ಗ್ರಾಪಂ ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟಿಸಿದ ಸದಸ್ಯರು
ಮಂಡ್ಯ

ಗ್ರಾಪಂ ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟಿಸಿದ ಸದಸ್ಯರು

August 28, 2018

ಹಿರೇಮರಳಿ ಗ್ರಾಪಂ ಅಧ್ಯಕ್ಷೆ ವಿರುದ್ಧ ಭ್ರಷ್ಟಾಚಾರದ ಆರೋಪ
ಪಾಂಡವಪುರ:  ಹಿರೇಮರಳಿ ಗ್ರಾಪಂ ಅಧ್ಯಕ್ಷೆ ಹೇಮಾವತಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾನೂನು ಬಾಹಿರವಾಗಿ ವಸತಿ ಯೋಜನೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಹಿರೇಮರಳಿ ಗ್ರಾಪಂನಲ್ಲಿ ಸೋಮವಾರ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಹೇಮಾವತಿ ಅವರು ತಮ್ಮ ಕುಟುಂಬದ ಮೂವರಿಗೆ ವಸತಿ ಯೋಜನೆ ಹಂಚಿಕೆ ಮಾಡಿದ್ದಾರೆ. ಆದರೆ ಅಧ್ಯಕ್ಷೆ ಕುಟುಂಬದ ಮೂವರು ಒಂದೇ ಜಾಗವನ್ನು ತೋರಿಸಿ ವಸತಿ ಯೋಜನೆ ಹಣ ಪಡೆದಿದ್ದು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸದಸ್ಯರು ಆರೋಪಿಸಿದರು.

ಕಾನೂನಿನ ಪ್ರಕಾರ ಗ್ರಾಪಂನಿಂದ ವಸತಿ ಯೋಜನೆ ಪಡೆಯಲು ಫಲಾನುಭವಿಗಳ ಹೆಸರಿನಲ್ಲಿ ನಿವೇಶನವಿರಬೇಕು. ಆದರೆ, ವಸತಿ ಯೋಜನೆ ಪಡೆದಿರುವ ಮೂವರು ಸಹ ಒಂದೇ ನಿವೇಶನ ತೋರಿಸಿ ವಸತಿ ಯೋಜನೆಯ ಅನುದಾನವನ್ನು ಪಡೆದಿದ್ದಾರೆ. ಇದಕ್ಕೆ ಅಧ್ಯಕ್ಷೆ ಹೇಮಾವತಿ ಬೆಂಬಲ ನೀಡಿ ಅನುದಾನ ಬಿಡುಗಡೆಗೊಳಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ದೂರಿದರು.

ಗ್ರಾಮದ ಬೋರಮ್ಮ ಬೋರೇಗೌಡರಿಗೆ ಗ್ರಾಪಂ ವತಿಯಿಂದ 2011ರಲ್ಲಿ ವಸತಿ ಯೋಜನೆ ನೀಡಿದ್ದರೂ, ಸಹ ಅವರಿಗೆ ಮತ್ತೊಮ್ಮೆ ವಸತಿ ಯೋಜನೆ ನೀಡಿದ್ದಾರೆ. ಜೊತೆಗೆ ಅವರ ತಂಗಿ ಬೋರಮ್ಮ ಕುಮಾರ್ ಅವರಿಗೆ ಈಗಾಗಲೇ ಕಟ್ಟಿರುವ ಮನೆಗೆ ವಸತಿ ಯೋಜನೆ ನೀಡಿದ್ದಾರೆ ಮತ್ತು ಅವರ ಸಂಬಂಧಿ ಚೈತ್ರಾ ರಮೇಶ್ ಅವರಿಗೂ ಕೂಡ ವಸತಿ ಯೋಜನೆ ನೀಡಿದ್ದಾರೆ. ಇವರಲ್ಲಿ ಬೋರಮ್ಮ ಕುಮಾರ್ ಮತ್ತು ಚೈತ್ರಾ ರಮೇಶ್ ಎಂಬುವರ ಹೆಸರಲ್ಲಿ ನಿವೇಶನ ಇಲ್ಲ. ಆದರೂ ಸಹ ಅವರಿಗೆ ಅನುದಾನ ಕೊಡಿಸಲು ಅಧ್ಯಕ್ಷರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಈ ಸಂಬಂಧ ಸ್ಪಷ್ಟೀಕರಣ ನೀಡುವಂತೆ ಪಿಡಿಓ ಅವರನ್ನು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಪಿಡಿಓ ನಾಗರಾಜು, ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಈಗಾಗಲೇ ವಸತಿ ಯೋಜನೆ ನೀಡಿರುವ ವ್ಯಕ್ತಿಗಳಿಗೆ ಮತ್ತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರೂ ಸಹ ಅಧ್ಯಕ್ಷೆ ಹೇಮಾವತಿ ಅವರು ಒತ್ತಡ ತಂದು ವಸತಿ ಯೋಜನೆ ನೀಡಿದ್ದಾರೆ. ನಾನು ಈ ವಸತಿ ಯೋಜನೆಗೆ ಜಿಪಿಆರ್‍ಎಸ್ ಮಾಡಿಲ್ಲ. ಅದಕ್ಕೆ ಅಧ್ಯಕ್ಷರೇ ತಾಪಂ ಕಚೇರಿಯ ವಸತಿ ಯೋಜನೆ ಅಧಿಕಾರಿ ಕಾಂತರಾಜ್ ಅವರಿಂದ ಜಿಪಿಆರ್‍ಎಸ್ ಮಾಡಿಸಿದ್ದಾರೆ ಎಂದು ಸಭೆಗೆ ವಿವರಿಸಿದರು.

ಅಧ್ಯಕ್ಷೆ ಹೇಮಾವತಿ ನಿಯಮ ಉಲ್ಲಂಘಿಸಿ ವಸತಿ ಯೋಜನೆ ನೀಡಿದ್ದಾರೆ ಎಂಬುದು ಸಾಬೀತಾಗುತ್ತಿದ್ದಂತೆಯೇ ಎಲ್ಲಾ ಸದಸ್ಯರು ಸಭೆ ಬಹಿಷ್ಕರಿಸಿ ಹೊರಗೆ ಬಂದು ಅಧ್ಯಕ್ಷೆ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪತಿ ವಿರುದ್ಧ ಆರೋಪ: ಪಂಚಾಯಿತಿಯಲ್ಲಿ ಅಧ್ಯಕ್ಷೆ ಹೇಮಾವತಿ ಅವರ ಪತಿ ಮಂಜುನಾಥ್ ತಮ್ಮ ಪತ್ನಿಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಗಂಭೀರವಾಗಿ ಸದಸ್ಯರು ಆರೋಪಿಸಿದರು.

ಅಧ್ಯಕ್ಷರ ಪತಿ ಮಂಜುನಾಥ್, ಚಿಕ್ಕಮರಳಿ ರಸ್ತೆಯಲ್ಲಿರುವ ಕುಡಿಯುವ ನೀರಿನ ಮೋಟಾರ್ ಹಾಗೂ ಕೇಬಲ್ ವೈರ್‍ಗಳನ್ನು ಹೊರತೆಗೆದು ಪಿಡಿಓ, ಜನಪ್ರತಿನಿಧಿಗಳ ಗಮನಕ್ಕೆ ತರದೆ ಮಾರಾಟ ಮಾಡಿದ್ದಾರೆ. ಇನ್ನೂ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿ 9 ತಿಂಗಳು ಕಳೆದಿವೆ. ಆದರೆ, ಮಂಜುನಾಥ್ ಪಿಡಿಓ ಗಮನಕ್ಕೆ ತರದೆ ತಾವು ಅಧ್ಯಕ್ಷರ ಪತಿ ಎಂಬ ಕಾರಣಕ್ಕೆ ಶುದ್ಧ ಕುಡಿಯುವ ನೀರು ಘಟಕದ ಬೀಗವನ್ನು ತಾವೇ ಪಡೆದುಕೊಂಡಿದ್ದಾರೆ. ಜೊತೆಗೆ ಪಂಚಾಯಿತಿಗೆ ವಿದ್ಯುತ್ ದೀಪದ ಬಲ್ಪ್‍ಗಳ ಖರೀದಿ ಸೇರಿದಂತೆ ಯಾವುದೇ ಸಾಮಾಗ್ರಿ ಬೇಕಾದರೂ ಅಧ್ಯಕ್ಷರ ಪತಿಯೇ ಸಹಿ ಮಾಡಿ ಖರೀದಿಸುತ್ತಿದ್ದಾರೆ. ಹೀಗೆ ಪಂಚಾಯಿತಿಯಲ್ಲಿ ಅಧ್ಯಕ್ಷೆ ಹೇಮಾವತಿ ಅವರ ಪತಿ ಮಂಜುನಾಥ್ ಪತ್ನಿಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೆ ಒತ್ತಡ ತಂದು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಸುನೀಲ್, ಯೋಗೇಶ್, ಶಿವಕುಮಾರ್, ಅಶೋಕ್, ಸಿದ್ದಪಾಜಿ, ನಾಗಮ್ಮ, ಮಂಗಳಮ್ಮ, ಕುಮಾರಸ್ವಾಮಿ, ಸವಿತ, ಲಲಿತ, ಚನ್ನೇಗೌಡ, ಲೋಕೇಶ್, ವಸಂತ, ಗೀತಾ, ಪವಿತ್ರ ಸೇರಿದಂತೆ ಹಲವರಿದ್ದರು.

ಗ್ರಾಮ ಪಂಚಾಯಿತಿಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಸದಸ್ಯರು ಆರೋಪಿಸಿದ್ದಾರೆ. ಈ ಸಂಬಂಧ ಗ್ರಾಪಂನಲ್ಲಿ ಇಲ್ಲಿಯವರೆಗೆ ಯಾವುದೇ ಅಕ್ರಮ ನಡೆದಿದ್ದರೂ, ಅದರ ವಿರುದ್ಧ ಉನ್ನತ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ತನಿಖೆ ನಡೆಸಲಿ.
– ಹಿರೇಮರಳಿ ಗ್ರಾಪಂ ಅಧ್ಯಕ್ಷೆ ಹೇಮಾವತಿ.

Translate »