ರೂ.999ರಲ್ಲಿ ಮೈಸೂರು-ಬೆಂಗಳೂರು ವಿಮಾನ ಪ್ರಯಾಣ
ಮೈಸೂರು, ಮೈಸೂರು ದಸರಾ

ರೂ.999ರಲ್ಲಿ ಮೈಸೂರು-ಬೆಂಗಳೂರು ವಿಮಾನ ಪ್ರಯಾಣ

October 12, 2018

ಮೈಸೂರು:  ನಾಡಹಬ್ಬ ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ `ಆಕಾಶ ಅಂಬಾರಿ’ ವಿಮಾನ ಸೇವೆ ಆರಂಭಿಸಿದ್ದು, ಗುರುವಾರ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಈ ವಿಮಾನದಲ್ಲಿ ಪ್ರಯಾಣಿಸುವುದರೊಂದಿಗೆ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ `ಆಕಾಶ ಅಂಬಾರಿ’ಯಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ, ಬೆಂಗಳೂರಿನಿಂದ ಮೈಸೂರು ಹಾಗೂ ಮೈಸೂರಿನಿಂದ ಬೆಂಗಳೂರಿಗೆ ವಿಶೇಷ ವಿಮಾನ ಸೇವೆಯನ್ನು ನಿನ್ನೆಯಿಂದ ಆರಂಭಿಸಿದ್ದು, ಇಂದು ನಾನೂ ಪ್ರಯಾಣ ಮಾಡುತ್ತಿದ್ದೇನೆ. ಪ್ರವಾಸಿಗರು ಕೇವಲ 999 ರೂ.ಗಳನ್ನು ಪಾವತಿಸಿದರೆ ಸಾಕು. ವ್ಯತ್ಯಾಸದ ಹಣವನ್ನು ಪ್ರವಾಸೋದ್ಯಮ ಇಲಾಖೆ ಭರಿಸಲಿದೆ ಎಂದು ತಿಳಿಸಿದರು.

ಮೊದಲ 10 ಜನರಿಗೆ ಮಾತ್ರ ರಿಯಾಯಿತಿ ದರದ ಪ್ರಯಾಣಕ್ಕೆ ಅವಕಾಶ ನೀಡುತ್ತಿದ್ದಾರೆ. ಅವರೂ ಸಹ 999 ರೂ.ಗಳ ಜೊತೆಗೆ ಜಿಎಸ್‍ಟಿ ಪಾವತಿಸಬೇಕಿದೆ. ಇನ್ನುಳಿದ ಪ್ರಯಾಣಿಕರು 2 ಸಾವಿರಕ್ಕೂ ಹೆಚ್ಚು ಭರಿಸಬೇಕಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಆಕಾಶ ಅಂಬಾರಿ’ಯಲ್ಲಿ ಪ್ರಯಾಣಿಸುವವರು 999 ರೂ. ಪಾವತಿಸಿದರೆ ಸಾಕು. ಉಳಿದ ದರವನ್ನು ಪ್ರವಾಸೋದ್ಯಮ ಇಲಾಖೆ ವಿಮಾನಯಾನಕ್ಕೆ ಭರಿಸುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ಗೊಂದಲ ಪರಿಹರಿಸುತ್ತೇನೆ. ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು 650ಕ್ಕೂ ಹೆಚ್ಚು ಮಂದಿ ಟಿಕೆಟ್ ಬುಕ್ಕಿಂಗ್ ಮಾಡಿದ್ದಾರೆ. ದಸರಾ ಮುಗಿಯುವವರೆಗೂ ಸೇವೆ ಮುಂದುವರಿಯಲಿದ್ದು, ಪ್ರವಾಸಿಗರು ಸದುಪಯೋಗಪಡಿಸಿಕೊಳ್ಳಬೇಕು. ಸೇವೆಯನ್ನು ದಸರಾ ನಂತರವೂ ಮುಂದುವರಿಸುವ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ ಎಂದು ಸ್ಪಷ್ಟಪಡಿಸಿದರು.

999 ರೂ.ಗೆ ಹಾರಾಟ: ಪ್ರವಾಸೋದ್ಯಮ ಇಲಾಖೆ ಕಲ್ಪಿಸಿರುವ `ಆಕಾಶ ಅಂಬಾರಿ’ ವಿಶೇಷ ವಿಮಾನ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೇವಲ 999ರೂ.ಗಳಿಗೆ ಬೆಂಗಳೂರಿನಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಅವಕಾಶವನ್ನು ಬಳಸಿಕೊಳ್ಳಲು ಉತ್ಸುಕರಾಗಿದ್ದಾರೆ. ಪ್ರವಾಸಿಗರು ಹಾಗೂ ಉದ್ಯಮಿಗಳಷ್ಟೇ ಅಲ್ಲದೆ ಸಾಮಾನ್ಯರೂ ಕಡಿಮೆ ದರದಲ್ಲಿ ವಿಮಾನದಲ್ಲಿ ಹಾರಾಟ ನಡೆಸಲು ಮುಂದೆ ಬರುತ್ತಿದ್ದಾರೆ. ಒಟ್ಟು 72 ಆಸನ ಸಾಮಥ್ರ್ಯದ ವಿಮಾನ ಹಾರಾಟ ನಡೆಸುತ್ತಿದ್ದು, ಆರಂಭದ ದಿನವಾದ ಬುಧವಾರ ಎರಡೂ ಕಡೆಯಿಂದ 60ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ. ಇಂದೂ ಸಹ ಬೆಂಗಳೂರಿನಿಂದ ಸುಮಾರು 34 ಮಂದಿ ಮೈಸೂರಿಗೆ ಬಂದಿದ್ದು, ಮೈಸೂರಿನಿಂದ ಸಾ.ರಾ.ಮಹೇಶ್ ಸೇರಿದಂತೆ 30 ಮಂದಿ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.

ಜಂಬೂ ಸವಾರಿ ನಡೆಯುವ ಅ.19ರವರೆಗೂ `ಆಕಾಶ ಅಂಬಾರಿ’ ಹಾರಾಟ ನಡೆಸಲಿದೆ. ದಿನನಿತ್ಯ ಬೆಂಗಳೂರಿನಿಂದ ಮಧ್ಯಾಹ್ನ 2.10ಕ್ಕೆ ಹೊರಟು, 3.00ಕ್ಕೆ ಮೈಸೂರು ತಲುಪಲಿದೆ. ನಂತರ 3.30ಕ್ಕೆ ಮೈಸೂರಿನಿಂದ ಹೊರಟು, ಸಂಜೆ 4.10ಕ್ಕೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಎಲ್ಲಾ ಆನ್‍ಲೈನ್ ಜಾಲಗಳಿಂದ ಟಿಕೆಟ್ ಬುಕ್ಕಿಂಗ್‍ಗೆ ಅವಕಾಶವಿದ್ದು, ಈಗಾಗಲೇ 675 ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ಪ್ರವಾಸೋಧ್ಯಮ ಇಲಾಖೆ ಉಪನಿರ್ದೇಶಕ ಎಚ್.ಪಿ.ಜನಾರ್ಧನ್ ತಿಳಿಸಿದ್ದಾರೆ. ಈ ಹಿಂದೆಯೂ ದಸರಾ ಮಹೋತ್ಸವದ ಸಂದರ್ಭದಲ್ಲಿ `ಆಕಾಶ ಅಂಬಾರಿ’ ವಿಮಾನ ಸೇವೆಯಡಿ, ಬೆಂಗಳೂರು-ಮೈಸೂರು ನಡುವೆ 7 ಆಸನ ಸಾಮಥ್ರ್ಯದ ಲಘು ವಿಮಾನ ಹಾರಾಟ ನಡೆಸಿತ್ತು. ಆಗ 4 ಸಾವಿರ ಪ್ರಯಾಣ ದರ ನಿಗಧಿ ಮಾಡಲಾಗಿತ್ತು. ಈ ಬಾರಿ ಅತ್ಯಂತ ಕಡಿಮೆ ದರದಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಮಧ್ಯಮ ಹಾಗೂ ಬಡ ಜನರ ಕನಸನ್ನು  ನನಸಾಗಿಸಿಕೊಳ್ಳುವ ಸುವರ್ಣಾವಕಾಶ ದೊರೆತಂತಾಗಿದೆ.

Translate »