ಪುರಸಭೆ ವಿರುದ್ಧ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ
ಹಾಸನ

ಪುರಸಭೆ ವಿರುದ್ಧ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

July 20, 2018

ಚನ್ನರಾಯಪಟ್ಟಣ: ರಸ್ತೆ ಬದಿ ವ್ಯಾಪಾರಸ್ಥರಿಗೆ ಕಾಲಾವಕಾಶ ನೀಡದೆ ಪುರಸಭೆ ಆಡಳಿತ ಮಂಡಳಿ ಏಕಾಏಕಿ ಗೂಡಂಗಡಿ ತೆರವುಗೊಳಿಸಿದನ್ನು ವಿರೋಧಿಸಿ ಬೀದಿಬದಿ ವ್ಯಾಪಾರಿಗಳು ಪಟ್ಟಣ ದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಮಿನಿ ವಿಧಾನ ಸೌಧದ ಮುಂಭಾಗ ಸಮಾವೇಶಗೊಂಡ ಬೀದಿ ಬದಿ ವ್ಯಾಪಾರಿಗಳು ಪುರಸಭೆಯ ಕ್ರಮಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಬೀದಿಬದಿ ವ್ಯಾಪಾರಸ್ಥರಿಗೆ ತಿಳಿವಳಿಕೆ ಪತ್ರ ನೀಡಿಲ್ಲ. ಸಭೆ ನಡೆಸಿ ಗೂಡಂಗಡಿ ತೆರವು ಮಾಡಲು ಕಾಲಾವಕಾಶವನ್ನು ನೀಡಿಲ್ಲ. ಏಕಾಏಕಿ ತೆರವು ಕಾರ್ಯಾಚರಣೆ ಮಾಡಿದ್ದರಿಂದ ನಮಗೆ ನಷ್ಟ ಉಂಟಾಗಿದೆ. ತಿಂಗಳು ಕಾಲಾವಕಾಶ ನೀಡಿದರೆ ಮಾತ್ರ ರಸ್ತೆ ಬದಿಯ ಗೂಡಂಗಡಿ ತೆರವು ಮಾಡು ತ್ತೇವೆ ಎಂದು ಮನವಿ ಮಾಡಿದರು.

ಹಣವಂತರು ರಾಷ್ಟ್ರೀಯ ಹೆದ್ದಾರಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿ ಕೊಂಡಿದ್ದಾರೆ. ಅವರ ಕಟ್ಟಡ ತೆರವು ಮಾಡಿಸದೆ ಬಡವರು ಜೀವನ ನಡೆಸಲು ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಮೊದಲು ರಸ್ತೆ ಕಾಮಗಾರಿಗೆ ತೊಂದರೆ ನೀಡುವ ಅಕ್ರಮ ಕಟ್ಟಡದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಪುರಸಭಾ ಮುಖ್ಯಾ ಧಿಕಾರಿ ಬಸವರಾಜು ಮಾತನಾಡಿ, ಪುರಸಭೆ ವತಿಯಿಂದ ಚರ್ಮಕುಟೀರ ನಡೆಸುವ ವರಿಗೆ ಮಾತ್ರ ತಾತ್ಕಾಲಿಕವಾಗಿ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಅವರನ್ನು ಹೊರತುಪಡಿಸಿ ಉಳಿದವರನ್ನು ತೆರವು ಗೊಳಿಸಬೇಕು ಎಂದು ಸೂಚನೆ ನೀಡಿದರು.

ಭುವನೇಶ್ವರಿ ತರಕಾರಿ ಮಾರುಕಟ್ಟೆ ತೆರವು ಮಾಡಿ 65 ಲಕ್ಷ ರೂ. ವೆಚ್ಚದಡಿ 2 ತಿಂಗಳೊಳಗೆ ಮಾರುಕಟ್ಟೆ ನಿರ್ಮಿಸಿ ನಿಮಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ, ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆ ಕೈಬಿಟ್ಟರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸೋಮಶೇಖರ್, ಪುರಸಭಾಧ್ಯಕ್ಷ ಸಿ.ಕೆ.ಗೋಪಾಲಕೃಷ್ಣ ಇದ್ದರು.

Translate »