ಮೈಸೂರಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ
ಮೈಸೂರು

ಮೈಸೂರಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ

September 17, 2018

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಕೂರಿಸಲಾಗಿದ್ದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಯು ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಮೈಸೂರು ನಗರ ಸಾಮೂಹಿಕ ವಿನಾ ಯಕ ವಿಸರ್ಜನಾ ಮಂಡಳಿ ವತಿಯಿಂದ ಭಾನುವಾರ ಆಯೋಜಿಸಿದ್ದ 15ನೇ ವರ್ಷದ ಭವ್ಯ ಮೆರವಣಿಗೆಯಲ್ಲಿ ನಗರದ ವೀರನಗೆರೆ, ಎನ್.ಆರ್.ಮೊಹಲ್ಲಾ, ತಿಲಕ್‍ನಗರ, ಕೆಸರೆ, ಕ್ಯಾತಮಾರನಹಳ್ಳಿ, ಉದಯಗಿರಿ, ಕಲ್ಯಾಣಗಿರಿ, ಕುವೆಂಪು ನಗರ, ರಾಮಕೃಷ್ಣನಗರ, ನಾಯ್ಡುನಗರ ಮತ್ತಿತರೆ ಬಡಾವಣೆಗಳಲ್ಲಿ ಕೂರಿಸಲಾಗಿದ್ದ 30ಕ್ಕೂ ಹೆಚ್ಚು ಗಣಪತಿ ವಿಗ್ರಹಗ ಳೊಂದಿಗೆ ವಾಹನಗಳಲ್ಲಿ ಆಗಮಿಸಿದ್ದ ಭಕ್ತರು ಹಾಗೂ ಯುವಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ವೀರನಗೆರೆಯ ಗಣಪತಿ ದೇವಸ್ಥಾನ ಮುಂಭಾಗದಿಂದ ಆರಂಭಗೊಂಡ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ, ಅಶೋಕ ರಸ್ತೆ ಮೂಲಕ ಸಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ದೊಡ್ಡಗಡಿಯಾರ, ಗಾಂಧಿಚೌಕ, ಪ್ರಭಾ ಚಿತ್ರಮಂದಿರ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ, ರೈಲು ನಿಲ್ದಾಣ, ಬಂಬೂಬಜಾರ್ ಮೂಲಕ ಸಾಗಿ ಶ್ರೀರಂಗಪಟ್ಟಣದ ಸಾಯಿ ಬಾಬಾ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು.

ಯುವಕರ ಸಂಭ್ರಮ: ಮೆರವಣಿಗೆಯಲ್ಲಿ ತಮಟೆಯ ಸದ್ದು ಹಾಗೂ ಭಜರಂಗಿ ಹಾಡಿಗೆ ಯುವಕರು ಕೆಸರಿ ಬಾವುಟವನ್ನು ಬೀಸುವ ಮೂಲಕ ಹೆಜ್ಜೆ ಹಾಕಿ ಸಂಭ್ರಮಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜ ನಿಕರು ನಿಂತು ಮೆರವಣಿಗೆ ಯಲ್ಲಿ ಸಾಗು ತ್ತಿದ್ದ ಗಣೇಶ ವಿಗ್ರಹಗಳನ್ನು ವೀಕ್ಷಿಸಿದರು.

ಪಟಾಕಿಗಳ ಭೋರ್ಗರೆತ: ಮೆರವಣಿಗೆ ಆರಂಭವಾಗುತ್ತಿದ್ದಂತೆ ಪಟಾಕಿಗಳ ಭೋರ್ಗರೆತ ಜೋರಾಗಿತ್ತು. ಯುವಕರು ಮೆರವಣಿಗೆಯ ಉದ್ದಕ್ಕೂ ಭಾರಿ ಶಬ್ದದೊಂದಿಗೆ ಮೈ ನಡುಗಿಸುವಂತಹ ಪಟಾಕಿಗಳನ್ನು ಸಾಲು, ಸಾಲಾಗಿ ಸಿಡಿಸುವ ಮೂಲಕ ಸಂಭ್ರಮಿಸಿದರು.

ಪೊಲೀಸ್ ಬಿಗಿ ಬಂದೋಬಸ್ತ್ : ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಆರಂಭಕ್ಕೂ ಮುನ್ನ ರಸ್ತೆ ಸಂಚಾರ ಬಂದ್ ಮಾಡಿ ಮೆರವಣಿಗೆಗೆ ಅನುವು ಮಾಡಿಕೊಟ್ಟರು.

ಮಳೆಯ ನಡುವೆಯೇ ಬಣ್ಣದೆರಚಾಟ: ಮೆರವಣಿಗೆಯು ಪೋಸ್ಟ್ ಆಫೀಸ್ ವೃತ್ತ ತಲುಪುತ್ತಿದ್ದಂತೆ ಮಳೆಯ ಸಿಂಚನವಾಯಿತು. ಆದರೂ ಮಳೆಯನ್ನು ಲೆಕ್ಕಿಸದ ಯುವಕರ ಗುಂಪು, ಮಳೆಯಲ್ಲೇ ಬಣ್ಣಗಳನ್ನು ಎರಚಾಡಿ ಸಂತಸಪಟ್ಟರು.

ಮೆರವಣಿಗೆ ಆರಂಭಕ್ಕೂ ಮುನ್ನ ಎಸ್.ಎ.ರಾಮದಾಸ್ ಮಾತನಾಡಿ, ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಗೌರಿ ಗಣೇಶ ಹಬ್ಬವು ಒಂದಾಗಿದ್ದು, ಮೆರವಣಿಗೆಯು ಶಾಂತಿಯುತವಾಗಿ ನಡೆಸುವಂತೆ ಸಲಹೆ ನೀಡಿದರು.

ಶಾಸಕ ಎಲ್.ನಾಗೇಂದ್ರ, ಮೈಸೂರು ನಗರ ಸಾಮೂಹಿಕ ವಿನಾಯಕ ವಿಸರ್ಜನಾ ಮಂಡಳಿ ಅಧ್ಯಕ್ಷ ನಾರಾಯಣಪ್ಪ, ಬಿಜೆಪಿ ಮುಖಂಡ ಸಂದೇಶ ಸ್ವಾಮಿ, ನಗರಪಾಲಿಕೆ ಸದಸ್ಯರಾದ ಸಾತ್ವಿಕ್ ಸಂದೇಶ್‍ಸ್ವಾಮಿ, ರಂಗಸ್ವಾಮಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Translate »