ನಾಲ್ವರಿಗೆ ‘ನಮನ’ ಜೀವದಾನ
ಮೈಸೂರು

ನಾಲ್ವರಿಗೆ ‘ನಮನ’ ಜೀವದಾನ

July 8, 2018

ಗ್ರೀನ್ ಕಾರಿಡಾರ್ ನಲ್ಲಿ ಮೈಸೂರಿಂದ ಬೆಂಗಳೂರಿಗೆ ಬಹು ಅಂಗಾಂಗ ಹೊತ್ತು ಶರವೇಗದಲ್ಲಿ ಸಾಗಿದ ಆಂಬುಲೆನ್ಸ್

ಮೈಸೂರು: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಯುವತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆಕೆಯ ಕುಟುಂಬದವರು ನೋವಿನಲ್ಲೂ ತ್ಯಾಗ ಮೆರೆದಿದ್ದಾರೆ. ಇದರೊಂದಿಗೆ ಆಕೆಯ ಸಾವಿಗೂ ಸಾರ್ಥಕತೆ ದಕ್ಕಿದಂತಾಗಿದೆ.

ಎರಡು ದಿನಗಳ ಹಿಂದಷ್ಟೇ ಚಾಮುಂಡಿಬೆಟ್ಟದ ಮೇಲೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟ ಬಿಬಿಎಂ ವಿದ್ಯಾರ್ಥಿನಿ ಎಂ.ಸಿ.ನಮನ ಅವರ ಹೃದಯ ಕವಾಟ, ಕಿಡ್ನಿ ಹಾಗೂ ಶ್ವಾಸ ಕೋಶವನ್ನು, ಆಕೆಯ ಕುಟುಂಬದವರ ಅನುಮತಿ ಮೇರೆಗೆ, ಮೈಸೂರಿನ ಅಪೊಲೋ ಆಸ್ಪತ್ರೆ ವೈದ್ಯರು, ಯಶಸ್ವಿಯಾಗಿ ಬೇರ್ಪಡಿಸಿ, ವಿಶೇಷ ಆಂಬು ಲೆನ್ಸ್ ಮೂಲಕ ಬೆಂಗಳೂರಿಗೆ ರವಾನಿಸಿದರು. ಇದಕ್ಕಾಗಿ ನಗರದ ಸಂಚಾರ ಪೊಲೀಸರು, ಆಂಬುಲೆನ್ಸ್ ಸಾಗುವ ಮಾರ್ಗದಲ್ಲಿ ಗ್ರೀನ್ ಕಾರಿಡಾರ್ ಸೃಷ್ಟಿಸಿ, ಶೂನ್ಯ ಸಂಚಾರ(ಝೀರೋ ಟ್ರಾಫಿಕ್) ವ್ಯವಸ್ಥೆ ಮಾಡುವ ಮೂಲಕ ನೆರವಾದರು.

ಸೋದರಿ ಸಾವಿಗೆ ಸಾರ್ಥಕತೆ: ನಮನ, ಜು.5 ರಂದು ಸ್ನೇಹಿತ ಅರವಿಂದರಾವ್‍ನೊಂದಿಗೆ ಬೈಕ್‍ನಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿದ್ದರು. ವಾಪಸ್ಸಾಗುತ್ತಿದ್ದಾಗ ವ್ಯೂ ಪಾಯಿಂಟ್ ಬಳಿ ಅಪರಿಚಿತ ಕಾರೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ನೆಲಕ್ಕುರುಳಿದ್ದರು. ಅರವಿಂದರಾವ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದ. ತೀವ್ರವಾಗಿ ಗಾಯ ಗೊಂಡಿದ್ದ ನಮನ ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈಕೆಯನ್ನು ಉಳಿಸಿಕೊಳ್ಳಲು ವೈದ್ಯರು ಸರ್ವರೀತಿಯ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಆಕೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಮೆದುಳು ನಿಷ್ಕ್ರಿಯವಾಗಿದ್ದನ್ನು ದೃಢಪಡಿಸಿ ಕೊಂಡ ವೈದ್ಯರು, ನೋವಿನ ಮಡುವಿನಲ್ಲಿದ್ದ ಕುಟುಂಬಕ್ಕೆ ವಿಷಯ ತಿಳಿಸಿದರು. ಇನ್ಯಾವ ಪ್ರಯತ್ನವೂ ಉಳಿದಿಲ್ಲ. ಆಕೆಯನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಶುಕ್ರವಾರ ಆಕೆಯ ಕುಟುಂಬ ಸದಸ್ಯರಿಗೆ ಮನೋಸ್ಥೈರ್ಯ ತುಂಬಿದ್ದರು. ವೈದ್ಯರ ಮಾತು ಕೇಳಿದ ನಮನ ಕುಟುಂಬ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ ನಮನಾಳ ಸಹೋದರ ನವೀನ್, ದುಃಖದ ನಡುವೆಯೂ ದಿಟ್ಟ ನಿರ್ಧಾರ ಕೈಗೊಂಡಿದ್ದರು.

ಮುದ್ದು ತಂಗಿಯ ಅಂಗಾಂಗಗಳನ್ನು ದಾನ ಮಾಡಲು ಮುಂದಾದರು. ಇದನ್ನು ವೈದ್ಯರಿಗೆ ತಿಳಿಸಿ, ಅಗತ್ಯ ದಾಖಲೆಗಳಿಗೂ ಸಹಿ ಹಾಕಿ, ಆದರ್ಶ ಮೆರೆದರು. ನಂತರ ವೈದ್ಯರು ಬೆಂಗಳೂರಿನ ಆಸ್ಪತ್ರೆಗೆ ಮಾಹಿತಿ ರವಾನಿಸಿ, ಚರ್ಚೆ ನಡೆಸಿದರು. ಅಲ್ಲಿನ ಅಂಗಾಂಗ ವೈಫಲ್ಯವಿದ್ದ ರೋಗಿಗಳಿಗೆ ಅಗತ್ಯವಾದ ಅಂಗಗಳನ್ನು ನಮನ ದೇಹದಿಂದ ಬೇರ್ಪಡಿಸಿ, ಕಳುಹಿಸಲು ನಿರ್ಧರಿಸಿದರು. ಹಾಗೆಯೇ ಇಂದು ಬೆಳಿಗ್ಗೆ ನಮನ ದೇಹದಿಂದ ಹೃದಯ ಕವಾಟ, ಕಿಡ್ನಿ, ಶ್ವಾಸಕೋಶವನ್ನು ಬೇರ್ಪಡಿಸಿ, ವಿಶೇಷ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಯಶಸ್ವಿಯಾಗಿ ಕಳುಹಿಸಿಕೊಟ್ಟರು. ನಮನಾಳ ಹೃದಯವಿದ್ದ ಬಾಕ್ಸ್ ಕಂಡು, ಆಸ್ಪತ್ರೆ ಆವರಣದಲ್ಲಿದ್ದ ಕುಟುಂಬದವರು, ಸಂಬಂಧಿಗಳು, ಸ್ನೇಹಿತರಷ್ಟೇ ಅಲ್ಲದೆ, ಸಾರ್ವಜನಿಕರ ಕಣ್ಣು ತುಂಬಿದ್ದವು.

ಪೊಲೀಸರ ನೆರವು: ಅಂಗಾಂಗಗಳನ್ನು ಸುರಕ್ಷಿತವಾಗಿ ಸಾಗಿಸುವ ಸತ್ಕಾರ್ಯಕ್ಕೆ ಮೈಸೂರು ಪೊಲೀಸರ ಹೃದಯ ಮಿಡಿಯಿತು.

ಕುವೆಂಪುನಗರದ ಅಪೊಲೋ ಆಸ್ಪತ್ರೆಯಿಂದ ಕೆ.ಜಿ.ಕೊಪ್ಪಲು, ನ್ಯಾಯಾಲಯ ರಸ್ತೆ, ಹುಣಸೂರು ರಸ್ತೆ, ಮೆಟ್ರೋ ಪೋಲ್ ವೃತ್ತ, ರೈಲ್ವೇ ನಿಲ್ದಾಣದ ವೃತ್ತ, ಶೇಷಾದ್ರಿ ಅಯ್ಯರ್ ರಸ್ತೆ, ಆರ್‍ಎಂಸಿ ವೃತ್ತ, ಹೈವೇ ವೃತ್ತ, ಮಿಲೇನಿಯಂ ವೃತ್ತದ ಮೂಲಕ ಬೆಂಗಳೂರು ರಸ್ತೆವರೆಗೆ ವಿಶೇಷ ಆಂಬುಲೆನ್ಸ್ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು.

ಈ ಮಾರ್ಗವನ್ನು ಗ್ರೀನ್ ಕಾರಿಡಾರ್ ಹಾಗೂ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಲ್ಲದೆ, ಬೆಂಗಳೂರಿನ ಕೆಂಗೇರಿಯಲ್ಲಿರುವ ಅಪೊಲೋ ಆಸ್ಪತ್ರೆಯವರೆಗೂ ಮೂರು ಎಸ್ಕಾರ್ಟ್ ಜೀಪ್‍ಗಳ ಸೇವೆ ಕಲ್ಪಿಸಲಾಗಿತ್ತು. ಗ್ರೀನ್ ಕಾರಿಡಾರ್‍ನುದ್ದಕ್ಕೂ ಸಂಚಾರ ಪೊಲೀಸರು ಬೆಳಗ್ಗೆ 6ಗಂಟೆಯಿಂದಲೇ ಹಸಿರು ಹಾಗೂ ನೇರಳೆ ಬಣ್ಣದ ಜರ್ಕಿನ್ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ವೈಧ್ಯರು ನೀಡಿದ್ದ ಮಾಹಿತಿಯಂತೆ ಬೆಳಗ್ಗೆ 11ಕ್ಕೆ ಹೃದಯ ರವಾನೆಯಾಗಬೇಕಾಗಿತ್ತು. ಆದರೆ ತಡವಾಗಿ ಆಪರೇಷನ್ ಪ್ರಕ್ರಿಯೆ ಆರಂಭ ವಾಗಿದ್ದರಿಂದ ಮಧ್ಯಾಹ್ನ 12.29ಕ್ಕೆ ಆಂಬ್ಯುಲೆನ್ಸ್ ಬೆಂಗಳೂರಿನತ್ತ ಪ್ರಯಾಣ ಆರಂಭಿಸಿತು. ಸುಮಾರು 120 ಕಿಮೀ ವೇಗದಲ್ಲಿ ಸಾಗಿದ ಆಂಬ್ಯುಲೆನ್ಸ್, ನಿಗಧಿತ ಅವಧಿಯೊಳಗೆ ಬೆಂಗಳೂರಿನ ಆಸ್ಪತ್ರೆ ಸೇರಿತು. ಪೊಲೀಸರ ಸೂಚನೆಯಂತೆ ಸಾರ್ವಜನಿಕರೂ ಸಹಕರಿಸಿ, ಸತ್ಕಾರ್ಯದಲ್ಲಿ ಭಾಗಿಯಾದರು.

ನಮನಾಳಿಗೆ ನಮನ: ನಮನ ಕಿಡ್ನಿಯೊಂದನ್ನು ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆಗೆ, ಮತ್ತೊಂದನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ, ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಹಾಗೂ ಹೃದಯದ ಕವಾಟಗಳನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ. ಈ ಅಂಗಾಂಗಗಳ ಮರುಜೋಡಣೆಯಿಂದ ನಾಲ್ಕು ಮಂದಿ ಮರುಜೀವ ಪಡೆಯಲಿ ದ್ದಾರೆ. ಹೀಗೆ ತನ್ನ ಬದುಕಿನ ಕಡೇ ಕ್ಷಣದಲ್ಲಿ ಇತರೆ ಜೀವಗಳಿಗಾಗಿ ಹೃದಯ ಮಿಡಿದಿರುವ ನಮನಾಳಿಗೆ ಸಹಸ್ರ ನಮನಗಳು. ಉಮ್ಮಳಿಸುತ್ತಿದ್ದ ದುಃಖವನ್ನು ಅದುಮಿಟ್ಟು, ನಮನಾಳ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದ ಕುಟುಂಬದವರ ತ್ಯಾಗಕ್ಕೂ ಪ್ರಣಾಮಗಳು.

Translate »