ಮೈಸೂರು,ಆ.3(ಆರ್‍ಕೆ)- ಕುಡಿ ಯುವ ನೀರಿನ ಬಿಲ್ ಪಾವತಿಗೆ ಪರಿಚ ಯಿಸಿರುವ ಆನ್‍ಲೈನ್ ಪದ್ಧತಿಗೆ ಬಳಕೆ ದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗು ತ್ತಿರುವ ಹಿನ್ನೆಲೆಯಲ್ಲಿ, ಆಸ್ತಿ ತೆರಿಗೆ ಪಾವತಿಗೂ ಆನ್‍ಲೈನ್ ಪಾವತಿ ಸೇವೆ ವಿಸ್ತರಿಸಲು ಮೈಸೂರು ಮಹಾನಗರಪಾಲಿಕೆ ಚಿಂತನೆ ನಡೆಸಿದೆ.
ನೀರಿನ ಬಿಲ್ ಪಾವತಿಗೆ ವಾಣಿವಿಲಾಸ ವಾಟರ್ ವಕ್ರ್ಸ್, ನಗರ ಪಾಲಿಕೆ, ವಲಯ ಕಚೇರಿಗೆ ಸಾರ್ವಜನಿಕರು ಅಲೆ ದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಕಲ್ಪಿಸಲಾಗಿರುವ ಆನ್‍ಲೈನ್ ವ್ಯವಸ್ಥೆಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದೆ. ಬಳಕೆದಾರರು ತಾವಿರುವಲ್ಲೇ ಮೊಬೈಲ್, ಕಂಪ್ಯೂಟರ್ ಅಥವಾ ಲ್ಯಾಪ್‍ಟಾಪ್ ಮೂಲಕ ನೀರಿನ ಬಿಲ್ ಪಾವತಿಸಬಹುದಾದ ಕಾರಣ ಜೂನ್ 28ರಿಂದ ಈವರೆಗೆ 1,700 ಮಂದಿ ಆನ್‍ಲೈನ್ ವ್ಯವಸ್ಥೆಯಡಿ ಬಿಲ್ ಪಾವತಿ ಮಾಡಿದ್ದಾರೆ. ಈ ಬಗ್ಗೆ ಹೆಚ್ಚು ಪ್ರಚುರಪಡಿ ಸದಿದ್ದರೂ ಕೇವಲ ಒಂದು ತಿಂಗಳ ಅವಧಿಯಲ್ಲಿ ಸಾವಿರಾರು ಮಂದಿ ಆನ್ ಲೈನ್ ಪದ್ಧತಿ ಬಳಸಿರುವುದು ಆಸ್ತಿ ತೆರಿಗೆ ಸೇರಿದಂತೆ ಇನ್ನಿತರೆ ಸೇವಾ ಶುಲ್ಕಗಳನ್ನು ಆನ್‍ಲೈನ್‍ಗೆ ವಿಸ್ತರಿಸಲು ಪ್ರೇರಣೆಯಾಗಿದೆ.
ಮೈಸೂರು ನಗರದಲ್ಲಿ ಒಟ್ಟು 1.50 ಲಕ್ಷ ನೀರಿನ ಅಧಿಕೃತ ಸಂಪರ್ಕವಿದ್ದು, ಸಾರ್ವ ಜನಿಕರು ತಮ್ಮ ವ್ಯಾಪ್ತಿಯ ವಲಯ ಕಚೇರಿ ಅಥವಾ ವಾಣಿವಿಲಾಸ ವಾಟರ್ ವಕ್ರ್ಸ್‍ನ ಕೌಂಟರ್‍ಗಳಲ್ಲಿ ಸಾಲುಗಟ್ಟಿ ನಿಂತು ನೀರಿನ ಬಿಲ್ ಪಾವತಿಸುತ್ತಿದ್ದಾರೆ. ಸಮಯಾವಕಾಶ ಇಲ್ಲದವರು, ವಯೋ ವೃದ್ಧರು, ಓಡಾಡಲು ಆಗದವರು, ಕಚೇ ರಿಗೆ ಅಲೆದಾಡುವವರು ಯಾರೆಂಬ ಮನೋಭಾವದವರು ನೀರಿನ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಳ್ಳುತ್ತಾರೆ. ಇದು ಪಾಲಿಕೆಯ ಆರ್ಥಿಕ ಸ್ಥಿತಿಗೂ ಪ್ರತಿಕೂಲವಾಗುತ್ತಿದೆ. ಇಂತಹ ಪರಿಸ್ಥಿತಿ ಯಲ್ಲಿ ಆನ್‍ಲೈನ್ ವ್ಯವಸ್ಥೆ ಕಲ್ಪಿಸಿರುವುದು ಸಾರ್ವಜನಿಕರಿಗೆ ಅನುಕೂಲವಾಗು ವುದರ ಜೊತೆಗೆ ಪಾಲಿಕೆಯ ಆದಾಯ ಮೂಲವನ್ನು ಗಟ್ಟಿ ಮಾಡಿದೆ. ಇದರಿಂದಾಗಿ ಪಾಲಿಕೆ ವ್ಯಾಪ್ತಿಯ 16 ಕೌಂಟರ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಇತರ ಕೆಲಸಗಳಿಗೆ ನಿಯೋಜಿಸಿದರೆ ಮಾನವ ಸಂಪನ್ಮೂಲದ ಸದ್ಬಳಕೆಗೂ ಅವಕಾಶವಾಗುತ್ತದೆ.
ತಿಂಗಳಲ್ಲಿ 1,700 ಬಳಕೆದಾರರು ಆನ್ ಲೈನ್ ಮೂಲಕ 14.50 ಲಕ್ಷ ರೂ. ನೀರಿನ ಬಿಲ್ ಪಾವತಿಸಿರುವುದು ಈ ನೂತನ ವ್ಯವಸ್ಥೆಯಿಂದಾದ ಪರಿಣಾಮವನ್ನು ಸಾಕ್ಷೀಕರಿಸುತ್ತದೆ. ಗ್ರಾಹಕರು ಪಾವತಿಸುವ ಶುಲ್ಕದ ಮೊತ್ತ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)ದ ಭಾರತ ಬಿಲ್ ಪೇಮೆಂಟ್ ಸಿಸ್ಟಮ್ಸ್ (BBPS) ಮೂಲಕ ಮೈಸೂರು ಮಹಾನಗರ ಪಾಲಿಕೆಯ ಎಸ್‍ಬಿಐ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಬಳಕೆ ದಾರರು ಆನ್‍ಲೈನ್ ಬ್ಯಾಂಕಿಂಗ್, ಡೆಬಿಟ್, ಕ್ರೆಡಿಟ್ ಕಾರ್ಡ್, ಡಿಜಿಟಲ್ ವಾಲೆಟ್ಸ್, ಪೇಮೆಂಟ್ಸ್ ಆ್ಯಪ್‍ಗಳಾದ ಎಸ್‍ಬಿಐ ಯೊನೋ, ಮೊಬಿಕ್‍ವಿಕ್, ಭಿಮ್, ಫೋನ್‍ಪೇ ಮತ್ತು ಪೇಟಿಎಂನಲ್ಲಿ ಬಿಲ್ ಪಾವತಿಸ ಬಹುದು. ಪಾಲಿಕೆ ವೆಬ್‍ಸೈಟ್ www. mysorecity.mrc.in ಗೆ ಹೋಗಿ ಆನ್‍ಲೈನ್ ಪೇಮೆಂಟ್ ಆಫ್ ವಾಟರ್ ಬಿಲ್ ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ ದರೆ ಅಲ್ಲಿ ನೀರಿನ ಬಿಲ್ ಪಾವತಿಸಲು ಮಾರ್ಗಸೂಚಿ, ಮಾಹಿತಿ ಲಭ್ಯವಾಗಲಿದೆ.
ವಿದೇಶದಲ್ಲಿದ್ದವರೂ ತಮ್ಮ ಪೋಷಕ ರಿರುವ ಮೈಸೂರಿನ ನಿವಾಸದ ನೀರಿನ ಶುಲ್ಕವನ್ನು ಅಲ್ಲಿಂದಲೇ ಪಾವತಿ ಮಾಡ ಬಹುದು. ಆನ್‍ಲೈನ್‍ನಲ್ಲಿ ಪಾವತಿಸಿದ ಹಣ ಪಾಲಿಕೆ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ? ಎಂಬುದನ್ನು ಖಚಿತಪಡಿಸಿ ಕೊಳ್ಳುವುದು, ತಾಂತ್ರಿಕ ಕಾರಣದಿಂದ ಜಮಾ ಆಗದಿದ್ದರೆ ಸಮಸ್ಯೆಯನ್ನು ಸರಿ ಪಡಿಸಿಕೊಳ್ಳುವ ಅವಕಾಶವೂ ಇದೆ. ಹಾಗಾಗಿ ಈ ಪದ್ಧತಿಯಿಂದ ಜನಸಾಮಾ ನ್ಯರಿಗೆ ಹೆಚ್ಚು ಅನುಕೂಲವಾಗಿದೆ.
ಸೇವೆ ವಿಸ್ತರಣೆಗೆ ಚಿಂತನೆ: ಆಸ್ತಿ ತೆರಿಗೆ ಸೇರಿದಂತೆ ಇನ್ನಿತರೆ ಸೇವಾ ಶುಲ್ಕ ಪಾವ ತಿಗೂ ಆನ್‍ಲೈನ್ ವ್ಯವಸ್ಥೆ ವಿಸ್ತರಿಸುವ ಪಾಲಿಕೆಯ ಚಿಂತನೆ ಶೀಘ್ರ ಜಾರಿ ಯಾದರೆ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ವಲಯ ಕಚೇರಿ ಗಳಲ್ಲಿ ದಿನಗಟ್ಟಲೆ ಸರತಿಯಲ್ಲಿ ನಿಂತು, ಅರ್ಜಿ, 3 ಚಲನ್‍ಗಳನ್ನು ಭರ್ತಿ ಮಾಡಿ, ಕೌಂಟರ್‍ನಲ್ಲಿ ತೆರಿಗೆ ಪಾವತಿಸುವ ಹೆಣ ಗಾಟ ತಪ್ಪುತ್ತದೆ. ಹಣಕಾಸು ವರ್ಷಾಂತ್ಯ ದಲ್ಲಿ ಶೇ.5ರಷ್ಟು ರಿಯಾಯಿತಿ ನೀಡುವ, ಶಿಬಿರ ಮಾದರಿಯಲ್ಲಿ ತೆರಿಗೆ ಸಂಗ್ರಹಿಸುವ ಕಸರತ್ತು ಅಗತ್ಯವಿರುವುದಿಲ್ಲ. ಎಲ್ಲಾ ಬಗೆಯ ಸೇವಾ ಶುಲ್ಕವನ್ನೂ ಡಿಜಿಟ ಲೈಸ್ ಮಾಡುವ ಮೈಸೂರು ನಗರ ಪಾಲಿಕೆ ಚಿಂತನೆ ಸಾಕಾರವಾದರೆ ನಗರದ ಲಕ್ಷಾಂತರ ಸಾರ್ವಜನಿಕರ ಸಮಯ, ಶ್ರಮ, ಹಣ ವ್ಯರ್ಥವಾಗುವುದು ತಪ್ಪು ತ್ತದೆ. ಪಾಲಿಕೆಯ ಆದಾಯ ಸಂಗ್ರಹ ದಲ್ಲೂ ಹೆಚ್ಚಳ ಸಾಧ್ಯವಾಗುತ್ತದೆ.
ಆನ್‍ಲೈನ್ ಪೇಮೆಂಟ್‍ನಲ್ಲಿ ಯಾವುದೇ ತೊಂದರೆ ಆದಲ್ಲಿ ಗ್ರಾಹಕರು ಪಾಲಿಕೆಯ ಕಂಟ್ರೋಲ್ ರೂಂ 0821-2418800 ಅಥವಾ ಮೊ.ಸಂ.9821-2418816ಗೆ ಕರೆ ಮಾಡಿ, ಅಗತ್ಯ ಮಾಹಿತಿ ಪಡೆಯಬಹುದಾಗಿದೆ.