ಮೈಸೂರು: ಮಿ-ಟೂ ಅಭಿಯಾನ ಸದ್ಯ ಎಲ್ಲೆಡೆ ಸಂಚಲನ ಮೂಡಿಸಿದೆ. ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಅಸಭ್ಯ ವರ್ತನೆ ಆರೋಪ ಮಾಡಿದ ನಂತರ ಕರ್ನಾಟಕದಲ್ಲಿ ಮಿ-ಟೂ ಚರ್ಚೆ ಜೋರಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಪರ ಹಾಗೂ ವಿರೋಧ ಅಭಿ ಪ್ರಾಯಗಳ ಮಂಡನೆಯಾಗುತ್ತಿದೆ.
ಎರಡು ವರ್ಷಗಳ ಹಿಂದೆ `ವಿಸ್ಮಯ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಎಲ್ಲೆ ಮೀರಿ ವರ್ತಿಸಿದ್ದ ಲ್ಲದೆ, ಮೊಬೈಲ್ ಸಂದೇಶದಲ್ಲೂ ಅನುಚಿತ ಭಾವನೆ ವ್ಯಕ್ತಪಡಿಸಿದ್ದರೆಂದು ಸಂದರ್ಶನದಲ್ಲಿ ತಿಳಿಸಿದ್ದ ನಟಿ ಶೃತಿ ಹರಿಹರನ್, ಬಳಿಕ ಫೇಸ್‍ಬುಕ್ ಪೇಜ್ ನಲ್ಲೂ ಬರೆದುಕೊಂಡಿದ್ದರು. ಇದು ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಲ್ಲದೆ, ನೆಟ್ಟಿಗರ ವಾದ-ಪ್ರತಿವಾದಕ್ಕೂ ಕಾರಣ ವಾಗಿದೆ. ಚಿತ್ರಂಗದ ಘಟಾನುಘಟಿಗಳು ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಇಬ್ಬರ ಪರವಾಗಿಯೂ ಬ್ಯಾಟ್ ಬೀಸುತ್ತಿದ್ದಾರೆ. ಮುಂದುವರಿದು ಸಾಮಾನ್ಯರೂ ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಮೂಲಕ ಈ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ದಾಖಲಿಸುತ್ತಿದ್ದಾರೆ.
ಚಿತ್ರ ನಿರ್ದೇಶಕ ಜಯತೀರ್ಥ, ಪರವಾಗಿ ನಿಲ್ಲುವ ಧಾವಂತದಲ್ಲಿ ಯಾರನ್ನೂ ಕೀಳಾಗಿ ಕಾಣಬೇಡಿ. ಯಾರು ನಿಜವಾದ ಶೋಷಿತರು ಎಂಬುದು ಸಮಯ ಬಂದಾಗ ಬಯಲಾಗುತ್ತದೆ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ. ಶೃತಿ ಹರಿಹರನ್ ಒಬ್ಬ ಅತ್ಯಂತ ನಿಷ್ಠೆಯುಳ್ಳ ವಿನಮ್ರಳಾದ ಕನ್ನಡದ ಪ್ರತಿಭಾವಂತ ನಟಿ. ಅರ್ಜುನ್ ಸರ್ಜಾ ಕೂಡ ಒಬ್ಬ ಪ್ರತಿಭಾವಂತ ಹಿರಿಯ ನಟ ಹಾಗೂ ನಿರ್ದೇಶಕ. ಕನ್ನಡದ ಹೆಮ್ಮೆ. ಇದೀಗ ಮಿ-ಟೂ ವೇದಿಕೆಯಡಿ ಶೃತಿ, ಅರ್ಜುನ್‍ರ ಬಗ್ಗೆ ಕೆಲವು ಆರೋಪ ಮಾಡಿ ದ್ದಾರೆ. ಅವರು ಶೋಷಣೆ ಮಾಡಿದ್ದಾರೋ? ಇಲ್ಲವೋ? ಇನ್ನೂ ತನಿಖೆಯಾಗಬೇಕಾದ ವಿಚಾರ. ಆದರೆ ಈ ವಿಚಾರವನ್ನಿಟ್ಟುಕೊಂಡು ಶೃತಿಯನ್ನು ದೂಷಿಸುವ ನೆಪದಲ್ಲಿ ನಿಜವಾಗಿ ಶೋಷಿಸುತ್ತಿರುವುದು ಈ ಸಮಾಜ ಎಂಬುದು ಸ್ಪಷ್ಟವಾಗಿದೆ. ವಿಷಯ ತಿಳಿಯದ ಮಹನೀಯರೆಲ್ಲಾ ಒನ್ ಸೈಡೆಡ್ ಪ್ರತಿಕ್ರಿಯೆ ನೀಡುತ್ತಿರುವುದು ಮಾನಸಿಕ ಶೋಷಣೆಯ ಲ್ಲವೇ?. ವ್ಯವದಾನವಿಲ್ಲದೆ ಶೃತಿಯವರನ್ನು ಕೆಟ್ಟ ಪದಗಳಿಂದ ಜರಿಯುವ ಮುನ್ನ ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಎಂಬುದನ್ನು ಮರೆಯಬಾರದಲ್ವಾ?. ಯಾವುದೇ ಹೆಣ್ಣು ಮಕ್ಕಳೂ ದೌರ್ಜನ್ಯಕ್ಕೆ ಒಳಗಾಗ ಬಾರದು. ಯಾವ ಸತ್ಪುರುಷನಿಗೂ ಮಾಡದ ತಪ್ಪಿಗೆ ಶಿಕ್ಷೆಯಾಗಬಾರದು. ಸಮಯ ಬಂದಾಗ ಸತ್ಯ ಬಯಲಾಗುತ್ತದೆ. ಅಲ್ಲಿವರೆಗೂ ಯಾರನ್ನೂ ಜರಿಯದೆ ಸಂಯಮ ದಿಂದಿರುವುದು ಮನುಷ್ಯತ್ವ ಅಲ್ಲವೇ? ಎಂದು ಹೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೆಲವರು ಶೃತಿ ಹರಿಹರನ್ ನಡೆಯನ್ನು ಸ್ವಾಗತಿಸಿದರೆ, ಮತ್ತಷ್ಟು ಮಂದಿ ವಿರೋಧಿಸಿದ್ದಾರೆ. ಒಂದು ರೀತಿಯಲ್ಲಿ ನಿಮ್ಮ ಮಾತು ನಿಜವೆನಿಸಿದರೂ ಮತ್ತೊಂದು ರೀತಿಯಲ್ಲಿ ಸುಳ್ಳೂ ಇರಬಹುದು. ಅರ್ಜುನ್ ಸರ್ಜಾ ವಿರುದ್ಧ ಈವರೆಗೂ ಒಂದು ಸಣ್ಣ ಆರೋಪ ಕೇಳಿ ಬಂದಿರ ಲಿಲ್ಲ. ಶೃತಿ ಮುಂಚೆಯೇ ಹೇಳಿದ್ದರೆ ಅವರ ಮಾತಿಗೆ ತೂಕವಿರುತ್ತಿತ್ತು. ಮೊದಲು ಮಾಧ್ಯಮಗಳ ಮುಂದೆ ಬಂದು, ನಂತರ ಕಾನೂನು ಹೋರಾಟಕ್ಕೆ ಯೋಚನೆ ಮಾಡು ತ್ತೇನೆ ಎಂಬ ಮಾತು ಅನುಮಾನಾಸ್ಪದ ವಾಗಿದೆ. ಅರ್ಜುನ್ ಸರ್ಜಾ ಒಬ್ಬ ಸಜ್ಜನ ವ್ಯಕ್ತಿ. ವೃತ್ತಿ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆಯಿಲ್ಲದ ಅವರ ತೇಜೋವಧೆ ಮಾಡುವುದು ಸರಿಯಲ್ಲ. ಈ ಕಾಲದಲ್ಲಿ ಯಾರೂ ಲೈಂಗಿಕ ದೌರ್ಜನ್ಯವನ್ನು ಸಹಿಸುವುದಿಲ್ಲ. ಶೃತಿ ಹರಿಹರನ್ ಅಬಲೆಯೂ ಅಲ್ಲ, ಏನೂ ಅರಿಯದವರೂ ಅಲ್ಲ. ಅಂದು ಸಿನಿಮಾ ಬೇಕಿತ್ತು. ಇಂದು ಪಬ್ಲಿಸಿಟಿ ಬೇಕಿದೆ. ಪರಿಚಿತ ಹೆಣ್ಣು ಮಕ್ಕಳನ್ನು ಊಟಕ್ಕೆ ಕರೆ ದದ್ದು ಹೇಗೆ ತಪ್ಪಾಗುತ್ತದೆ?. ಆಕೆ ಊಟಕ್ಕೆ ಹೋಗಿಲ್ಲ ಅಂದ ಮೇಲೆ ಅರ್ಜುನ್ ಸರ್ಜಾ ಅವರಲ್ಲಿ ಕೆಟ್ಟ ಭಾವನೆಯಿದೆ ಎಂದು ಹೇಗೆ ತಿಳಿಯಿತು?. ಆಕೆಗೆ ಲೈಂಗಿಕ ಕಿರು ಕುಳ ಎಂದರೇನೆಂಬುದು ಗೊತ್ತಿಲ್ಲ. ಹೀಗೆ ಮಹಿಳೆಯರೂ ಸೇರಿದಂತೆ ಅನೇಕ ಮಂದಿ ಸರ್ಜಾ ಪರ ನಿಂತಿದ್ದಾರೆ.
ಹಾಗೆಯೇ ಆ ಕ್ಷಣದಲ್ಲೇ ಎದುರಿಸಲಾ ಗದ ಅಶಕ್ತರು, ಯೋಚಿಸಿ, ಬೆಂಬಲ ಪಡೆದು, ಸೂಕ್ತ ವೇದಿಕೆ ಮೂಲಕ ಹೋರಾಟ ನಡೆಸುವುದು ತಪ್ಪಲ್ಲ. ಪುರುಷರಿಗಿರುವ ಮುಕ್ತ ವಾತಾವರಣವನ್ನು ಮಹಿಳೆಯರಿಗಿನ್ನೂ ಕಲ್ಪಿಸಿಕೊಟ್ಟಿಲ್ಲ. ಕಾಲೇಜಿನಲ್ಲಿ ಹುಡುಗರು ಕೀಟಲೆ ಮಾಡುವುದನ್ನು ಅಪ್ಪನಿಗೆ ಹೇಳಿದರೆ ವಿದ್ಯಾಭ್ಯಾಸದಿಂದಲೇ ವಂಚಿತಳಾಗುತ್ತೇನೆ ಎಂಬ ಭಯದಿಂದ ಮುಚ್ಚಿಡುತ್ತಾರೆ. ಇಂತಹ ಸಂದರ್ಭಗಳನ್ನು ನಮ್ಮ ಮನೆಗಳಲ್ಲೂ ಎದುರಿಸಿಲ್ಲವೇ? ಎಂದು ಅನೇಕರು ವಾದಿಸಿದ್ದಾರೆ. ದೌರ್ಜನ್ಯವನ್ನು ಹೇಳಿಕೊಳ್ಳುವ ಮಹಿಳೆಯರ ಮೇಲೆ ವಾಗ್ದಾಳಿ ನಡೆಸಿ, ಆತ್ಮಸ್ಥೈರ್ಯ ಕಸಿಯುವ ಪ್ರಯತ್ನಕ್ಕೆ ಅವಕಾಶ ನೀಡಬಾರದು. ಹೆಣ್ಣಿನ ಮಾತುಗಳನ್ನು ಕೇಳಿಸಿ ಕೊಳ್ಳುವ ವ್ಯವದಾನ ಇರಬೇಕು. ಮಿ-ಟೂ ಅಭಿಯಾನ, ದುಡಿಯುವ ಮಹಿಳೆ ಯರ ಕರಾಳ ಅನುಭವವನ್ನು ಬಿಚ್ಚಿಡುತ್ತಿದೆ. ಇದರಿಂದ ಸುಧಾರಣೆ ಸಾಧ್ಯ. ಹಾಗಾಗಿ ನಾವೆಲ್ಲಾ ಬೆಂಬಲಿಸೋಣವೆಂಬ ಸಂದೇಶ ದೊಂದಿಗೆ ಸಹಿ ಸಂಗ್ರಹ ಮಾಡಲಾಗುತ್ತಿದೆ. ಹಾಗೆಯೇ ಮಿ-ಟೂ ಅಭಿಯಾನ ದುರ್ಬಳಕೆ ಯಾಗುತ್ತಿದೆ ಎಂದು ಸಂತ್ರಸ್ತ ಪುರುಷರು ವಿ-ಟೂ ಅಭಿಯಾನ ಆರಂಭಿಸಿದ್ದು, ಸಾಮಾ ಜಿಕ ಜಾಲತಾಣದಲ್ಲಿ ಜಿದ್ದಾಜಿದ್ದಿ ಸೃಷ್ಟಿಸಿದೆ.