ಹೃದಯ ರವಾನೆಯ ಸಾರಥಿ ಬಸವರಾಜು
ಮೈಸೂರು

ಹೃದಯ ರವಾನೆಯ ಸಾರಥಿ ಬಸವರಾಜು

July 8, 2018

ಮೈಸೂರು: ವೈದ್ಯಕೀಯ ಕ್ಷೇತ್ರದಲ್ಲೀಗ ಹೃದಯ ಸೇರಿದಂತೆ ಅಂಗಾಂಗ ರವಾನೆ ಆಗಾಗ್ಗೆ ನಡೆಯುತ್ತಿರುತ್ತದೆ. ಈ ಪ್ರಕ್ರಿಯೆಯಲ್ಲಿ ತಜ್ಞವೈದ್ಯರ ಪಾತ್ರದೊಂದಿಗೆ ಹೃದಯವನ್ನು ಹೊತ್ತೊ ಯ್ಯುವ ವಾಹನದ ಚಾಲಕರ ಪಾತ್ರವೂ ಮಹತ್ವದ್ದಾಗಿರುತ್ತದೆ.

ಹೌದು, ಇಂತಹ ಅಂಗಾಂಗಗಳ ರವಾನೆಯಂತಹ ಸಾಹಸಕ್ಕೆ ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆ ಹೆಸರುವಾಸಿ ಯಾಗಿದೆ.

ಅಪಘಾತದಿಂದ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯಗೊಂಡು ಜೀವಂತ ಶವವಾಗಿದ್ದ ಎರಡು ಯುವ ಹೃದಯಗಳನ್ನು ರವಾನಿಸಿದ ಆ ಹೃದಯ ರವಾನೆಯ ಸಾರಥಿ ತುಮಕೂರು ಮೂಲದ ಬಸವರಾಜು. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಮನ ಹಾಗೂ ಮಹದೇವಸ್ವಾಮಿ ಅವರ ಅಂಗಾಂಗಗಳನ್ನು ಬೆಂಗಳೂರಿಗೆ ಯಶಸ್ವಿಯಾಗಿ ತಲುಪಿಸಿದ ಕೀರ್ತಿ ಚಾಲಕ ಬಸವರಾಜು ಅವರಿಗೆ ಸಲ್ಲುತ್ತದೆ.

ಶನಿವಾರ ಮಧ್ಯಾಹ್ನ 12.15ರ ವೇಳೆಗೆ ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ನಮನಳ ಅಂಗಾಂಗಗಳನ್ನು ಐಸಿಯು ವ್ಯವಸ್ಥೆಯುಳ್ಳ ಆಂಬುಲೆನ್ಸ್‍ನಲ್ಲಿ ಸಾಗಿಸಿದ ಬಸವರಾಜು, ಮಧ್ಯಾಹ್ನ 1.47ರ ಹೊತ್ತಿಗೆ ಬೆಂಗಳೂರು ತಲುಪಿ, ನಿಗದಿತ ಆಸ್ಪತ್ರೆಗಳಿಗೆ ಅಂಗಾಂಗಗಳನ್ನು ತಲುಪಿಸಿದ್ದಾರೆ. ಅದೇ ರೀತಿ ಮೊನ್ನೆಯೂ ಮಹದೇವಸ್ವಾಮಿ ಅವರ ಅಂಗಾಂಗಗಳೊಂದಿಗೆ ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೆಳಿಗ್ಗೆ 7.50ಕ್ಕೆ ಹೊರಟು ಬೆಳಿಗ್ಗೆ 9.20ರ ವೇಳೆಗೆಲ್ಲಾ ಬೆಂಗಳೂರು ತಲುಪಿದರು.

ಕಳೆದ 8 ವರ್ಷಗಳಿಂದ ಚಾಲಕ ವೃತ್ತಿಯಲ್ಲಿರುವ ಬಸವರಾಜು ತುಮಕೂರು ತಾಲೂಕಿನ ಲಿಂಗನಳ್ಳಿ ಗ್ರಾಮದವರು. ಲಕ್ಷ್ಮಯ್ಯ ಮತ್ತು ಚಿಕ್ಕಮ್ಮ ದಂಪತಿ ಪುತ್ರರಾದ ಬಸವರಾಜು ಆಂಬುಲೆನ್ಸ್ ಚಾಲನೆಯಲ್ಲಿ ಅನುಭವದೊಂದಿಗೆ ಪರಿಣಿತಿ ಹೊಂದಿದ್ದು, ಜೀವ ಉಳಿಸುವ ಈ ಕಾಯಕದಲ್ಲಿ ತೃಪ್ತಿಯಾಗಿ ಮುನ್ನಡೆಯುತ್ತಿದ್ದಾರೆ.

Translate »