ರಜೆ ರಹಿತ `ಸೈನಿಕ ದಿನ’ ಆಚರಣೆಗೆ ಮಾಜಿ ಯೋಧರ ಒತ್ತಾಯ
ಮೈಸೂರು

ರಜೆ ರಹಿತ `ಸೈನಿಕ ದಿನ’ ಆಚರಣೆಗೆ ಮಾಜಿ ಯೋಧರ ಒತ್ತಾಯ

September 15, 2018

ಮೈಸೂರು: ಧೈರ್ಯ, ಸಾಹಸದಿಂದ ದೇಶ ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ವೀರ ಸೇನಾನಿಗಳಿಗೆ ಗೌರವ ಸೂಚಕವಾಗಿ ಸರ್ಕಾರ ಪ್ರತೀ ವರ್ಷ ಸೈನಿಕ ದಿನವನ್ನು ಆಚರಿಸಬೇಕು ಎಂದು ಮಾಜಿ ಯೋಧರು ಇಂದಿಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಿವೃತ್ತ ಸೈನಿಕ ಕೆ.ಆರ್. ನಗರ ತಾಲೂಕಿನ ಚಿಕ್ಕವಡ್ಡರ ಗುಡಿಯ ಸಿ.ಎಂ.ಶ್ರೀಧರ್, ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ದೇಶ ರಕ್ಷಿಸುತ್ತಾರೆ. ಆದರೆ ಅವರು ತವರಿಗೆ ಮರಳಿದಾಗ ಸ್ವಾಗತ ಸಂದರ್ಭದಲ್ಲಿ ಅಧಿಕಾರಿಗಳಿಂದ ಅಗೌರವ ನಡೆದ ಪ್ರಕರಣಗಳಿವೆ. ಇದು ಸೈನಿಕರಿಗೆ ನೀಡುವ ಗೌರವವೇ? ಎಂದು ಪ್ರಶ್ನಿಸಿದರು.

ಬೇರೆಲ್ಲಾ ದಿನಾಚರಣೆಗಳನ್ನು ಆಚರಿಸುವ ಸರ್ಕಾರ ಸೈನಿಕರ ಸೇವೆಯನ್ನು ಪರಿಗಣಿಸಿ ವರ್ಷದ ಯಾವುದಾದರೂ ಒಂದು ದಿನವನ್ನು ಗುರ್ತಿಸಿ, ಅಂದು ‘ಸೈನಿಕರ ದಿನ’ ಆಚರಿಸಬೇಕು. ರಜೆ ರಹಿತ ಸೈನಿಕರ ದಿನಾಚರಣೆಯಂದು ಶಾಲಾ, ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಾರ್ಯಕ್ರಮ ನಡೆಸಿ, ಸೈನಿಕರ ಗುಣಗಾನ ಮಾಡುವ ಮೂಲಕ ಅವರ ಸೇವೆಯನ್ನು ಸ್ಮರಿಸುವ, ಗೌರವಿಸುವ ಕೆಲಸ ಆಗಬೇಕು. ಈ ಮೂಲಕ ಇಂದಿನ ಯುವ ಪೀಳಿಗೆಗೆ ಸೈನಿಕನಾಗಲು ಬೇಕಿರುವುದು ಶಿಕ್ಷಣವಲ್ಲ. ಅವರಿಗೆ ಮಾನಸಿಕ ಹಾಗೂ ದೈಹಿಕ ಶಕ್ತಿ, ದೇಶ ಭಕ್ತಿ, ಮುಖ್ಯ ಎಂಬುದನ್ನು ತಿಳಿಸಿ ಕೊಡುವ ಮೂಲಕ ಇನ್ನಷ್ಟು ಮಂದಿ ದೇಶಕ್ಕಾಗಿ ರಕ್ಷಣೆಗೆ ಬರುವಂತೆ ಪ್ರೇರೇಪಿಸುವ ಕೆಲಸ ಆಗಬೆಕು ಎಂದು ಆಗ್ರಹಿಸಿದರು.

ಈ ಕುರಿತಂತೆ ತಾವು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು, ಅದರ ಪ್ರತಿಯನ್ನು ಪ್ರಧಾನಮಂತ್ರಿ, ಕೇಂದ್ರ ರಕ್ಷಣಾ ಸಚಿವ, ರಾಜ್ಯಪಾಲ, ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಕಳುಹಿಸಿರುವುದಾಗಿಯೂ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಿವೃತ್ತ ಸೈನಿಕರಾದ ಕೆ.ಪಿ.ದಿವಾಕರ್, ನಂದೀಶ್, ನಂಜುಂಡಸ್ವಾಮಿ, ಸೋಮಣ್ಣ, ಪ್ರಸನ್ನ, ಸಿ.ಪಿ.ಸಾಗರ್ ಉಪಸ್ಥಿತರಿದ್ದರು.

Translate »