ಕಾಂಡಕೊರಕ ಹುಳು ಬಾಧೆ: ಕೃಷಿ ಅಧಿಕಾರಿ, ವಿಜ್ಞಾನಿಗಳಿಂದ ಪರಿಶೀಲನೆ
ಹಾಸನ

ಕಾಂಡಕೊರಕ ಹುಳು ಬಾಧೆ: ಕೃಷಿ ಅಧಿಕಾರಿ, ವಿಜ್ಞಾನಿಗಳಿಂದ ಪರಿಶೀಲನೆ

July 5, 2018

ಬೇಲೂರು: ತಾಲೂಕಿನ ಹೆಬ್ಬಾಳು ಗ್ರಾಮದ ಸುತ್ತ-ಮುತ್ತ ರೈತರು ಬೆಳೆದ ಮೆಕ್ಕೆಜೋಳಕ್ಕೆ ತಗಲಿರುವ ಕಾಂಡ ಕೊರಕ ಹುಳು ಬಾಧೆ ಹಿನ್ನೆಲೆಯಲ್ಲಿ ಹಾಸನ ಜಂಟಿ ಕೃಷಿ ನಿರ್ದೇಶಕರು ಹಾಗೂ ಕೃಷಿ ವಿವಿ ವಿಜ್ಞಾನಿಗಳು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.

ಹೆಬ್ಬಾಳು ಗ್ರಾಮದ ಕೃಷಿಕರಾದ ಗೌರಮ್ಮ ಹಾಗೂ ಚಿದಾನಂದ್ ಮತ್ತು ದೊಡ್ಡಬ್ಯಾಡಿಗೆರೆ ಗ್ರಾಮದ ಪರ್ವತಯ್ಯ ಹೊಲದ ಮೆಕ್ಕೆ ಜೋಳದಲ್ಲಿ ಕಾಂಡಕೊರಕ ಹುಳುಗಳಿಂದ ಹಾಳಾದ ಪೈರನ್ನು ವೀಕ್ಷಣೆ ಮಾಡಿದರು. ಹಾಗೆಯೇ ಕಾಂಡಕೊರಕ ಹುಳುಗಳ ಹಾವಳಿಯಿಂದ ಬೆಳೆಯ ಮೇಲೆ ಉಂಟಾಗುವ ಪರಿಣಾಮ ಮತ್ತು ಹತೋಟಿಗೆ ರೈತರು ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳು ಮಾಹಿತಿ ನೀಡಿದರು.

ಹಾಸನ ಕೃಷಿ ವಿವಿ ಕೀಟಿ ಶಾಸ್ತ್ರತಜ್ಞ ಡಾ.ಮುನಿಸ್ವಾಮಿಗೌಡ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮೆಕ್ಕೆಜೋಳದ ಬೆಳೆ ಉತ್ತಮವಾಗಿ ಬಂದಿದ್ದು, ಸದ್ಯ ಜೋಳಕ್ಕೆ ಕಾಂಡ ಕೊರಕ ಹುಳುಗಳಿಂದ ರೈತಾಪಿ ಧೃತಿಗೆಡಬೇಕಿಲ್ಲ. ಈ ಹುಳುಗಳ ಬಾಧೆಗೆ ಪ್ರಮುಖವಾಗಿ ಕ್ಲೋರೋಫೈರಿಪಾಸ್, ಮಾನೋಕ್ರೋಪಾಸ್, ಕ್ವಿನಾಲ್ಪಾಸ್ ಔಷಧಿ ಗಳನ್ನು ಕೃಷಿ ಇಲಾಖೆ ಮಾಹಿತಿ ಪಡೆದು ಅಗತ್ಯಕ್ಕೆ ಅನುಗುಣವಾಗಿ ಸಂಜೆ ವೇಳೆಯಲ್ಲಿ ಸಿಂಪಡಿಸಿ ಎಂದು ಸೂಚಿಸಿದರು.

ಹಾಸನ ಜಂಟಿ ಕೃಷಿ ನಿರ್ದೇಶಕ ಕೆ.ಮಧುಸೂದಸ್ ಮಾತನಾಡಿ, ಜಿಲ್ಲೆ ಯಲ್ಲಿ ಅಲೂಗೆಡ್ಡೆ ಬೆಳೆಯ ಬಳಿಕವೇ ಮೆಕ್ಕೆಜೋಳ ರೈತಾಪಿ ವರ್ಗಕ್ಕೆ ವಾಣಿಜ್ಯ ಬೆಳೆಯಾಗಿ ಪರಿಗಣಿಸಿದ್ದಾರೆ. ಕೆಲ ಭಾಗದಲ್ಲಿ ಹವಾಮಾನ ವೈಪರಿತ್ಯ ದಿಂದಾಗಿ ಕಾಂಡ ಕೊರಕ ಹಾಗೂ ಕೀಟ ಬಾಧೆ ಕಾಣಿಸಿದ ನಿಟ್ಟಿನಲ್ಲಿ ಬೇಲೂರು ತಾಲೂಕಿನ ಕೆಲ ಗ್ರಾಮದಲ್ಲಿ ಮುಸುಕಿನ ಜೋಳ ಬೆಳೆ ಹಾಗೂ ಇನ್ನಿತರ ಪೈರುಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದರು. ಈ ವೇಳೆ ಗ್ರಾಮಸ್ಥರು ಹಾಜರಿದ್ದರು.

Translate »