ಮಡಿಕೇರಿ: ಮಡಿಕೇರಿಯಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿ ಗಳು ಎಂದಿನಂತೆ ಕಾರ್ಯನಿರ್ವಹಿಸಿ ದರೂ, ಖಾಸಗಿ ಬಸ್‍ಗಳು ಸಂಚಾರ ಸ್ಥಗಿತ ಗೊಳಿಸಿದ್ದ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಹಾಜರಾತಿ ಕಡಿಮೆಯಾಗಿತ್ತು. ಬ್ಯಾಂಕ್ ಗಳು ಬಾಗಿಲು ತೆರದಿದ್ದವಾದರೂ, ಬಂದ್ ಸಂಘಟಕರ ಮನವಿ ಮೇರೆಗೆ ಬಳಿಕ ಮುಚ್ಚಲ್ಪ ಟ್ಟವು. ಶಾಲೆಗಳು ಸೋಮವಾರ ಆರಂಭವಾ ಗಬೇಕಿತ್ತಾದರೂ, ಬಸ್‍ಗಳ ಕೊರತೆ ಯಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ ಸಿ ‘ಅಘೋಷಿತ ರಜೆ’ಯಂತೆ ಕಂಡು ಬಂತು.
ಮಡಿಕೇರಿ ನಗರದಲ್ಲಿ ಆಟೋ ಹಾಗೂ ಇತರ ಖಾಸಗಿ ವಾಹನಗಳ ಓಡಾಟ ಇತ್ತಾ ದರೂ, ಸಂಚಾರ ವಿರಳವಾಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳು ಎಂದಿನಂತೆ ಸಂಚರಿಸಿದವು. ಮಡಿಕೇರಿ ಮಾರುಕಟ್ಟೆ ಯಲ್ಲಿ ಕೋಳಿ, ಕುರಿ ಮಾಂಸದ ಅಂಗಡಿ ಗಳು, ಮೀನು ಮಾರಾಟ ಮಳಿಗೆಗಳು ತೆರದಿದ್ದವು. ಮಹದೇವಪೇಟೆ ಹಾಗೂ ಕಾಲೇಜು ರಸ್ತೆಯಲ್ಲಿ ಕೆಲವು ಅಂಗಡಿಗಳು ತೆರೆದಿದ್ದವು. ಜನರಲ್ ತಿಮ್ಮಯ್ಯ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ, ಆ ಮಾರ್ಗವಾಗಿ ಬರುವ ವಾಹನಗಳನ್ನು ತಡೆಯುವ ಪ್ರಯತ್ನ ನಡೆಸಿದರಾದರೂ, ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ವಾಹನಗಳನ್ನು ತಡೆಯುವ ವಿಚಾರದಲ್ಲಿ ನಗರ ಠಾಣೆ ಎಸ್‍ಐ ಎಂ. ಷಣ್ಮುಗಂ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ರಾಬಿನ್ ದೇವಯ್ಯ ಅವರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ ಮಧ್ಯಪ್ರವೇಶಿಸಿ ಪರಿಸ್ಥಿತಿ ಕೈಮೀರುವುದನ್ನು ನಿಯಂತ್ರಿಸಿದರು. ಒಂದು ಹಂತದಲ್ಲಿ ವಾಹನಗಳನ್ನು ತಡೆ ಯುವ ವಿಚಾರದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಹರಿಹಾಯ್ದ ಪ್ರಸಂಗವೂ ನಡೆಯಿತು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣ ಹಾಗೂ ಕಾರ್ಯಕರ್ತರು ನಗರದೆಲ್ಲೆಡೆ ಸಂಚರಿಸಿ ತೆರೆದಿದ್ದ ಅಂಗಡಿ ಗಳನ್ನು ಮುಚ್ಚಿಸಿದರು. ಮಡಿಕೇರಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬಂದ್ ಬಿಸಿ ಹೆಚ್ಚಿ ಸುವ ಪ್ರಯತ್ನ ಮಾಡಿದರಾದರೂ ಪ್ರವಾಸಿ ಗರಿಗೆ ಯಾವುದೇ ಅಡ್ಡಿ, ಆತಂಕಗಳು ಎದುರಾಗಲಿಲ್ಲ. ವಿದ್ಯಾರ್ಥಿಗಳ ಬೇಸಿಗೆ ರಜೆ ಮುಗಿಯುವ ಹಂತದಲ್ಲಿ ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಬಂದ್ ದಿನವಾದ ಸೋಮವಾರ ಕೂಡ ಮಂಜಿನ ನಗರಿ ಮಡಿಕೇರಿಗೆ ಪ್ರವಾಸಿಗರ ದಂಡೇ ಹರಿದು ಬಂತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರವಾಸಿಗರ ವಾಹನಗಳನ್ನು ಬಿಜೆಪಿ ಕಾರ್ಯ ಕರ್ತರು ತಡೆಯುವ ಪ್ರಯತ್ನ ಮಾಡಿದರಾ ದರೂ ಪೊಲೀಸರು ಕರ್ತವ್ಯ ಪ್ರಜ್ಞೆ ಮೆರೆದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರಮುಖ ಪ್ರವಾಸಿ ತಾಣಗಳಾದ ರಾಜಾಸೀಟು ಉದ್ಯಾನವನ, ಅಬ್ಬಿಫಾಲ್ಸ್ ಸೇರಿದಂತೆ ವಿವಿಧೆಡೆ ಪ್ರವಾಸಿ ಗರು ನಿರಾತಂಕವಾಗಿ ದಿನ ಕಳೆದರು.
ಪ್ರತಿಭಟನೆಯ ಸಂದರ್ಭ ಬಿಜೆಪಿ ಮಡಿ ಕೇರಿ ತಾಲೂಕು ಅಧ್ಯಕ್ಷ ಟಿ.ಎ.ಕಿಶೋರ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ಸಿ. ಸತೀಶ್‍ಕುಮಾರ್, ಮಡಿಕೇರಿ ನಗರಾಧ್ಯಕ್ಷ ಮಹೇಶ್ ಜೈನಿ, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಪ್ರಮುಖರಾದ ಬೆಲ್ಲು ಸೋಮಯ್ಯ, ರವಿ ಬಸಪ್ಪ, ಬಿ.ಕೆ. ಅರುಣ್‍ಕುಮಾರ್, ಬಿ.ಕೆ. ಜಗದೀಶ್, ಮೊಹಂತಿ ಗಣೇಶ್, ಅನಿತಾಪೂವಯ್ಯ, ರೀಟಾ ಮುತ್ತಣ್ಣ, ಪಿ.ಡಿ.ಪೊನ್ನಪ್ಪ, ಕೆ.ಎಸ್.ರಮೇಶ್, ಉನ್ನಿಕೃಷ್ಣ, ಸವಿತಾ ರಾಕೇಶ್, ಲಕ್ಷ್ಮಿ, ಮಿನಾಝ್ ಪ್ರವೀಣ್, ಮನುಮಂಜುನಾಥ್, ಭಾರತೀ ರಮೇಶ್ ಮತ್ತಿತರರು ಹಾಜರಿದ್ದರು. ಡಿವೈಎಸ್ಪಿ ಸುಂದರ್ ರಾಜ್ ಅವರ ನೇತೃತ್ವದ ಪೊಲೀಸ್ ಸಿಬ್ಬಂದಿ ಗಳ ತಂಡ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ವಿಯಾದರು.
ಗೋಣ ಕೊಪ್ಪಲು ವರದಿ: ಪಟ್ಟಣದಲ್ಲಿ ಕರ್ನಾಟಕ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವರ್ತಕರು ಮಳಿಗೆಗಳಿಗೆ ಬೀಗಹಾಕಿ ಬೆಂಬಲ ಸೂಚಿಸಿದರು. ಖಾಸಗಿ ಬಸ್ಸುಗಳು ಓಡಾಡದ ಕಾರಣ ಜನರ ಓಡಾಟ ಕಡಿಮೆಯಿತ್ತು. ಸಾಮಾನ್ಯವಾಗಿ ಬಂದ್ ಆಚರಣೆ ಸಂದರ್ಭ ಮುಚ್ಚಿರುತ್ತಿದ್ದ ಮದ್ಯದಂಗಡಿಗಳು ಎಂದಿನಂತೆ ತೆರೆದಿತ್ತು. ಕೆಎಸ್‍ಆರ್‍ಟಿಸಿ ಬಸ್ಸು ಸಂಚಾರಕ್ಕೆ ಯಾವುದೇ ಅಡಚಣೆಗಳು ಉಂಟಾಗಲಿಲ್ಲ. ಖಾಸಗಿ ಬಸ್ಸುಗಳಿಗೆ ಪರ್ಯಾಯವಾಗಿ ಪ್ರಯಾಣ ಕರು ಆಟೋ ರಿಕ್ಷಾಗಳನ್ನು ಅವಲಂಭಿಸಿದ್ದರು.
ಪೊನ್ನಂಪೇಟೆಯಲ್ಲಿ ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಮಳಿಗೆಗಳು ಸಂಪೂರ್ಣ ಮುಚ್ಚಲ್ಪಟ್ಟಿತ್ತು. ಆಟೋ ರಿಕ್ಷಾ ಗಳು ಕೂಡ ಸಂಚರಿಸದೆ ಪಟ್ಟಣದಲ್ಲಿ ಯಾವುದೇ ಚಟುವಟಿಕೆಗಳು ಕಂಡುಬರಲಿಲ್ಲ.
ಬಾಳೆಲೆಯಲ್ಲಿ ಸಂತೆ ದಿನವಾದ ಕಾರಣ ಕೆಲವು ಅಂಗಡಿ ಮಾಲೀಕರು ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಜನರ ಓಡಾಟ ಕಡಿಮೆಯಿದ್ದ ಕಾರಣ ವ್ಯಾಪಾರ ನಡೆಯಲಿಲ್ಲ.
ಕುಟ್ಟ, ಅಮ್ಮತ್ತಿ ಹಾಗೂ ಶ್ರೀಮಂಗಲ ಪಟ್ಟಣಗಳಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಾಲಿಬೆಟ್ಟದಲ್ಲಿ ವ್ಯಾಪಾರಸ್ಥರು ಬೆಳಗ್ಗೆ 10 ಗಂಟೆಯವರೆಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡು ನಂತರ ಮಳಿಗೆಗಳನ್ನು ಮುಚ್ಚಿ ಬಂದ್‍ಗೆ ಕೈಜೋಡಿಸಿದರು. ಬಹುತೇಕ ಪಟ್ಟಣಗಳಲ್ಲಿ ಖಾಸಗಿ ಬಸ್ಸು ಸಂಚಾರವಿಲ್ಲದೆ ಪ್ರಯಾಣ ಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಯಿತು.