾ ಪಂಚಾಯತ್ ಸಬಾಂಗಣದಲ್ಲಿ ಶುಕ್ರವಾರ ಕೇಂದ್ರ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ವತಿಯಿಂದ ಶುಕ್ರವಾರ ನಡೆದ `ಮ್ಯಾನ್ಯುಯಲ್ ಸ್ಕ್ಯಾವೆಂಜರ್’ ವೃತ್ತಿ ಮಾಡುವವರ ನೋಂದಣಿ ಅಭಿಯಾನದಲ್ಲಿ ಮೈಸೂರು ತಾಲೂಕಿನ 36 ಗ್ರಾ.ಪಂಗಳ 400ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡರು.
ಮೈಸೂರು ಜಿ.ಪಂ ಸಭಾಂಗಣದಲ್ಲಿ ನಡೆದ ನೋಂದಣಿ ಕಾರ್ಯಕ್ರಮದಲ್ಲಿ ಮೈಸೂರು ತಾಲೂಕಿನ ಎಲ್ಲಾ ಗ್ರಾ.ಪಂಗಳ ಪಿಡಿಒಗಳು ಪಾಲ್ಗೊಂಡು ತಮ್ಮ ಗ್ರಾಮ ಪಂಚಾಯ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಫಾಯಿ ಕರ್ಮಚಾರಿಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ನೆಲೆಸಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳ ಬಗ್ಗೆಯೂ ಮಾಹಿತಿ ನೀಡಿದರು. ಕೈಯಿಂದ ಸ್ವಚ್ಛಗೊಳಿಸುವ (ಮ್ಯಾನ್ಯುಯಲ್ ಸ್ಕ್ಯಾವೆಂಜರ್) ವೃತ್ತಿ ಮಾಡುವವರಿಗೆ ವಿವಿಧ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಡೆಸಿದ ಸರ್ವೆಯಲ್ಲಿ 400 ಮಂದಿ ಅರ್ಜಿ ಸಲ್ಲಿಸಿದ್ದು, ವಿವಿಧೆಡೆ ಮಾಡಿರುವ ವೃತ್ತಿಯ ಬಗ್ಗೆ ಮಾಹಿತಿ ನೀಡಿದರು. 2003ರಲ್ಲಿ `ಮ್ಯಾನ್ಯುಯಲ್ ಸ್ಕ್ಯಾವೆಂಜರ್’ ವೃತ್ತಿ ಮಾಡುವವರ ಸರ್ವೆ ನಡೆಸಲಾಗಿತ್ತು. 15 ವರ್ಷದ ಬಳಿಕ ನಡೆದ ಸರ್ವೆಯಲ್ಲಿ `ಮ್ಯಾನ್ಯುಯಲ್ ಸ್ಕ್ಯಾವೆಂಜರ್’ ವೃತ್ತಿ ಮಾಡುವವರು ಸ್ವಯಂ ಪ್ರೇರಣೆಯಿಂದ ನೋಂದಣಿ ಮಾಡಿಸಿಕೊಂಡರು.
ಈ ನೋಂದಣಿ ಅಭಿಯಾನದ ನೋಡಲ್ ಅಧಿಕಾರಿಯಾಗಿರುವ ಮೈಸೂರು ಜಿಪಂನ ಆಡಳಿತ ವಿಭಾಗದ ಉಪಕಾರ್ಯದರ್ಶಿ ಕೆ.ಶಿವರಾಮೇಗೌಡ, `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕೈಯಿಂದ ಸ್ವಚ್ಛಗೊಳಿಸುವ ವೃತ್ತಿಯನ್ನೇ ಅವಲಂಭಿಸುವವರಿಗೆ ವಿವಿಧ ಸೌಲಭ್ಯ ನೀಡಿ, ಮುಖ್ಯವಾಹಿನಿಗೆ ತರುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಆಯೋಗವು ಸರ್ವೆ ನಡೆಸಲು ಸೂಚನೆ ನೀಡಿವೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳು ಮಾತ್ರ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಮೈಸೂರು ನಗರ ವ್ಯಾಪ್ತಿಯಲ್ಲಿರುವ ಸ್ಕ್ಯಾವೆಂಜರ್‍ಗಳಿಗೆ ಈ ಸರ್ವೆ ಅನ್ವಯವಾಗುವುದಿಲ್ಲ.
ಜೂನ್ 25ರಿಂದ ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸರ್ವೆ ನಡೆಸಲಾಗಿದೆ. ಮೈಸೂರು ತಾಲೂಕು ಹಾಗೂ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುವವರನ್ನು ಹೊರತುಪಡಿಸಿ ಜಿಲ್ಲೆಯಲ್ಲಿ 700 ಅರ್ಜಿ ಸಲ್ಲಿಕೆಯಾಗಿವೆ. ಸರ್ವೆಯ ಕೊನೆ ದಿನವಾದ ಇಂದು ಮೈಸೂರು ತಾಲೂಕಿನ 36 ಗ್ರಾ.ಪಂಗಳಲ್ಲಿರುವ 400 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ಈ ಹಿಂದೆ ಸರ್ವೆ ನಡೆಸುವಾಗ `ಮ್ಯಾನ್ಯುಯಲ್ ಸ್ಕ್ಯಾವೆಂಜರ್’ ವೃತ್ತಿ ಮಾಡುವವರು, ಇಂತಹ ಕಡೆ ವೃತ್ತಿ ಮಾಡಿರುವ ಬಗ್ಗೆ ದೃಢೀಕರಣ ಪತ್ರ ತರಬೇಕಾಗಿತ್ತು. ಆದರೆ ಏನಾದರೂ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಇಂತಹ ದೃಢೀಕರಣ ಪತ್ರ ನೀಡುತ್ತಿರಲಿಲ್ಲ. ಇದರಿಂದ ಫಲಾನುಭವಿಗಳ ಸಂಖ್ಯೆ ವಿರಳವಾಗಿರುತ್ತಿತ್ತು. ಆದರೆ ಈ ಬಾರಿ ದೃಢೀಕರಣ ಪತ್ರದ ನಿಯಮವನ್ನು ತೆಗೆದು ಹಾಕಲಾಗಿದ್ದು, ಸ್ವಯಂ ಪ್ರೇರಣೆಯಿಂದ ಕಾರ್ಮಿಕರು ಎಲ್ಲೆಲ್ಲಿ ಕೆಲಸ ಮಾಡಿದ್ದೇವೆ ಎಂಬ ಮಾಹಿತಿ ನೀಡಬಹುದಾಗಿದೆ.
ಅರ್ಜಿದಾರರು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸವಿರಬೇಕು. ಆದರೆ ಅವರು ನಗರ ಪ್ರದೇಶದಲ್ಲಿಯೂ `ಮ್ಯಾನ್ಯುಯಲ್ ಸ್ಕ್ಯಾವೆಂಜರ್’ ವೃತ್ತಿ ಮಾಡಬಹುದಾಗಿದೆ. ಪಿಡಿಒಯಿಂದ ವಾಸ ದೃಢೀಕರಣ ಪಡೆದುಕೊಳ್ಳುತ್ತೇವೆ. ಅರ್ಜಿದಾರರ ಬ್ಯಾಂಕ್ ಖಾತೆ ನಂಬರ್, ಆಧಾರ ಸಂಖ್ಯೆ ಪಡೆದು ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದ ಅವರು, ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವವರಿಗೆ ಮುಂದಿನ ತಿಂಗಳು ನೊಂದಣಿ ಅಭಿಯಾನ ನಡೆಯಲಿದೆ ಎಂದರು.
ನೋಂದಣಿ ಅಭಿಯಾನದಲ್ಲಿ ಸಂಯೋಜಕಿ ಪುಷ್ಪಲತಾ, ಪೌರಕಾರ್ಮಿಕ ಮುಖಂಡರಾದ ಎಸ್.ಎಂ.ಪಳನಿಸ್ವಾಮಿ, ಮಂಜುನಾಥ್ ಗೋಕುಲಂ, ತಗಡೂರು ಮಹದೇವಸ್ವಾಮಿ, ಅರುಣ್ ವಾಗ್ಮೋರೆ, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ ಎಂ.ವಿ.ವೆಂಕಟೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸವಲತ್ತು ದೊರೆಯುತ್ತದೆ..
ನೋಂದಣಿ ಅಭಿಯಾನದಲ್ಲಿ `ಮ್ಯಾನ್ಯುಯಲ್ ಸ್ಕ್ಯಾವೆಂಜರ್’ ವೃತ್ತಿ ಮಾಡುವವರು ಹೆಸರು ನೋಂದಾಯಿಸಿಕೊಂಡರೆ ಹಲವು ಸೌಲಭ್ಯಗಳು ದೊರೆಯುತ್ತದೆ. ಕೈಯಿಂದ ಕೆಲಸ ಮಾಡುವ ಪೌರಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಉದ್ಯೋಗ, ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸಿದರೆ ಸರ್ಕಾರವೇ ನೆರವು ನೀಡುತ್ತದೆ. ಇದರಿಂದ ನೋಂದಣಿ ಅಭಿಯಾನದಲ್ಲಿ ಮೈಸೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ 400ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1100 ಅರ್ಜಿ ಸಲ್ಲಿಕೆಯಾದಂತಾಗಿದ್ದು, ಸುಮಾರು 5 ಸಾವಿರ ಜನರಿಗೆ ಸೌಲಭ್ಯ ದೊರೆತಂತಾಗುತ್ತದೆ.
– ಎಸ್.ಎಂ.ಪಳನಿಸ್ವಾಮಿ, ಪೌರಕಾರ್ಮಿಕರ ಮುಖಂಡ