ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಸಾಂಸ್ಕೃತಿಕ ಹಾಗೂ ಯುವ ಸಮುದಾಯದ ಬಹು ನಿರೀಕ್ಷಿತ ಕಾರ್ಯಕ್ರಮವೂ ಆಗಿರುವ ಯುವ ದಸರಾ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಾಳೆ (ಅ.12) ಸಂಜೆಯಿಂದ ಆರಂಭವಾಗಿ ಅ.17ರವರೆಗೆ ನಡೆಯಲಿದೆ ಎಂದು ದಸರಾ ಉಪ ವಿಶೇಷಾಧಿಕಾರಿಗಳೂ ಆದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ತಿಳಿಸಿದ್ದಾರೆ.
ಯುವ ದಸರಾ ನಡೆಯಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಸಾಲಿನ ಯುವ ದಸರಾ ಕಾರ್ಯಕ್ರಮವನ್ನು ನಾಳೆ ಸಂಜೆ 6.30ಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ರಾತ್ರಿ 10.30ರವರೆಗೆ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಮತ್ತು ತಂಡ ದಿಂದ ಕನ್ನಡ ಸಂಗೀತ ರಸಸಂಜೆ ಕಾರ್ಯಕ್ರಮವಿದೆ ಎಂದು ಹೇಳಿದರು.
ಅ.13ರಂದು ರಾತ್ರಿ 7.24ರಿಂದ 8.10ರ ವರೆಗೆ ಲಗೋರಿ ತಂಡದಿಂದ ಸಂಗೀತ ಕಾರ್ಯಕ್ರಮ, 8.10 ರಿಂದ 8.30ರವರೆಗೆ ಬೀದರ್‍ನ ರೇಖಾ ಸವದಿ ಮತ್ತು ತಂಡ ದಿಂದ ಸಂಗೀತ ಕಾರ್ಯಕ್ರಮ.ರಾತ್ರಿ 8.30 ರಿಂದ 10.30ರವರೆಗೆ ಬಾಲಿವುಡ್‍ನ ಹಿನ್ನೆಲೆ ಗಾಯಕರಾದ ಬಾದ್ ಶಾ, ಆಸ್ತಗಿಲ್ ಮತ್ತು ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ. ಅ.14ರಂದು ರಾತ್ರಿ 7.18ರಿಂದ 7.38ರವರೆಗೆ ಎಂ.ಜೆ-5 ತಂಡದಿಂದ ನೃತ್ಯ ಪ್ರದರ್ಶನ. 7.38 ರಿಂದ 8 ಗಂಟೆ ವರೆಗೆ ಕೆಎಸ್‍ಐಸಿ ಪ್ರಾಯೋಜಿತ ಫ್ಯಾಷನ್ ಶೋ, ರಾತ್ರಿ 8ಗಂಟೆಯಿಂದ 10.30ರ ವರೆಗೆ ಚಲನಚಿತ್ರ ಹಿನ್ನೆಲೆ ಗಾಯಕರಾದ ಅರ್ಮಾನ್ ಮಲ್ಲಿಕ್ ಮತ್ತು ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸ್ಯಾಂಡಲ್‍ವುಡ್ ನೈಟ್ಸ್: ಅ.15ರ ರಾತ್ರಿ 7.10 ರಿಂದ 10.30ರವರೆಗೆ ಕನ್ನಡ ಚಿತ್ರರಂಗದ ತಾರೆಯರಾದ ರಚಿತಾ ರಾಮ್, ಹರಿಪ್ರಿಯಾ, ಸಾನ್ವಿ ಶ್ರೀವಾಸ್ತವ್, ಶುಭ ಪೂಂಜಾ, ರಾಗಿಣಿ ದ್ವಿವೇದಿ, ವೈಷ್ಣವಿ, ದೀಪಿಕಾ ದಾಸ್ ಅವರುಗಳಿಂದ ಸ್ಯಾಂಡಲ್‍ವುಡ್ ನೈಟ್ಸ್ ಮನರಂಜನಾ ಕಾರ್ಯಕ್ರಮ. ಇದಕ್ಕೂ ಮುನ್ನ 7 ರಿಂದ 7.10ರವರೆಗೆ ನೃತ್ಯ ವಿಹಾರ್ ಫ್ಯಾಷನ್ ತಂಡದಿಂದ ಫ್ಯಾಷನ್ ಶೋ ನಡೆಯಲಿದೆ.
ಅ.16ರ ರಾತ್ರಿ 7.12ರಿಂದ 7.30ರವರೆಗೆ ಆಪ್ತಮಿತ್ರ ಖ್ಯಾತಿಯ ವಿದ್ವಾನ್ ಶ್ರೀಧರ್ ಜೈನ್ ಮತ್ತು ತಂಡದಿಂದ ನೃತ್ಯ ವೈಭವ, ರಾತ್ರಿ 8ರಿಂದ 9ಗಂಟೆವರೆಗೆ ಖ್ಯಾತ ಸಂಗೀತಗಾರ ನವೀನ್ ಸಜ್ಜು ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಹಾಗೂ ರಾತ್ರಿ 9 ರಿಂದ 10.30ರವರೆಗೆ ಕೋಕ್ ಸ್ಟುಡಿಯೋ ಪ್ರಾಯೋಜಿತ ಶೆರ್ಲಿ ಸೇಟಿಯ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮವಿದೆ.
ಅ.17ರ ರಾತ್ರಿ 7.50 ರಿಂದ 8.20ರವರೆಗೆ ಕನ್ನಡ ಚಲನಚಿತ್ರ ನಿರ್ದೇಶಕ ಮತ್ತು ನೃತ್ಯ ಸಂಯೋಜಕರಾದ ಎ.ಹರ್ಷ ಮತ್ತು ತಂಡದಿಂದ ಮನರಂಜನಾ ಕಾರ್ಯಕ್ರಮ. 8.20ರಿಂದ 8.30ರವರೆಗೆ ನಟ ಯಶ್ ಮನರಂಜನಾ ಕಾರ್ಯಕ್ರಮ. ರಾತ್ರಿ 8.30 ರಿಂದ 10.30ರವರೆಗೆ ಚಲನಚಿತ್ರ ಹಿನ್ನೆಲೆ ಗಾಯಕಿ ನೇಹ ಕಕ್ಕರ್ ಮತ್ತು ತಂಡದ ಸಂಗೀತ ಕಾರ್ಯಕ್ರಮ. ಯುವ ದಸರಾ ಕಾರ್ಯಕ್ರಮದಲ್ಲಿ 30 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಅತಿ ಗಣ್ಯರು, ಗಣ್ಯರು, ಪ್ರಾಯೋಜಕರು ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಪಾಸ್ ನೀಡಲಾಗುತ್ತಿದೆ ಎಂದರು.
3.60 ಕೋಟಿ ಬಜೆಟ್: ಯುವ ಸಂಭ್ರಮ ಹಾಗೂ ಯುವ ದಸರಾಗೆ 3.60 ಕೋಟಿ ಭಾರೀ ಬಜೆಟ್ ನಿಗದಿಪಡಿಸಲಾಗಿತ್ತು. ಇದುವರೆಗೆ 40 ಲಕ್ಷ ರೂ. ಬಿಡುಗಡೆಯಾಗಿದೆ. ಹೆಸರಾಂತ ಗಾಯಕರಾದ ವಿಜಯಪ್ರಕಾಶ್, ರಾಗಿಣಿ ದ್ವಿವೇದಿ ಹಾಗೂ ನೃತ್ಯ ಸಂಯೋಜಕ ಎ.ಹರ್ಷ ಮತ್ತು ತಂಡ ನಡೆಸಿಕೊಡಲಿರುವ 3 ದಿನಗಳ ಕಾರ್ಯಕ್ರಮಕ್ಕೆ 60 ಲಕ್ಷ ರೂ. ಸಂಭಾವನೆ ನೀಡಲಾಗುತ್ತಿದೆ. ಅರ್ಮಾನ್ ಮಲ್ಲಿಕ್ ಮತ್ತು ನೇಹ ಕಕ್ಕರ್ ತಂಡಕ್ಕೆ ತಲಾ 35 ಲಕ್ಷ ರೂ. ಜೊತೆಗೆ ಜಿಎಸ್‍ಟಿ, ಬಾದ್‍ಶಾ ಮತ್ತು ಆಸ್ತಗಿಲ್ ಮತ್ತು ತಂಡದವರಿಗೆ 30 ಲಕ್ಷ ರೂ. ಸಂಭಾವನೆಯೊಂದಿಗೆ ಜಿಎಸ್‍ಟಿ ಸೇರಲಿದೆ ಎಂದು ತಿಳಿಸಿದರು.