ರೈತರ ಪೂರ್ಣ ಸಾಲಮನ್ನಾ ಮಾಡಿಸಿ: ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಶಾಸಕ ಸಿ.ಟಿ.ರವಿ ಆಗ್ರಹ
ಹಾಸನ

ರೈತರ ಪೂರ್ಣ ಸಾಲಮನ್ನಾ ಮಾಡಿಸಿ: ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಶಾಸಕ ಸಿ.ಟಿ.ರವಿ ಆಗ್ರಹ

June 2, 2018

ಹಾಸನ: ಯಾವ ಷರತ್ತೂ ಹಾಕದೆ ರೈತರ ಎಲ್ಲಾ ರೀತಿಯ ಪೂರ್ಣ ಪ್ರಮಾಣದ ಸಾಲಮನ್ನಾ ಮಾಡುವಂತೆ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಬಿಜೆಪಿ ಮುಖಂಡ ಹಾಗೂ ಶಾಸಕ ಸಿ.ಟಿ.ರವಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ರೈತರ ಎಲ್ಲಾ ಬಗೆಯ ಸಾಲ ಮನ್ನಾ ಮಾಡುವು ದಾಗಿ ಹೇಳಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರೈತರ ಸಾಲ ಮನ್ನಾ ವಿಚಾರ ವಾಗಿ ಕರೆದ ಸಭೆಯಲ್ಲಿ ಸಾಲಮನ್ನಾ ಬಗ್ಗೆ ಜಿಲ್ಲಾಧಿಕಾರಿಯಿಂದ ವರದಿ ಪಡೆಯುವು ದಾಗಿ ಹೇಳಿ 15 ದಿನ ಕಾಲಾವಕಾಶ ಕೇಳುವ ಮೂಲಕ ಒಂದು ರೀತಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಚುನಾವಣೆ ವೇಳೆ ಹೇಳಿದ ಮಾತು ತಪ್ಪಿ ಈಗ ಸಬೂಬು ಹೇಳುತ್ತಿದ್ದು, ಸಾಲ ಮನ್ನಾ ವಿಷಯದಲ್ಲಿ ಯಾವ ಷರತ್ತ್ತೂ ಹಾಕದೆ ಎಲ್ಲಾ ರೀತಿಯ ರೈತರ ಸಾಲಮನ್ನಾ ಮಾಡ ಬೇಕು ಎಂದು ಒತ್ತಾಯಿಸಿದರು.

ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲಾ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು. ಖಾಸಗಿ, ರಾಷ್ಟ್ರೀಕೃತ ಬ್ಯಾಂಕ್ಗಳು, ಲೇವಾ ದೇವಿದಾರರಿಂದ ರೈತರು ಪಡೆದ ಸಾಲವನ್ನೂ ಮನ್ನಾ ಮಾಡುವುದಾಗಿ ಘೋಷಣೆ ಮಾಡಿ ದ್ದರು. ಆದರೆ ಈಗ ಸಾಲಮನ್ನಾ ಸಂಬಂಧ ಸಿಎಂ ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟತೆ ಇಲ್ಲ. ಸಣ್ಣ ಮತ್ತು ಮಧ್ಯಮ ಹಂತದ ಬೆಳೆಗಾರರ ಸಾಲವನ್ನು ಎರಡು ಹಂತದಲ್ಲಿ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ದ್ದಾಗ ಸಹಕಾರ ಬ್ಯಾಂಕ್‍ಗಳಲ್ಲಿ ರೈತರ 50 ಸಾವಿರ ರೂ. ಸಾಲಮನ್ನಾ ಮಾಡಿ ದ್ದಾರೆ. ಇದರಿಂದ ಸಣ್ಣ ಮತ್ತು ಮಧ್ಯಮ ಬೆಳೆಗಾರರ ಬಹುಪಾಲು ಸಾಲಮನ್ನಾ ಆಗಿದೆ. ಸಿಎಂ ಕುಮಾರಸ್ವಾಮಿ ಅವರು ಈಗ ಅದಕ್ಕೆ ಒಗ್ಗರಣೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಗಟ್ಟಲು ಬಿತ್ತನೆಗೂ ಮೊದಲೇ ಬೆಲೆ ನಿಗದಿ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿ ರುವುದು ಸ್ವಾಗತಾರ್ಹ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕೆಂದು ಆನ್‍ಲೈನ್ ಮಾರುಕಟ್ಟೆ ಪದ್ಧತಿ ಜಾರಿಗೆ ತರಲಾಗಿದೆ. ಆದರೆ ಪೇಮೆಂಟ್ ಆಗುತ್ತಿಲ್ಲ. ಜತೆಗೆ ರೈತ ರಿಂದ ಯಾವುದೇ ಕಮಿಷನ್ ಪಡೆಯದಂತೆ ಎಪಿಎಂಸಿ ಕಾಯ್ದೆಯಡಿ ನಿಯಮ ಇದ್ದರೂ ಪ್ರಸ್ತುತ ಎಪಿಎಂಸಿಗಳಲ್ಲಿ ರೈತರಿಂದ ಶೇ.10ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ನಾನು ಕರ್ನಾಟಕ ಜನತೆಯ ಮುಲಾಜಿ ನಲ್ಲಿಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಹೇಳುವುದು ಸರಿಯಲ್ಲ. ಅಧಿಕಾರ ವಹಿಸಿಕೊಂಡ ಮೇಲೆ ಅವರು ಆರೂವರೆ ಕೋಟಿ ಜನರ ಮುಖ್ಯಮಂತ್ರಿ. ಜನರ ತೆರಿಗೆ ಹಣದ ವಾರಸುದಾರ ಎಂದು ಕುಟುಕಿದರು. ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ 5 ಸ್ಥಾನ ಗೆಲ್ಲಲಿದೆ. ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಇನ್ನೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಒಂದರಲ್ಲಿ ಮಾತ್ರ ಗೆಲುವು ಸಾಧ್ಯವಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ, ಬಿಜೆಪಿ ಹಿರಿಯ ಮುಖಂಡ ಕಮಲ್ ಕುಮಾರ್, ನವೀಲೆ ಅಣ್ಣಪ್ಪ, ನಗರಸಭೆ ಸದಸ್ಯ ಹೆಚ್.ಎಂ.ಸುರೇಶ್ ಕುಮಾರ್ ಹಾಗೂ ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ವೇಣುಗೋಪಾಲ್ ಇತರರಿದ್ದರು.

Translate »