ಮಹನೀಯರ ಆದರ್ಶ ಅನುಸರಿಸಿ ಸಮಾಜದ ಏಳಿಗೆಗೆ  ಶ್ರಮಿಸಲು ವಿದ್ಯಾರ್ಥಿಗಳಿಗೆ ಸಚಿವ ಜಿ.ಟಿ.ದೇವೇಗೌಡ ಕರೆ
ಮೈಸೂರು

ಮಹನೀಯರ ಆದರ್ಶ ಅನುಸರಿಸಿ ಸಮಾಜದ ಏಳಿಗೆಗೆ  ಶ್ರಮಿಸಲು ವಿದ್ಯಾರ್ಥಿಗಳಿಗೆ ಸಚಿವ ಜಿ.ಟಿ.ದೇವೇಗೌಡ ಕರೆ

September 15, 2018

ಮೈಸೂರು:  ದೇಶಕ್ಕೆ ಅನೇಕ ಮಹನೀಯರು ತಮ್ಮದೇ ಆದ ಕೊಡುಗೆ ನೀಡಿದ್ದು, ಅವರ ಆದರ್ಶವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಸಮಾನತೆ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಯಡಿ ಸಮಾಜದ ಏಳ್ಗೆಗೆ ಶ್ರಮಿಸುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ಕರೆ ನೀಡಿದರು.

ಮೈಸೂರಿನ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಎನ್‍ಎಸ್‍ಎಸ್, ರೆಡ್‍ಕ್ರಾಸ್, ಉದ್ಯೋಗ ಮಾಹಿತಿ ಕೋಶ ಇನ್ನಿತರ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ತಮ್ಮ ವ್ಯಾಸಂಗದ ಸಂದರ್ಭದಲ್ಲಿ ಜಾತಿ, ಧರ್ಮದ ಯಾವುದೇ ಬೇಧ ಇರುವುದಿಲ್ಲ. ಹೀಗಿದ್ದರೂ ಕೆಲವರು ಉದ್ಯೋಗಕ್ಕೆ ಸೇರಿದ ಬಳಿಕ ಜಾತಿ, ಧರ್ಮದ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಇದು ಸರಿಯಲ್ಲ. ಮಹಾತ್ಮ ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್ ಇನ್ನಿತರ ಮಹ ನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿರುವ ಭ್ರಷ್ಟಾಚಾರ, ಜಾತೀಯತೆಯನ್ನು ಹೋಗ ಲಾಡಿಸಿ, ಸಮಾನ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅವರ ಕುಟುಂಬದ ಸಮಸ್ಯೆಗಳು, ಕಷ್ಟ ಏನೆಂಬುದು ತಿಳಿದಿದೆ. ಈ ಕಾರಣದಿಂದ ಅನೇಕರು ಉತ್ತಮ ಗುರು ಮತ್ತು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಶಿಕ್ಷಣ ಪಡೆಯುತ್ತಾರೆ. ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುವ ಗ್ರಾಮೀಣ ಭಾಗದ ತಂದೆ-ತಾಯಿ ಉತ್ತಮ ಶಿಕ್ಷಣ ಕೊಡಿಸಲು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ಪದವಿ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಜವಾಬ್ದಾರಿ ಹೆಚ್ಚಾಗಿದ್ದು, ಇವರಿಗೆ ಬದುಕಿನ ಶಿಕ್ಷಣ ಅಗತ್ಯವಿದೆ. ದೇವರ ರೂಪದಲ್ಲಿ ತಂದೆ-ತಾಯಿಯನ್ನು ಕಾಣುವ ನೀವು ಅವರ ಆಸೆಗೆ ಅನುಗುಣವಾಗಿ ನಡೆದು, ಜೀವನದಲ್ಲಿ ಉನ್ನತಿ ಸಾಧಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇ ಶಕಿ ಡಾ.ಭಾಗೀರಥಿ ಬಾಯಿ ಕದಂ, ಪಾಲಿಕೆ ಸದಸ್ಯೆ ಸುನಂದಾ ಪಾಲನೇತ್ರ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ಎಚ್.ವೈ. ಶ್ರೀಷಕುಮಾರ್, ಕಾಲೇಜು ಪ್ರಾಂಶುಪಾಲ ಡಾ.ಎಸ್.ಬಿ.ಅಪ್ಪಾಜಿಗೌಡ, ಪ್ರೊ.ಟಿ. ನಾಗವೇಣಿ ಇನ್ನಿತರರು ಉಪಸ್ಥಿತರಿದ್ದರು.

Translate »