ಬಿಜೆಪಿಯಿಂದ ಭಾರೀ ಪ್ರತಿಭಟನೆ
ಹಾಸನ

ಬಿಜೆಪಿಯಿಂದ ಭಾರೀ ಪ್ರತಿಭಟನೆ

September 22, 2018

ಹಾಸನ: ಬಿಎಸ್‍ವೈ ಹಾಗೂ ಪಕ್ಷದ ವಿರುದ್ಧ ದಂಗೆ ಏಳಬೇಕೆಂಬ ಸಿಎಂ ಹೆಚ್‍ಡಿಕೆ ಹೇಳಿಕೆ ಖಂಡಿಸಿ ನಗರದಲ್ಲಿಂದು ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾರಮೇಶ್ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಲಾಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರ ವಣಿಗೆ ಮೂಲಕ ಸಂಚರಿಸಿ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿ ಭಟನಾಕಾರರು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಮ್ಮಿಶ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಬೀಳುವ ಭಯದಿಂದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹತಾಶರಾಗಿದ್ದು, ಚನ್ನರಾಯಪಟ್ಟಣದಲ್ಲಿ ನಡೆದ ಕಾರ್ಯ ಕ್ರಮ ಉದ್ದೇಶಿಸಿ ಮಾತನಾಡುವಾಗ ವಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧವಾಗಿ ಜನತೆ ದಂಗೆ ಏಳ ಬೇಕು ಎಂದು ಕರೆ ನೀಡಿದ್ದಾರೆ. ಇಂದು ಸಂವಿಧಾನ ವಿರೋಧಿ ಹೇಳಿಕೆ ಯಾಗಿದೆ ಎಂದು ಕಿಡಿಕಾರಿದರು.

ಬಿ.ಎಸ್.ಯಡಿಯೂರಪ್ಪ ವಿಪಕ್ಷ ನಾಯಕರಾದಗಿನಿಂದಲೂ ಅವರ ಮನೆಗೆ ಸಮ್ಮಿಶ್ರ ಸರ್ಕಾರ ಪೊಲೀಸ್ ರಕ್ಷಣೆ ನೀಡಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದ ಕೆಲ ಸಮಯದಲ್ಲಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬಿ.ಎಸ್. ಯಡಿಯೂರಪ್ಪರವರ ಮನೆ ಮುಂದೆ ಜಮಾಯಿಸಿ ಒಳನುಗ್ಗಲು ಯತ್ನಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್ ವಿರುದ್ಧದ ಆಂತರಿಕ ಬೇಗುದಿ ಯನ್ನು ಶಮನ ಮಾಡಲಾಗದ ಕುಮಾರ ಸ್ವಾಮಿ ಬಿಜೆಪಿ ವಿರುದ್ಧ ಲಘುವಾಗಿ ಮಾತನಾಡುತ್ತಿರುವುದು ಖಂಡನೀಯ. ಸಿಎಂ ಕುಮಾರಸ್ವಾಮಿ ಅವರು ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರಲ್ಲದೆ, ಮುಂದಿನ ದಿನಗಳಲ್ಲಿ ನಾಡಿನ ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ರಾದ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನವಿಲೇ ಅಣ್ಣಪ್ಪ, ರೈತ ಮೋರ್ಚಾ ಮುಖಂಡ ರೇಣುಕುಮಾರ್, ನಗರಾಧ್ಯಕ್ಷ ಶೋಭನ್ ಬಾಬು, ಐನೆಟ್ ವಿಜಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ವೇಣುಗೋಪಾಲ್, ಪ್ರಸನ್ನಕುಮಾರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹೆಚ್.ಎನ್. ನಾಗೇಶ್, ಚನ್ನಕೇಶವ, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹರ್ಷಿತ್ ಇತರರಿದ್ದರು.

Translate »