ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಕಾಂಗ್ರೆಸ್ ನೇತೃತ್ವದಲ್ಲಿ ರಚನೆಯಾದ `ಮಹಾಘಟ್ ಬಂಧನ್’ನಿಂದ ಬಿಎಸ್‍ಪಿ ಹೊರ ಬಂದಿದ್ದು, ಆ ಪಕ್ಷದ ಶಾಸಕರಾಗಿರುವ ಎನ್.ಮಹೇಶ್ ಅವರಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಮೈತ್ರಿ ಸರ್ಕಾರದಿಂದ ಹೊರ ಬರುವಂತೆ ನೋಡಿಕೊಂಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾಯಾವತಿಯವರು ಗಮನ ಹರಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಜೆಡಿಎಸ್ ಇನ್ನಿತರ ಪಕ್ಷಗಳ ಜೊತೆ ಸೇರಿ ಲೋಕಸಭಾ ಚುನಾವಣೆಯನ್ನು ಎದುರಿಸಲು ತಯಾರಿ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಹೊಂದಿರುವ ಕರ್ನಾಟಕ ಸರ್ಕಾರದಿಂದ ತಮ್ಮ ಪಕ್ಷದ ಶಾಸಕ ಎನ್.ಮಹೇಶ್ ಅವರನ್ನು ಹೊರಗೆ ಕರೆಸಿಕೊಂಡಿದ್ದಾರೆ. ಅದೇ ವೇಳೆ ಜೆಡಿಎಸ್ ಜೊತೆ ತಮ್ಮ ಮೈತ್ರಿ ಮುಂದುವರೆಸಿದ್ದಾರೆ.
ಎನ್.ಮಹೇಶ್ ಸುದ್ದಿಗೋಷ್ಠಿ: ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಸಂಜೆ ತುರ್ತು ಸುದ್ದಿಗೋಷ್ಠಿ ನಡೆಸಿದ ಎನ್.ಮಹೇಶ್, ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಅಧಿಕೃತವಾಗಿ ಪ್ರಕಟಿಸಿದರು. ತಾವು ಸರ್ಕಾರದ ಭಾಗವಾಗಿ ಇರದೇ ಕೇವಲ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಬೆಂಬಲಿಗನಾಗಿರುತ್ತೇನೆ ಎಂದರು. (ಸುದ್ದಿಗೋಷ್ಠಿಯಲ್ಲಿ ಅವರು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಎಂಬ ಪದ ಬಳಸಿದರೇ ಹೊರತು, ಅಪ್ಪಿತಪ್ಪಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಎಂಬ ಪದ ಬಳಸಲಿಲ್ಲ).
ಜೆಡಿಎಸ್ ಜೊತೆ ಚುನಾವಣಾ ಪೂರ್ವದಲ್ಲೇ ಬಿಎಸ್‍ಪಿ ಮೈತ್ರಿ ಹೊಂದಿತ್ತು. 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಎಸ್‍ಪಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿತು. ಆ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದ ನನ್ನನ್ನೂ ಕೂಡ ಮೈತ್ರಿ ಸರ್ಕಾರದ ಒಂದು ಭಾಗವಾಗಿ ಸೇರಿಸಿಕೊಂಡ ಕುಮಾರ ಸ್ವಾಮಿ ಅವರು, ದೊಡ್ಡ ಖಾತೆಯನ್ನೇ ನೀಡಿದ್ದರು. ಕಳೆದ ನಾಲ್ಕು ತಿಂಗಳ ಕಾಲ ಸಂಪುಟದ ಎಲ್ಲಾ ಸಹೋದ್ಯೋಗಿಗಳು ಹಾಗೂ ಶಾಸಕರು ನನಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಎನ್.ಮಹೇಶ್ ಹೇಳಿದರು. ತಾವು ಸಚಿವರಾಗಿದ್ದು, ಪಕ್ಷದ ಚಟುವಟಿಕೆ ಹಾಗೂ ಕ್ಷೇತ್ರದ ಜನರಿಗೆ ಸ್ಪಂದಿಸುವ ವಿಚಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಂಘಟಿಸುವುದು ಹಾಗೂ ತನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ಸಲುವಾಗಿ ಸಚಿವ ಸ್ಥಾನಕ್ಕೆ ಸ್ವ-ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿದರು.
ಸಚಿವ ಸ್ಥಾನ ಪಡೆದು ಸರ್ಕಾರದ ಒಂದು ಭಾಗವಾಗಿದ್ದಾಗ ಜವಾಬ್ದಾರಿ ಹೆಚ್ಚಾಗಿರುತ್ತದೆ. ಅದರಿಂದಾಗಿ ಪಕ್ಷ ಸಂಘಟನೆ ಮತ್ತು ಕ್ಷೇತ್ರದ ಜನರಿಗೆ ಸ್ಪಂದಿಸುವಲ್ಲಿ ತೊಂದರೆಯಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಾನು ಸಚಿವನಾದ ಮೇಲೆ ನನ್ನ ರಾಜಕೀಯ ವಿರೋಧಿಗಳು `ಮಹೇಶಣ್ಣನನ್ನು ಗೆಲ್ಲಿಸಿದ್ದೀರಿ. ಅವರು ಗೆದ್ದು ಬೆಂಗಳೂರು ಸೇರಿಕೊಂಡರು’ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅದನ್ನು ನನ್ನಿಂದ ಎದುರಿಸಲು ಸಾಧ್ಯವಾಗುತ್ತಿಲ್ಲ. ಅದು ಮಾತ್ರವಲ್ಲದೇ ಪಕ್ಷ ಸಂಘಟನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ರಾಜೀನಾಮೆ ನೀಡಿದ್ದೇನೆಯೇ ಹೊರತು, ಬೇರೆ ಯಾವುದೇ ಕಾರಣಗಳಿಲ್ಲ ಎಂದು ಹೇಳಿದರು.
ನಾನು ಮಂತ್ರಿ ಪದವಿಗೆ ಮಾತ್ರ ರಾಜೀನಾಮೆ ನೀಡಿದ್ದೇನೆ ಅಷ್ಟೇ. ನಾನು ಸರ್ಕಾರದ ಭಾಗವಾಗಿ ಇರುವುದಿಲ್ಲ. ಆದರೆ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲವಿರುತ್ತದೆ. ಬರಲಿರುವ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನೂ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಎನ್.ಮಹೇಶ್, ತಮಗೆ ರಾಜೀನಾಮೆ ಹಿಂಪಡೆಯುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿಯವರು ಹೇಳುವ ಸಾಧ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.