ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶಾಸಕ ಲಿಂಗೇಶ್ ಚಿಂತನೆ
ಬೇಲೂರು: ‘ಬೇಲೂರು ಪಟ್ಟಣದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯರಸ್ತೆ ಅಗಲೀಕರಣದ ಜೊತೆಗೆ ಹೊಳೆ ಬೀದಿಯನ್ನು ಅಭಿವೃದ್ಧಿಪಡಿಸಿ ಏಕಮುಖ ರಸ್ತೆಯನ್ನಾಗಿ ಮಾರ್ಪಡಿಸಲಾಗುವುದು’ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆಯಿಂದ ನೀಡಲಾದ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ದೇಶ, ವಿದೇಶದಿಂದ ಸಾವಿರಾರು ಪ್ರವಾಸಿಗರು ಬೇಲೂರಿಗೆ ಬರುತ್ತಾರೆ. ವಾಹನ ದಟ್ಟಣೆ ಹೆಚ್ಚಾಗಿದೆ. ಇದರಿಂದ ಅನುಕೂಲಕರ ಸಂಚಾರಕ್ಕೆ ತೊಂದರೆ ಆಗಿದೆ. ಇದನ್ನು ಮನಗಂಡು ಮುಖ್ಯರಸ್ತೆ ಅಗಲೀಕರಣ ಮಾಡುವ ಉದ್ದೇಶದ ಜೊತೆಗೆ ಹಾಸನ ರಸ್ತೆಯಿಂದ ಹೊಳೆಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಏಕಮುಖ ಸಂಚಾರವ ನ್ನಾಗಿ ಬದಲಾವಣೆ ಮಾಡಲಾಗುವುದು. ಈ ಸಂಬಂಧ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಸರ್ವೇ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ಪಟ್ಟಣದಲ್ಲಿ ಮುಖ್ಯರಸ್ತೆ ಒಂದು ಮಾತ್ರವಿದ್ದು ವಾಹನದಟ್ಟಣೆ ಹೆಚ್ಚಾಗಿದೆ. ಬಹುತೇಕ ಬ್ಯಾಂಕ್‍ಗಳು, ಕಚೇರಿಗಳು ಈ ರಸ್ತೆಯಲ್ಲಿವೆ. ಹೆಚ್ಚಿನ ವ್ಯಾಪಾರ ವಹಿವಾಟು ರಸ್ತೆಯಲ್ಲಿಯೆ ನಡೆಯುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮುಖ್ಯರಸ್ತೆ ಅಗಲೀಕರಣದ ವೇಳೆ ಭೂಸ್ವಾಧೀನಕ್ಕೆ ಯೋಜನೆ ಸಿದ್ಧಪಡಿಸಿದ ನಂತರ ಕೆಲಸ ಆರಂಭಿಸಲಾಗುವುದು ಎಂದರು.
ವಿಶ್ವವಿಖ್ಯಾತ ಶ್ರೀಚನ್ನಕೇಶವಸ್ವಾಮಿ ದೇವಾಲಯ ರಸ್ತೆಯನ್ನು ರಾಜಬೀದಿಯನ್ನಾಗಿ ಮಾರ್ಪಡಿಸುವ ಉದ್ದೇಶ ವಿದೆ. ಶ್ರೀಚನ್ನಕೇಶವಸ್ವಾಮಿ ದೇವಾಲಯಕ್ಕೆ 900ವರ್ಷ ತುಂಬಿದ ಹಿನ್ನೆಲೆಯಲ್ಲಿ ಹೇಗೆ ಆಚರಣೆ ಮಾಡಬೇಕೆಂಬ ಕುರಿತು ಪುರಸಭೆ ಸದಸ್ಯರ ಸಭೆ ಕರೆದು ಚರ್ಚಿಸಲಾಗು ವುದು ಎಂದರು. ಯಗಚಿ ಜಲಾಶಯದ ಬಳಿ ಕೆಆರ್‍ಎಸ್ ಮಾದರಿ ಉದ್ಯಾನವನ ನಿರ್ಮಾಣ ಮಾಡಲು ಸಚಿವ ಹೆಚ್.ಡಿ.ರೇವಣ್ಣ ಅವರು ಉತ್ಸುಕರಾಗಿದ್ದಾರೆ. ಈ ಬಗ್ಗೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೇಲೂರು ಬಸ್ ನಿಲ್ದಾಣ ಕಿರಿದಾಗಿದ್ದು ಇಲ್ಲಿ ಬಸ್ ಡಿಪೋ ಇರುವುದರಿಂದ ಬಸ್‍ಗಳ ನಿಲುಗಡೆ ಸಂಖ್ಯೆ ಹೆಚ್ಚಾಗಿರುವ ಕಾರಣ ತೊಂದರೆ ಆಗುತ್ತಿದೆ. ಅದಕ್ಕಾಗಿ ನಿಲ್ದಾಣಕ್ಕೆ ಹೊಂದಿ ಕೊಂಡಂತಿ ರುವ ಲೋಕೋಪಯೋಗಿ ಇಲಾಖೆ ಸ್ಥಳವನ್ನು ಪಡೆದು ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.
ನಿವೇಶನ ಕೋರಿ 4 ಸಾವಿರ ಅರ್ಜಿಗಳು ಪುರಸಭೆಗೆ ಬಂದಿವೆ. ಅಗತ್ಯ ಭೂಮಿ ಇಲ್ಲದೆ ತೊಂದರೆಯಾಗುತ್ತಿದ್ದು ಭೂಮಿ ವಶಪಡಿಸಿಕೊಳ್ಳುವ ಬಗ್ಗೆ ಕ್ರಮಕೈಗೊಳ್ಳುವುದಲ್ಲದೆ ಎರಡು ಹೊಸ ಬಡಾವಣೆಯನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಅರುಣ್ ಕುಮಾರ್, ಸದಸ್ಯರಾದ ಚನ್ನಕೇಶವ, ಶ್ರೀನಿಧಿ, ಜಿ. ಶಾಂತಕುಮಾರ್, ಸಿಒ ಮಂಜುನಾಥ್ ಇದ್ದರು.