ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ದಸರಾ ಮಹೋತ್ಸವದ ಹಿನ್ನೆಲೆ ಯಲ್ಲಿ ಏರ್ಪಡಿಸಿದ್ದ ಪಾರಂಪರಿಕ ನಡಿಗೆಯಲ್ಲಿ ಸಾರ್ವಜನಿಕರಲ್ಲದೆ ಪ್ರವಾಸಿಗರು, ವಿದ್ಯಾರ್ಥಿಗಳು ನೂರಾರು ಮಂದಿ ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು, ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸುವುದರೊಂದಿಗೆ ಕುತೂಹಲದಿಂದ ಅವುಗಳ ಇತಿಹಾಸ ಕೇಳಿ ಅರಿತರು.
ನಾಡಹಬ್ಬದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪಾರಂಪರಿಕ ನಡಿಗೆಯನ್ನು ಇಂದು ಬೆಳಿಗ್ಗೆ ಪುರಭವನದ ಆವರಣದಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಸಿರು ನಿಶಾನೆ ತೋರಿದರು. ಶರ್ಟ್, ಪಂಚೆ ಧರಿಸಿ ಆಗಮಿ ಸಿದ್ದ ಸಚಿವರು ಪಾರಂಪರಿಕ ನಡಿಗೆಯಲ್ಲಿ ಪುರಭವನದಿಂದ ಅರಮನೆಯವರೆಗೆ ತಾವೂ ಪಾಲ್ಗೊಂಡು ಪಾರಂಪರಿಕ ನಡಿಗೆ ಯಲ್ಲಿದ್ದವರಿಗೆ ಪ್ರೋತ್ಸಾಹ ನೀಡಿದರು.
ಪಾರಂಪರಿಕ ನಡಿಗೆಯಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಗೆ ಧರಿಸಿ ಬರುವಂತೆ ಸೂಚನೆ ನೀಡಿದ್ದರಿಂದ ಇಂದು ಎಲ್ಲರೂ ಹಾಗೇ ಬಂದಿ ದ್ರು. ಇವರಲ್ಲಿ 15 ವರ್ಷದವರಿಂದ 80 ವರ್ಷದವರು ಪಾಲ್ಗೊಂಡು ಗಮನ ಸೆಳೆದರು. ಮಹಿಳೆಯರು ಸೀರೆ ತೊಟ್ಟಿದ್ದರೆ, ಪುರುಷರು ಪಂಚೆ ಶರ್ಟ್ ಧರಿಸಿದ ಪಾರಂಪರಿಕ ನಡಿಗೆಯಲ್ಲಿ ಪಾಲ್ಗೊಂಡರು. ಶಾರದಾ ವಿಲಾಸ ಶಿಕ್ಷಣ ಸಂಸ್ಥೆ, ಸಿದ್ಧಾರ್ಥ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೆಎಸ್ಎಸ್ ಮಹಿಳಾ ಕಾಲೇ ಜಿನ ವಿದ್ಯಾರ್ಥಿಗಳ ಜತೆಗೆ ಪ್ರಾಧ್ಯಾಪಕರು, ವೃದ್ಧರು ಭಾಗವಹಿಸಿದ್ದರು.
ಪಾರಂಪರಿಕ ಕಟ್ಟಡಗಳ ವೀಕ್ಷಣೆ: ಪುರಭವನದಿಂದ ಆರಂಭವಾದ ಪಾರಂಪರಿಕ ನಡಿಗೆ ದೊಡ್ಡ ಗಡಿಯಾರ, ಚಾಮರಾಜ ಒಡೆಯರ್ ವೃತ್ತ, ಅರಮನೆ, ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವ ರಾಜ ಮಾರುಕಟ್ಟೆ, ಕೆ.ಆರ್. ಆಸ್ಪತ್ರೆ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ (ಕಾವೇರಿ ಎಂಪೋರಿಯಂ), ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಮೈಸೂರು ಮೆಡಿಕಲ್ ಕಾಲೇಜು ಕಟ್ಟಡಗಳ ಬಗೆಗೆ ವಿವರಣೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎಲ್. ನಾಗೇಂದ್ರ, ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಕೆ. ವೆಂಕಟೇಶ್, ಉಪನಿರ್ದೇಶಕಿ ನಿರ್ಮಲ ಮಠಪತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.