ಕಟ್ಟುನಿಟ್ಟಿನ ಕ್ರಮ: ಪರಿಸರ ಸ್ನೇಹಿ ಗಣಪನ ಪೂಜೆಗೆ ವಿನಾಯಕ ಭಕ್ತರ ಆಸಕ್ತಿ
ಮೈಸೂರು

ಕಟ್ಟುನಿಟ್ಟಿನ ಕ್ರಮ: ಪರಿಸರ ಸ್ನೇಹಿ ಗಣಪನ ಪೂಜೆಗೆ ವಿನಾಯಕ ಭಕ್ತರ ಆಸಕ್ತಿ

September 6, 2018

ಮೈಸೂರು: ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ), ರಸಾಯನಿಕ ಬಣ್ಣಲೇಪಿತ ಹಾಗೂ ಪೇಪರ್ ಮೌಲ್ಡೆಡ್ ಗಣೇಶ ವಿಗ್ರಹಗಳ ಬಳಕೆ ತಡೆಯುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಪರಿಸರಕ್ಕೆ ಕುಂದುತರುವ ಪಿಓಪಿ-ರಸಾಯನಿಕ ಬಣ್ಣಲೇಪಿತ ಗಣೇಶ ವಿಗ್ರಹ ತಯಾರಿಕೆ ಹಾಗೂ ಅವುಗಳ ಹಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಡಳಿತ ವರ್ಗ ಹಲವು ಕ್ರಮಗಳನ್ನು ಕೈಗೊಳ್ಳುವುದನ್ನು ಅನೇಕ ವರ್ಷಗಳ ಹಿಂದೆಯೇ ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿಘ್ನೇಶನ ಭಕ್ತರು, ಮೂರ್ತಿಗಳ ತಯಾರಕರು ಮತ್ತು ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿದೆ. ಇವರೆಲ್ಲರೂ ಪರಿಸರ ಸ್ನೇಹಿ ಮಣ್ಣಿನ ಗಣಪನತ್ತ ಮುಖ ಮಾಡಿದ್ದಾರೆ.

ಗೌರಿ-ಗಣೇಶನ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ವಿನಾಯಕನ ಭಕ್ತಾದಿಗಳು, ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ, ಭಕ್ತಿಪರಕಾಷ್ಠೆ ಮೆರೆದು ಸಂಭ್ರಮಿಸಲು ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ಮಾರಾಟಕ್ಕೆ ವೇದಿಕೆಯೂ ಸಿದ್ಧಗೊಂಡಿದ್ದು, ಮೈಸೂರು ನಗರದ ವಿವಿಧೆಡೆ ಗಣೇಶ ಮೂರ್ತಿ ಮಾರಾಟಕ್ಕೆ ಮಳಿಗೆಗಳು ಅದಾಗಲೇ ತಲೆ ಎತ್ತಿವೆ. ವಿಶೇಷವೆಂದರೆ ಪರಿಸರ ಸ್ನೇಹಿ ಗಣೇಶ ವಿಗ್ರಹ ಮಾರಾಟಕ್ಕೆ ವ್ಯಾಪಾರಸ್ಥರು ಸಹ ಮುಂದಾಗಿದ್ದಾರೆ.

ಗಣೇಶ ವಿಗ್ರಹ ಮಾರಾಟ ಮಳಿಗೆಗಳ ಪೈಕಿ ಮೈಸೂರಿನ ಇರ್ವಿನ್ ರಸ್ತೆಯ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ `ಶ್ರೀ ಪಂಚಮುಖಿ ಜೇಡಿ ಮಣ್ಣಿನ ಗೌರಿ ಗಣೇಶ ವಿಗ್ರಹಗಳ’ ಮಳಿಗೆ ಭಕ್ತರನ್ನು ಸೆಳೆಯುತ್ತಿವೆ. ಪುಟಾಣಿ ಗೌರಿ-ಗಣೇಶ ವಿಗ್ರಹದಿಂದ ಹಿಡಿದು 6 ಅಡಿ ಎತ್ತರದವರೆಗಿನ ಮೂರ್ತಿಗಳು ಇಲ್ಲಿ ಲಭ್ಯವಿದೆ. ಬಗೆಬಗೆಯ ಪರಿಸರ ಸ್ನೇಹಿ ಮಣ್ಣಿನ ಗೌರಿ-ಗಣೇಶ ವಿಗ್ರಹಗಳು ಅಲ್ಪ ಪ್ರಮಾಣದ ನೈಸರ್ಗಿಕ ಬಣ್ಣ ಗಳಿಂದ (ವಾಟರ್ ಪೇಂಟ್) ಕಂಗೊಳಿಸುತ್ತಿವೆ.

ಕಳೆದ 20 ವರ್ಷಗಳಿಂದ ಗಣೇಶನ ಹಬ್ಬ ಹತ್ತಿರ ಬರುವ ವೇಳೆಗೆ ಈ ದೇವಸ್ಥಾನದ ಆವರಣದಲ್ಲಿ ಮಳಿಗೆ ತೆರೆಯುತ್ತೇವೆ. ಅಂದಿನಿಂದಲೂ ಮಣ್ಣಿನ ಪರಿಸರ ಸ್ನೇಹಿ ವಿಗ್ರಹಗಳನ್ನೇ ಬೆಂಗಳೂರು ಹಾಗೂ ಕೋಲಾರದಿಂದ ತರಿಸಿಕೊಂಡು ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಮಳಿಗೆಯ ಮಾಲೀಕ ನಾಗೇಶ್ ಅವರ ಪುತ್ರ ಯಶವಂತ್.

ಬೆಂಗಳೂರಿನ ದೇವನಹಳ್ಳಿ, ದಾಸರಹಳ್ಳಿ ಸೇರಿದಂತೆ ಬೆಂಗಳೂರಿನ ಸುತ್ತಮುತ್ತ ಜೇಡಿ ಮಣ್ಣಿನಿಂದ ತಯಾರು ಮಾಡಲಾದ ವಿಗ್ರಹ ತರಿಸುತ್ತೇವೆ. ನಮ್ಮಲ್ಲಿನ ವಿಗ್ರಹಗಳು ನೀರಿನಲ್ಲಿ ಮುಳುಗುತ್ತಿದ್ದಂತೆ ಕರಗುತ್ತವೆ. ಪಿಓಪಿ ಹಾಗೂ ಪೇಪರ್ ಮೌಲ್ಡೆಡ್ ವಿಗ್ರಹಗಳ ಸಾಗಣೆ ತುಂಬ ಸುಲಭ. ಕಾರಣ ಅವುಗಳು ಅಷ್ಟು ಸುಲಭವಾಗಿ ಮುರಿಲಾರವು. ಆದರೆ ಮಣ್ಣಿನ ವಿಗ್ರಹಗಳು ಸ್ವಲ್ಪ ಆಯತಪ್ಪಿದರೂ ಹಾನಿಗೊಳಗಾಗಿ ವ್ಯಾಪಾರಸ್ಥರು ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಮಣ್ಣಿನ ದೊಡ್ಡ ಮೂರ್ತಿಗಳನ್ನು ಹುಲ್ಲಿನಲ್ಲಿ ಪ್ಯಾಕ್ ಮಾಡಲಾಗುತ್ತದೆ. ಅದೇ ರೀತಿ ಸಣ್ಣ ಮೂರ್ತಿಗಳನ್ನು ಭತ್ತದ ಹೊಟ್ಟಿನಲ್ಲಿ ಪ್ಯಾಕ್ ಮಾಡಿ ಸಾಗಣೆ ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ.

ಪಿಓಪಿ ಮುರಿಯಲ್ಲ, ಆದರೆ ಪರಿಸರ ಉಳಿಸಲ್ಲ: ಪಿಓಪಿ ಹಾಗೂ ಪೇಪರ್ ಮೌಲ್ಡೆಡ್ ವಿಗ್ರಹಗಳ ಅಷ್ಟು ಸುಲಭಕ್ಕೆ ಮುರಿಯುದಿಲ್ಲ. ಜೊತೆಗೆ ವಿಗ್ರಹಕ್ಕೆ ಅಚ್ಚುಕಟ್ಟಾದ ರೂಪ ನೀಡಲು ಈ ವಿಧಾನಗಳು ಸೂಕ್ತ. ಆದರೆ ಇವುಗಳು ಪರಿಸರಕ್ಕೆ ಅಪಾರ ಹಾನಿ ಮಾಡುತ್ತವೆ. ಹೀಗಾಗಿ ಇವುಗಳ ಮೇಲೆ ನಿಷೇಧ ಸೂಕ್ತ ಕ್ರಮ. ಮಣ್ಣಿನ ವಿಗ್ರಹ ಬಳಸಿ ಅರ್ಥಪೂರ್ಣವಾಗಿ ಹಬ್ಬ ಆಚರಿಸಲು ಆದ್ಯತೆ ನೀಡಬೇಕಿದೆ ಎಂದ ಯಶವಂತ್, ನಮಗೆ ನಮ್ಮದೇ ಗ್ರಾಹಕರಿದ್ದಾರೆ. ಅವರು ಪ್ರತಿ ವರ್ಷ ನಮ್ಮ ಬಳಿಯೇ ಮೂರ್ತಿಗಳನ್ನು ಖರೀದಿಸುತ್ತಾರೆ. ನಮ್ಮಲ್ಲಿ 100 ರೂ.ನಿಂದ ಹಿಡಿದು 12 ಸಾವಿರ ರೂ.ವರೆಗೆ ಬೆಲೆ ಬಾಳುವ ಮೂರ್ತಿಗಳಿವೆ ಎಂದು ವಿವರಿಸಿದರು.

Translate »